ಫಿಲಿಪಿನ್ಸ್​​ನಲ್ಲಿ ಭೀಕರ ಚಂಡಮಾರುತದಿಂದ ಭೂಕುಸಿತ, ಪ್ರವಾಹ; 58 ಮಂದಿ ಸಾವು, ಬಿಡುವಿಲ್ಲದೆ ನಡೆಯುತ್ತಿದೆ ರಕ್ಷಣಾ ಕಾರ್ಯಾಚರಣೆ | Landslide flood in Philippine Death toll reach to 58


ಫಿಲಿಪಿನ್ಸ್​​ನಲ್ಲಿ ಭೀಕರ ಚಂಡಮಾರುತದಿಂದ  ಭೂಕುಸಿತ, ಪ್ರವಾಹ; 58 ಮಂದಿ ಸಾವು, ಬಿಡುವಿಲ್ಲದೆ ನಡೆಯುತ್ತಿದೆ ರಕ್ಷಣಾ ಕಾರ್ಯಾಚರಣೆ

ಫಿಲಿಪಿನ್ಸ್ ಪ್ರವಾಹ (ಪಿಟಿಐ ಚಿತ್ರ)

ಬೇಬೇ: ಫಿಲಿಪಿನ್ಸ್​​ನಲ್ಲಿ ಭಯಂಕರ ಪ್ರವಾಹ ಪರಿಸ್ಥಿತಿ, ಭೂಕುಸಿತ ಉಂಟಾಗುತ್ತಿದೆ. ಈ ಪಾಕೃತಿಕ ವಿಕೋಪದಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ರಕ್ಷಣಾ ಸಿಬ್ಬಂದಿ ಯುದ್ಧೋಪಾದಿಯಲ್ಲಿ  ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು ಮಣ್ಣಿನಡಿ ಸಿಲುಕಿ ಜನರು ಉಸಿರು ನಿಲ್ಲಿಸುತ್ತಿದ್ದಾರೆ. ಕೆಲವರು ಪರದಾಡುತ್ತಿದ್ದಾರೆ. ರಕ್ಷಣಾ ಸಿಬ್ಬಂದಿ ತಮ್ಮ ಬರಿ ಗೈಯಲ್ಲೇ  ಮಣ್ಣನ್ನು ಅಗೆದು, ಸಿಲುಕಿರುವ ಜನರನ್ನು ಹೊರತೆಗೆಯುತ್ತಿದ್ದಾರೆ.  ಇಲ್ಲಿ ಬೆಟ್ಟಗುಡ್ಡಗಳು ಕುಸಿಯುವ ಜತೆ, ಮಣ್ಣು, ಚಿಕ್ಕಚಿಕ್ಕ ಕಲ್ಲುಗಳ ಮಿಶ್ರಿತ ಮಳೆಯೂ ಬೀಳುತ್ತಿದೆ.  

ಉಷ್ಣವಲಯದ ಚಂಡಮಾರುತ ಮೇಗಿಯಿಂದ  ಭೂಕುಸಿತವುಂಟಾಗುತ್ತಿದ್ದು,ಈಗಾಗಲೇ ವಿಪತ್ತು ಪೀಡಿತ ದ್ವೀಪಸಮೂಹವಾದ ಫಿಲಿಪೈನ್ಸ್​ನಲ್ಲಿ ಮತ್ತಷ್ಟು ಹಾನಿಯನ್ನುಂಟು ಮಾಡಿದೆ. ಈ ಚಂಡಮಾರುತದ ವೇಗ ಪ್ರಾರಂಭದಲ್ಲಿ ಗಂಟೆಗೆ 65 ಕಿಮೀ ಇತ್ತು. ಬಳಿಕ ಇದು ಗಂಟೆಗೆ 85 ಕಿಮೀ ವೇಗದಲ್ಲಿಯೂ ಅಪ್ಪಳಿಸಿದೆ. ಈ ವರ್ಷ ಅಪ್ಪಳಿಸಿದ ಮೊದಲ ಉಷ್ಣವಲಯದ ಚಂಡಮಾರುತ ಇದಾಗಿದ್ದು, ಈ ದ್ವೀಪಸಮೂಹದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ಸುಮಾರು 20 ಇಂಥ ಚಂಡಮಾರುತಗಳು ಏಳುತ್ತವೆ. ಇನ್ನು ಮಣ್ಣಿನ ಕುಸಿತವುಂಟಾಗಿ ಅದು ಪ್ರವಾಹದ ರೂಪದಲ್ಲಿ ಹರಿದು ವಸತಿ ಪ್ರದೇಶ, ಕೃಷಿ ಭೂಮಿಗಳಿಗೆ ನುಗ್ಗುತ್ತಿದೆ. ಮಳೆಯೊಂದಿಗೆ ಮಣ್ಣಿನ ಕಣಗಳೇ ಸೋಕುತ್ತಿವೆ. ಇನ್ನೂ ಸುಮಾರು 27 ಜನರು ನಾಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರಾಂತ್ಯವಾದ ನಿಗ್ರೋಸ್ ಓರಿಯಂಟಲ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಾಗೇ ದಕ್ಷಿಣ ದ್ವೀಪವಾದ ಮಿಂಡಾನೋದಲ್ಲಿ 3 ಜನ ದುರ್ಮರಣಕ್ಕೀಡಾಗಿದ್ದಾರೆ ಎಂದು ಅಲ್ಲಿನ ವಿಪತ್ತು ಪರಿಹಾರ ಏಜೆನ್ಸಿ ತಿಳಿಸಿದೆ.  ಪಿಲಾರ್​ ಎಂಬ ಹಳ್ಳಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿ ಮಂಗಳವಾರ ಭೀಕರ ಭೂಕುಸಿತ ಉಂಟಾಗಿ ಹಲವು ಮನೆಗಳು ಸಮುದ್ರದ ಪಾಲಾಗಿವೆ. ಇಲ್ಲಿ ಸಿಲುಕಿರುವ 400 ಜನರನ್ನು ಬೋಟ್ ಮೂಲಕ ಕಾಪಾಡಲಾಗುತ್ತಿದೆ. ಇಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *