ಬೆಂಗಳೂರು: ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಶಿವರಾಮ್ (84) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೆದುಳಿನಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಕೋಮಾ ಸ್ಥಿತಿಗೆ ಜಾರಿದ್ದ ಶಿವರಾಮ್ ಅವರಿಗೆ ನಗರದ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಿದುಳಿನಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಆದರೆ ವಯಸ್ಸಿನ ಹಿನ್ನೆಲೆಯಲ್ಲಿ ಅವರ ದೇಹ ಶಸ್ತ್ರ ಚಿಕಿತ್ಸೆ ಹೊಂದಿಕೊಳ್ಳುವ ಸಾಮರ್ಥ್ಯವಿಲ್ಲದ ಕಾರಣ ಮೆದುಳಿನ ಊತ ಕಡಿಮೆಯಾಗಲು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು.
ಮೊದಲು ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶಿವರಾಮ್ ಅವರು, ಸಹೋದರ ರಾಮನಾಥನ್ ಅವರೊಂದಿಗೆ ಕನ್ನಡ, ಹಿಂದಿ ಚಿತ್ರಗಳನ್ನೂ ಇವರು ನಿರ್ಮಿಸಿದ್ದರು. ನಾಗರಹಾವು, ಹಾಲುಜೇನು, ಶರಪಂಜರ, ಡ್ರೈವರ್ ಹನುಮಂತು, ಶುಭಮಂಗಳ, ಹೊಂಬಿಸಿಲು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.