ದೇಶದ ರಕ್ಷಣೆಯ ವಿಚಾರದಲ್ಲಿ ಭಾರತ ದಿನೇ ದಿನೇ ಬಲಿಷ್ಠವಾಗ್ತಾನೆ ಇದೆ. ಅದರಲ್ಲೂ ಶಸ್ತ್ರಾಸ್ತ್ರಗಳ ವಿಷಯದಲ್ಲಂತೂ ಯಾರೂ ಅಂದುಕೊಂಡಿಲ್ಲದೇ ಇರುವಂತಹ ಸಾಧನೆ ಮಾಡಿದೆ. ಭಾರತ ಇಡ್ತಿರೋ ಒಂದೊಂದು ಹೆಜ್ಜೆಗಳೂ ವಿರೋಧಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡ್ತಿವೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಭಾರತ ತನ್ನನ್ನ ತಾನು ಪ್ರಬಲಮಾಡಿಕೊಳ್ತಿಲ್ಲ. ವ್ಯಾಪಾರವೇ ಆದ್ರೂ ಮಿತ್ರರಾಷ್ಟ್ರಗಳಿಗೆ ರಕ್ಷಣಾ ಕೋಟೆಯಾಗಿ ಬದಲಾಗ್ತಿದೆ. ವೆಪನ್ ಡೀಲಿಂಗ್ ವಿಚಾರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹೇ ಅನ್ನೋ ಕಥೆ ಭಾರತದ್ದು. ಯಾಕಂದ್ರೆ, ನಮ್ಮ ದೇಶದ ಮಗ್ಗಲಿನಲ್ಲಿಯೇ, ಚೀನಾ, ಪಾಕಿಸ್ತಾನ ಎಂಬ ಇಬ್ಬರು ಶತ್ರುಗಳಿರೋದು ಗೊತ್ತಿರೋ ವಿಚಾರ. ಯಾರು ಯಾವಾಗ ಚೆನ್ನಾಗಿದ್ದುಕೊಂಡೇ ಬೆನ್ನಿಗೆ ಇರೀತಾರೆ ಅನ್ನೋದೇ ಗೊತ್ತಾಗಲ್ಲ. ಒಬ್ಬ ಕಳ್ಳನಾದ್ರೆ, ಇನ್ನೊಬ್ಬ ಮಳ್ಳ. ಒಬ್ರು ನಸುಗುನ್ನಿ ಆಟವಾಡಿಕೊಂಡೇ ಗಡಿಯೊಳಗಿಂದ ಉಗ್ರರನ್ನ ಛೂ ಬಿಟ್ರೆ, ಮತ್ತೊಬ್ಬರು ದಶಕಗಳಿಂದ ವಿಸ್ತಾರವಾದದ ಮೊಂಡಾಟದಿಂದಲೇ ಭಾರತದ ಶತ್ರುತ್ವ ಕಟ್ಟಿಕೊಂಡಿರೋರು. ಆದ್ರೆ, ಭಾರತ ಮಾತ್ರ ಇಬ್ಬರ ಯಾವುದೇ ಆಟಾಟೋಪಗಳಿಗೆ ಜಗ್ಗದೇ ತಿರುಗೇಟುಗಳನ್ನ ಕೊಡುತ್ತಲೇ ಬಂದಿದೆ. ಇದು ಹಳೇ ಇಂಡಿಯಾ ಅಲ್ಲ, ಹೊಸ ಇಂಡಿಯಾ ಅನ್ನೋ ಸಂದೇಶವನ್ನ ಪ್ರತೀ ಹೆಜ್ಜೆಯಲ್ಲೂ ಖಡಕ್ ಆಗಿಯೇ ಸಾರುತ್ತಾ ಬಂದಿದೆ. ಭಾರತದ ಈ ತಾಕತ್ತಿಗೆ ಹಲವು ಕಾರಣಗಳಿಯೇ ಇದ್ದು, ಅದ್ರಲ್ಲಿ ಪ್ರಮುಖವಾದದ್ದು ಅಂದ್ರೆ, ನಮ್ಮಲ್ಲಿರುವಂತಹ ಅತ್ಯಾಧುನಿಕ ಶಸ್ತಾಸ್ತ್ರಗಳು.
ಶತ್ರುಗಳನ್ನ ಸಮರ್ಥವಾಗಿ ಎದುರಿಸಬೇಕು ಅಂದ್ರೆ, ಅವರಿಗೆ ಸರಿಸಮಾನವಾಗಿಯೇ ನಾವೂ ಶಸ್ತ್ರಾಸ್ತ್ರಗಳನ್ನ ಹೊಂದಿರಬೇಕು. ಕಾಲಕಾಲಕ್ಕೆ ಇರುವ ಶಸ್ತ್ರಾಸ್ತ್ರಗಳಿಗೆ ಅತ್ಯಾಧುನಿಕತೆಯ ಸ್ಪರ್ಶವನ್ನೂ ನೀಡಬೇಕು. ಕಳೆದ ಹಲವು ವರ್ಷಗಳಿಂದ ಆ ಕೆಲಸವನ್ನ ವಿಶ್ವವೇ ಮೆಚ್ಚುವ ಮಟ್ಟಿಗೆ ಮಾಡಿಕೊಂಡು ಬಂದಿದೆ ಅಂದ್ರೆ ತಪ್ಪಾಗಲ್ಲ.. ಭಾರತ ತನ್ನ ರಕ್ಷಣಾ ಬತ್ತಳಿಕೆಯಲ್ಲಿ ಹೊಸ ಹೊಸ ಅಸ್ತ್ರವನ್ನು ಸೇರ್ಪಡೆ ಮಾಡಿಕೊಳ್ಳುತ್ತಲೇ ಸಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಅಮೆರಿಕಾ, ರಷ್ಯಾದಿಂದ ಹೈ ಅಡ್ವಾನ್ಸ್ಡ್ ಫೈಟರ್ ಜೆಟ್ಗಳು, ಮಷಿನ್ ಗನ್ಗಳು, ಟ್ಯಾಂಕರ್ಗಳು, ಹೆಲಿಕಾಪ್ಟರ್ಗಳು, ಮಿಸೈಲ್ಗಳನ್ನು ಆಮದು ಮಾಡಿಕೊಳ್ಳುತ್ತಲೇ ಇದೆ. ಅವೆಲ್ಲಾ ಇಲ್ಲಿವರೆಗೆ ನಾವು ನೋಡಿರೋ ಭಾರತ. ಬಟ್ ಈಗ ಭಾರತ ಬದಲಾಗಿದೆ. ಪ್ರಬಲವಾದ ಶಸ್ತ್ರಾಸ್ತ್ರಗಳನ್ನ ನಾವೇ ತಯಾರಿಸುವ ಮಟ್ಟಿಗೆ ಬೆಳೆದಿದ್ದು, ಅದನ್ನ ಬೇರೆ ರಾಷ್ಟ್ರಗಳಿಗೂ ಮಾರಾಟ ಮಾಡುವಲ್ಲಿಯೂ ಹೆಜ್ಜೆ ಇಟ್ಟಿದ್ದೇವೆ.
ಇವೇ ನೋಡಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳು. ಶತ್ರುಗಳನ್ನು ಬೇಟೆಯಾಡುವಲ್ಲಿ ಇದು ಪಂಟರ್. ಎದುರಾಳಿ ಯಾವ ಬೀಲದಲ್ಲಿಯೇ ಅಡಗಿರಲಿ ಗುರಿ ಇಟ್ಟು ಹೊರಟರೆ ಸಾಕು ಶತ್ರುವಿನ ಕೋಟೆ ಫಿನಿಷ್. ವಿಶೇಷ ಅಂದ್ರೆ, ಇದು ಸೂಪರ್ ಪವರ್ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲ್ನಿಂದ ಆಮದು ಮಾಡಿಕೊಂಡಿರೋ ಕ್ಷಿಪಣಿ ಅಲ್ಲ. ಸ್ವತಃ ಭಾರತ ತನ್ನ ಮಿತ್ರ ರಾಷ್ಟ್ರವಾಗಿರೋ ರಷ್ಯಾ ಜೊತೆ ಸೇರಿ ನಿರ್ಮಿಸಿರೋ ಕ್ಷಿಪಣಿ.
ಫಿಲಿಪೈನ್ಸ್ಗೆ ಬ್ರಹ್ಮೋಸ್ ಕ್ಷಿಪಣಿ ರಫ್ತಿನ ಒಪ್ಪಂದ
ಇಲ್ಲಿಯವರೆಗೂ ಭಾರತ ವಿದೇಶಗಳಿಂದ ರಕ್ಷಣಾ ಸಾಮಗ್ರಿಗಳನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳೋದನ್ನು ನೋಡಿದ್ದೇವೆ. ಅದನ್ನು ನೋಡಿ ನಮ್ಮ ದೇಶದಲ್ಲಿಯೇ ಏಕೆ ಯುದ್ಧಾಸ್ತ್ರಗಳನ್ನು ತಯಾರಿಸಬಾರದು? ಅನ್ನೋ ಪ್ರಶ್ನೆಯೂ ಕಾಡಿದೆ. ಒಮ್ಮೆ ದೇಶದಲ್ಲಿಯೇ ಉತ್ಪಾದಿಸಿದ್ರೆ ದೇಶದ ಹಣ ಬೇರೆ ರಾಷ್ಟ್ರಗಳ ಖಜಾನೆ ಸೇರೋದು ನಿಲ್ಲುತ್ತೆ. ಜೊತೆಗೆ ಇಲ್ಲಿ ಉದ್ಯೋಗವೋ ಸೃಷ್ಟಿಯಾಗುತ್ತೆ ಅಂದುಕೊಳ್ಳುತ್ತಿದ್ವಿ. ಆದ್ರೆ, ಭಾರತ ಅದಾಗಲೇ ಆ ನಿಟ್ಟಿನಲ್ಲಿಹೆಜ್ಜೆಯನ್ನು ಇಟ್ಟಾಗಿದೆ. ಇದೇ ಕಾರಣಕ್ಕೆ ಸ್ವದೇಶ ನಿರ್ಮಾಣದ ವಸ್ತುಗಳಿಗೆ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ನಿರ್ಮಿಸಿದ್ವು. ಇದೀಗ ಆ ಕ್ಷಿಪಣಿಗಳನ್ನು ಖರೀದಿಸಲು ಫಿಲಿಪೈನ್ಸ್ ಮುಂದೆ ಬಂದಿದೆ. ಹೌದು, ಈ ಬಗ್ಗೆ ಮಾತುಕಥೆ ಅಂತಿಮ ಹಂತದಲ್ಲಿದ್ದು, ಮೂರು ಕ್ಷಿಪಣಿಗಳನ್ನು ಸುಮಾರು ₹2770 ಕೋಟಿಗೆ ಖರೀದಿಸಲಿದೆ. ಇದೊಂದು ಭಾರತದ ಚರಿತ್ರೆಯಲ್ಲಿಯೇ ಮರೆಯಲಾಗದ ಕ್ಷಣ. ಇಷ್ಟೊಂದು ದೊಡ್ಡ ಮತ್ತದ ಯುದ್ಧಾಸ್ತ್ರವನ್ನು ಭಾರತ ರಪ್ತು ಮಾಡಲು ಮುಂದಾಗಿರೋದು ಇದೇ ಮೊದಲು. ಇಲ್ಲಿಂದಲೇ ಭಾರತದ ರಕ್ಷಣಾ ಸಾಮಗ್ರಿಯ ರಫ್ತು ಆರಂಭ.
ಫಿಲಿಪೈನ್ಸ್ ಒಂದು ಸುಂದರ ದ್ವೀಪ ರಾಷ್ಟ್ರ. ನೋಡಲು ಪುಟ್ಟ ದೇಶವಾಗಿದ್ರೂ ಆರ್ಥಿಕವಾಗಿ ಹಾಗೂ ಪ್ರವಾಸೋದ್ಯಮದ ವಿಚಾರದಲ್ಲಿ ತಾವೇನೂ ಕಮ್ಮಿ ಇಲ್ಲ ಅನ್ನೋದನ್ನ ಇಡೀ ಜಗತ್ತಿಗೆ ಸಾರಿದ ರಾಷ್ಟ್ರ. ಇಲ್ಲಿಯ ಪ್ರವಾಸಿ ತಾಣಗಳು, ಗಗನಚುಂಬಿ ಕಟ್ಟಡಗಳು ಸದಾ ಪ್ರವಾಸಿಗರನ್ನ ಕೈ ಬೀಸಿ ಕರೀತಾನೆ ಇರ್ತವೆ. ಹಿಂದೊಮ್ಮೆ ಅಮೆರಿಕಾದ ನಿಯಂತ್ರಣದಲ್ಲಿದ್ದ ಈ ರಾಷ್ಟ್ರ ಸ್ವಾತಂತ್ರ್ಯ ಪಡೆದುಕೊಂಡಿದ್ದು ಸುಮಾರು 10 ಕೋಟಿ ಜನ ಇಲ್ಲಿ ವಾಸವಾಗಿದ್ದಾರೆ. ಈ ರಾಷ್ಟ್ರಕ್ಕೂ ವೈರಿಗಳ ಕಾಟವಿದೆ. ಅದು ಚೀನಾ ಬಿಟ್ಟರೆ ಬೇಱರು ಅಲ್ಲ.. ಮೇಲೆ ಮೇಲೆ ಫಿಲಿಪೈನ್ಸ್ ಜೊತೆಗೆ ಚೆನ್ನಾಗಿರುವಂತೆಯೇ ಇರುವ ಚೀನಾ ಯಾವಾಗ ಫಿಲಿಪೈನ್ಸ್ ಮೇಲೂ ಸಿಡಿದು ಬೀಳೋತ್ತೋ ಗೊತ್ತಾಗಲ್ಲ. ಅಲ್ಲಿಂದ ಕ್ಷಿಪಣಿಗಳು ಹಾರಿಬರೋತ್ತೋ ತಿಳಿದ್ದಿಲ್ಲ. ಇದೇ ಕಾರಣಕ್ಕೆ ಫಿಲಿಪೈನ್ಸ್ ಕ್ಷಿಪಣಿಗಳಿಗಾಗಿ ಹುಡುಕಾಡಿದೆ. ಆಗ ಅದಕ್ಕೆ ಕಡಿಮೆ ಹಣಕ್ಕೆ, ದಕ್ಷ ಕ್ಷಿಪಣಿಯಾಗಿ ಕಾಣಿಸಿದ್ದೇ ಬ್ರಹ್ಮೋಸ್.
ದಕ್ಷಿಣ ಏಷ್ಯಾ ಸಮುದ್ರಕ್ಕೆ ತಾಗಿಕೊಂಡಿರೋ ಫಿಲಿಪೈನ್ಸ್ನಲ್ಲಿ ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕಾ ಬಳಸಿದ ಯುದ್ಧ ನೌಕೆಗಳು, ಶಸ್ತ್ರಾಸ್ತ್ರಗಳು ಇನ್ನೂ ಇವೆ. ಅವುಗಳನ್ನು ಆಧುನೀಕರಣಗೊಳಿಸಿ, ಕಾಯಕಲ್ಪಗೊಳಿಸಲು ಫಿಲಿಪೈನ್ಸ್ ಸಜ್ಜಾಗಿದೆ. ಇದೇ ಕಾರಣಕ್ಕೆ ಮೂರು ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳುತ್ತಿದೆ. ಹಾಗೇ ಈ ಭಾರತ ಮತ್ತು ರಷ್ಯಾ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಗಳು ಖರೀದಿಗೆ ಮತ್ತೊಂದು ಕಾರಣವಿದೆ. ಅದೇ ಬ್ರಹ್ಮೋಸ್ನ ಸ್ಪೆಷಾಲಿಟಿಗಳು.
ಭಾರತದ ‘ಬ್ರಹ್ಮಾ’ಸ್ತ್ರ
ಬ್ರಹ್ಮೋಸ್ ಕ್ಷಿಪಣಿಯ ವಿಶೇಷತೆ ಏನು ಅನ್ನೋದನ್ನ ನೋಡೋದಾದ್ರೆ, ವೇಗವಾಗಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದೆ ಬ್ರಹ್ಮೋಸ್.. ಜಲಾಂತರ್ಗಾಮಿ, ನೌಕೆ, ವಿಮಾನದಿಂದ ಈ ಕ್ಷಿಪಣಿಯನ್ನ ಉಡಾವಣೆ ಮಾಡಬಹುದು. ಹಾಗೇ ಭೂಪ್ರದೇಶದಿಂದಲೂ ಇದನ್ನ ಉಡಾವಣೆ ಮಾಡಲು ಅನುಕೂಲವಿದೆ. ಸುಮಾರು 500 ಕಿಲೋ ಮೀಟರ್ ಗುರಿ ಇಟ್ಟು ಶತ್ರುಜಾಗಕ್ಕೆ ಕಳುಹಿಸಬಹುದು. ಸುಮಾರು 3000 ಕೆಜಿ ಅಣ್ವಸ್ತ್ರಗಳನ್ನು ಹೊತ್ತು ಶತ್ರುಕೋಟೆ ನಾಶಮಾಡಬಲ್ಲದು. ಇದನ್ನು ಮೊದಲ ಬಾರಿಗೆ 2001 ರಲ್ಲಿ ಪ್ರಯೋಗ ನಡೆಸಲಾಗಿತ್ತು.
ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ಬಿಕ್ಕಟ್ಟು
ಒಂದು ಹಂತದಲ್ಲಿ ಫಿಲಿಪೈನ್ಸ್ ಮತ್ತು ಚೀನಾ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು. ಆದ್ರೆ, ಹೇಳಿ ಕೇಳಿ ಚೀನಾ ನರಿ ಬುದ್ದಿ. ಅದು ಒಂದು ರಾಷ್ಟ್ರದ ಜೊತೆ ಒಳ್ಳೆಯ ಸಂಬಂಧ ಹೊಂದಿದೆ ಅಂದ್ರೆ ಅದಕ್ಕೆ ಏನೋ ಲಾಭವಿದೆ ಅಂತಲೇ ಅರ್ಥ. ಲಾಭವಿಲ್ಲದೇ ಯಾವ ವಿಚಾರದಲ್ಲಿಯೂ ಕೈ ಹಾಕುವ ರಾಷ್ಟ್ರವೇ ಅಲ್ಲ ಅದು. ಅದೇ ರೀತಿ ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿಯೂ ಫಿಲಿಪೈನ್ಸ್ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದೆ. ತಾನು ಹೇಳಿದಂತೆಯೇ ನಡೆಯಬೇಕು, ತನ್ನ ಹಡಗುಗಳೇ ಸಂಚರಿಸಬೇಕು ಅನ್ನೋದು ಚೀನಾ ವಾದ. ಆದ್ರೆ, ಈ ವಿಚಾರದಲ್ಲಿ ಫಿಲಿಪೈನ್ಸ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿಯೇ ಎರಡು ರಾಷ್ಟ್ರಗಳ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಫಿಲಿಪೈನ್ಸ್ ಭಾರತದಿಂದ ಮೂರು ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿರೋದು ಚೀನಾಗೆ ಆಘಾತ ಮೂಡಿಸಿದೆ. ಇನ್ನು ಇದರಿಂದ ಚೀನಾಗೆ ಭಾರತದಿಂದಲೂ ಸಂದೇಶ ರವಾನೆ ಆದಂತೆ ಆಗಿದೆ.
ಸದ್ಯಕ್ಕೆ ಫಿಲಿಪೈನ್ಸ್ ಜೊತೆ ಮೂರು ಕ್ಷಿಪಣಿಗಳಿಗಾಗಿ ಒಪ್ಪಂದವಾಗುತ್ತಿದೆ. ಅದರ ಮೊತ್ತ ಬರೋಬ್ಬರಿ 2770 ಕೋಟಿ . ಇನ್ನು ಇದೇ ಕ್ಷಿಪಣಿ ಖರೀದಿಗಾಗಿ ವಿಯೆಟ್ನಾಂ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಒಮನ್, ಚಿಲ್ಲಿ, ಮಲೇಷ್ಯಾ ರಾಷ್ಟ್ರಗಳು ಆಸಕ್ತಿ ತೋರಿಸಿವೆ. ಅದರಲ್ಲಿಯೂ ವಿಯೆಟ್ನಾಂ ಮತ್ತು ಇಂಡೋನೇಷ್ಯಾ ರಾಷ್ಟ್ರಗಳು ಮಾತುಕತೆಗೆ ಮುಂದಾಗುತ್ತಿವೆ. ಒಮ್ಮೆ ಆ ಡೀಲ್ಗಳು ನಡೆದ್ರೆ ಭಾರತ ರಕ್ಷಣಾ ಸಮಗ್ರಿಗಳನ್ನು ರಪ್ತು ಮಾಡುವಲ್ಲಿ ಮುಂಚೂಣಿಯ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿ ಬಿಡುತ್ತದೆ. ಆದಷ್ಟು ಬೇಗ ಆ ಕೆಲಸ ಆಗ್ಲಿ ಅನ್ನೋದೇ ನಮ್ಮ ಆಶಯ.