ದುಬೈ: ದುಬೈ ಉದ್ಯಮಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ಸತತ ಏಳನೇ ವರ್ಷದ ರಕ್ತದಾನ ಶಿಬಿರ ದುಬೈನ ಫಾರ್ಚೂನ್ ಏಟ್ರಿಯಂ ಹೋಟೆಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರವೀಣ್ ಶೆಟ್ಟಿಯವರು ತಮ್ಮ ಹೆತ್ತವರಾದ ನಾರಾಯಣ ಶೆಟ್ಟಿ ಮತ್ತು ಸರೋಜಿನಿಯವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪ್ರತೀ ವರ್ಷ ಫಾರ್ಚೂನ್ ಗ್ರೂಪ್ ಹೋಟೆಲ್ ಸಿಬ್ಬಂದಿ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಸುತ್ತಿದ್ದು, ರಕ್ತದಾನದ ಮಹತ್ವದ ಕುರಿತು ಸತತವಾಗಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ನಿರತರಾಗಿದ್ದಾರೆ.

ರಕ್ತದಾನ ಶಿಬಿರದ ನೇತೃತ್ವದ ವಹಿಸಿ, ಸ್ವಯಂ ರಕ್ತದಾನ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ರಕ್ತದಾನ ಮಾಡಿದರೆ 24 ಗಂಟೆಯೊಳಗೆ ನಮ್ಮ ದೇಹ ರಕ್ತವನ್ನು ಪುನರುತ್ಪತ್ತಿ ಮಾಡುತ್ತದೆ. ಆದರೆ ಜೀವ ಹೋದರೆ ಮತ್ತೆ ವಾಪಸ್ ಬರುವುದಿಲ್ಲ ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು, ಜೀವದಾನಿ ಆಗಬೇಕು. ಕೊರೊನಾ ಸಂದರ್ಭದಲ್ಲಿ ಇದೀಗ ಪ್ರಪಂಚದಾದ್ಯಂತ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಇದ್ದು, ಕೊರೊನಾ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ನಮ್ಮ ಶಿಬಿರ ಆಯೋಜಿಸಿದ್ದು, ಇದರ ಯಶಸ್ವಿ ಆಯೋಜನೆಗೆ ಕಾರಣಕರ್ತರಾದ ಫಾರ್ಚೂನ್ ಹೋಟೆಲ್ ಸಿಬ್ಬಂದಿ ಸಂದೇಶ್, ರಾಕೇಶ್ ಶೆಟ್ಟಿ ಮತ್ತು ಪಾಲ್ಗೊಂಡ ಎಲ್ಲಾ ರಕ್ತದಾನಿಗಳಿಗೆ ಹಾಗೂ ದುಬೈ ಹೆಲ್ತ್ ಅಥೋರಿಟಿಗೆ ಮನಃಪೂರ್ವಕ ಧನ್ಯವಾದ ತಿಳಿಸಿದರು.

ರಕ್ತದಾನ ಶಿಬಿರದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಹಲವು ಸದಸ್ಯರು, ಕನ್ನಡಿಗಾಸ್ ಫೆಡರೇಷನ್ ನ ಸಂಚಾಲಕರಾದ ಹಿದಾಯತ್ ಅಡ್ಡೂರ್, ಯಶವಂತ್ ಕರ್ಕೇರಾ, ಇಮ್ರಾನ್ ಖಾನ್ ಎರ್ಮಾಳ್ ಪಾಲ್ಗೊಂಡಿದ್ದು, ಯುಎಇಯಲ್ಲಿ ರಕ್ತದಾನ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಬಾಲಕೃಷ್ಣ ರವರು ಶಿಬಿರ ಸುಸೂತ್ರವಾಗಿ ನಡೆಯಲು ಸಹಕರಿಸಿದರು.

The post ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ರಕ್ತದಾನ ಶಿಬಿರ appeared first on Public TV.

Source: publictv.in

Source link