ಕೊರೊನಾ ರಣಭೀಕರತೆ ಮೆರೆಯುತ್ತಿರುವ ಇಂತಹ ಸಮಯದಲ್ಲಿ ಮನುಷ್ಯರಷ್ಟೇ ಅಲ್ಲ, ಮಾನವೀಯತೆಯೂ ಸತ್ತು ಹೋಗ್ತಾ ಇದೆ. ಮನುಷ್ಯ ಸಂಬಂಧಗಳಂತೂ ಲೆಕ್ಕಕ್ಕೇ ಇಲ್ಲ. ಇಂತಹ ಕಾಲದಲ್ಲಿ ಬೇರೆಯವರಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ಹೇಳ್ತೀವಿ.

ಕೊರೊನಾ ಅದೆಂತಹ ದುರಂತಗಳ ಸರಮಾಲೆಯನ್ನೇ ಸೃಷ್ಟಿಸುತ್ತಿವೆ ಅನ್ನೋದನ್ನು ನಿತ್ಯ ಹೇಳ್ತಾನೇ ಇದ್ದೇವೆ. ಸೋಂಕಿತರು ಹೆಚ್ಚಿದಂತೆ ಎಲ್ಲೆಲ್ಲಿ ಏನಾಗ್ತಾ ಇದೆ ಅನ್ನೋದನ್ನು ತೋರಿಸ್ತಾನೇ ಇದ್ದೇವೆ. ಆಸ್ಪತ್ರೆಗಳ ಮುಂದೆ ಟ್ರೀಟ್ಮೆಂಟ್ಗಾಗಿ ಅತ್ತು ಕರೆದು ಗೋಳಾಡುವ ಜನಸಾಮಾನ್ಯರು, ತಮ್ಮವರನ್ನು ಉಳಿಸಿಕೊಡಿ ಅಂತ ಗೋಗರೆಯುತ್ತಿರುವ ಘಟನೆಗಳಂತೂ ಲೆಕ್ಕವಿಲ್ಲದಷ್ಟು ನಡೀತಾ ಇವೆ. ತಮ್ಮವರನ್ನು ಉಳಿಸಿಕೊಳ್ಳಲಾಗದೆ ದಿಕ್ಕೇ ತೋಚದಂತಾಗಿರುವವರು ಕಡಿಮೆಯೇನಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ರಸ್ತೆಗಳಲ್ಲಿ ಕಾರು ನಿಲ್ಲಿಸಿಕೊಂಡು ಆಕ್ಸಿಜನ್ ತೆಗೆದುಕೊಳ್ತಾ ಇದಾರೆ. ಫುಟ್ ಪಾತ್ನಲ್ಲೇ ಕುಳಿತು ಟ್ರೀಟ್ಮೆಂಟ್ ತಗೋತಾ ಇದಾರೆ. ಎಷ್ಟು ಆಸ್ಪತ್ರೆಗಳು ಇದ್ರೂ ಸಾಲ್ತಾ ಇಲ್ಲ. ಎಷ್ಟು ಬೆಡ್ಗಳನ್ನು ಹಾಕಿದ್ರೂ ಬೇಡಿಕೆ ಕಡಿಮೆ ಆಗ್ತಾ ಇಲ್ಲ. ಎಷ್ಟು ವೆಂಟಿಲೇಟರ್ ಇದ್ರೂ ಒಂದೂ ಸಿಗ್ತಾ ಇಲ್ಲ. ಎಲ್ಲಾ ಕಡೆ ಫುಲ್ ಫುಲ್. ಹೀಗಾದ್ರೆ ಟ್ರೀಟ್ಮೆಂಟ್ ಕೊಡಿಸೋದಾದ್ರೂ ಎಲ್ಲಿಂದ. ಅಬ್ಬಾ..ಈ ಕೊರೊನಾ ಸಾಂಕ್ರಾಮಿಕ ಸೃಷ್ಟಿಸಿರುವ ಭೀಕರತೆ ನಿಜಕ್ಕೂ ಎಲ್ಲರನ್ನೂ ನಡುಗಿಸಿಬಿಟ್ಟಿದೆ.


ಆಸ್ಪತ್ರೆಗಾಗಿ ಅಲೆದಾಡಿ ಅಲೆದಾಡಿ, ಕೊನೆಗೂ ಹೇಗೋ ಬೆಡ್ ಗಿಟ್ಟಿಸಿಕೊಂಡು, ಕೊನೆಗೂ ಹೇಗೋ ಆಕ್ಸಿಜನ್ ಪಡೆದುಕೊಂಡು, ಕೊನೆಗೂ ಹೇಗೋ ಬದುಕಿದೆ ಅಂತ ಅಂದುಕೊಂಡರೆ ಅಷ್ಟರಲ್ಲೇ ಕೊರೊನಾ ಸಾವಿನ ಶಾಕ್ ಕೊಟ್ಟುಬಿಟ್ಟಿರುತ್ತೆ. ಅಲ್ಲಿಂದ ಚಿತಾಗಾರಕ್ಕೆ ಹೋದ್ರೆ ಅಲ್ಲೂ ಕ್ಯೂ. ದಿನಗಟ್ಟಲೇ ಕಾದು ಅಂತಿಮ ಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ. ಛೇ..ಎಂಥಾ ಪರಿಸ್ಥಿತಿ ಬಂದು ಬಿಡ್ತು . ಯಾರಿಗೆ ಸೋಂಕು ತಗುಲಿದರೂ ಸಂಬಂಧಿಗಳು ಬರ್ತಾ ಇಲ್ಲ, ಸ್ನೇಹಿತರು ಸಿಗಲ್ಲ, ಜೊತೆಗೆ ನಿಲ್ಲೋರು ಯಾರೂ ಇಲ್ಲ. ಈ ಕೊರೊನಾದ ಭಯ ಮನುಷ್ಯ ಸಂಬಂಧಗಳನ್ನೇ ಹಾಳು ಮಾಡಿಬಿಟ್ಟಿದೆ. ಯಾರಿಗೆ ಯಾರೂ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವೀಯತೆಯೇ ಸತ್ತು ಹೋಗಿದೆ ಅನಿಸತೊಡಗಿದೆ.

ಇಷ್ಟೆಲ್ಲದರ ನಡುವೆ ಮಹಾರಾಷ್ಟ್ರದಿಂದ ಒಂದು ನ್ಯೂಸ್ ಬಂದಿದೆ. ನಿಜಕ್ಕೂ ಇದನ್ನು ನೋಡಿದ್ರೆ ಭಾವುಕರಾಗಿ ಬಿಡ್ತೇವೆ. ಒಂದಿಷ್ಟು ಹೊತ್ತು ಮೌನವಾಗಿರಬೇಕು ಅನಿಸಿಬಿಡುತ್ತೆ. ಆಸ್ಪತ್ರೆಯೂ ಸಿಕ್ಕಿ, ಬೆಡ್ನಲ್ಲಿ ಚಿಕಿತ್ಸೆ ಪಡೀತಾ ಇನ್ನೇನು ಗುಣಮುಖನಾಗುವ ಹೊತ್ತಿಗೆ ಒಬ್ಬ ಹಿರಿಯ ಮನುಷ್ಯ ಎದ್ದು ನಡೆದುಬಿಟ್ಟಿದ್ದಾನೆ. ಇವರು ಚಿಕಿತ್ಸೆ ಸಿಗ್ತಾ ಇಲ್ಲ ಅಂತಲೋ, ಮತ್ಯಾವ ಕಾರಣಕ್ಕೋ ಆಸ್ಪತ್ರೆಯಿಂದ ಎದ್ದು ಹೊರಟಿಲ್ಲ. ಹಣ ಕೊಡಲು ಆಗಲ್ಲ ಅನ್ನೋ ಕಷ್ಟಾನೂ ಇರಲಿಲ್ಲ. ಆಸ್ಪತ್ರೆಯಿಂದ ಹೋದರೆ ಸಾಯುತ್ತೇನೆ ಅಂತಾ ಗೊತ್ತಿದ್ದರೂ ಹೊರಟುಬಿಟ್ಟಿದ್ದರು. ಅದೇಕೆ ಈ ತಾತ ಹೀಗೆ ಎದ್ದು ಹೋದರು ಗೊತ್ತಾ. ನೀವು ಇದನ್ನು ನೋಡಿದರೆ ನಿಜಕ್ಕೂ ಅಂತಃಕರಣ ಮಿಡಿಯುತ್ತೆ. ಕಣ್ಣಂಚಿನಲ್ಲಿ ಗೊತ್ತಿಲ್ಲದೇ ಒಂದು ತೊಟ್ಟು ನೀರು ಜಿನುಗುತ್ತದೆ. ಮನಸ್ಸು ಮೌನವಾಗುತ್ತದೆ.

ಇವರ ಹೆಸರು ನಾರಾಯಣ ಬಾವುರಾವ್ ದಾಬಡ್ಕರ್. ವಯಸ್ಸು 85 ವರ್ಷ. ಮಹಾರಾಷ್ಟ್ರದ ನಾಗಪುರದ ನಿವಾಸಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತ. ಇವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಆಸ್ಪತ್ರೆ ಸೇರಿದ್ರು. ನಾಗಪುರದ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೀತಾ ಇದ್ದು, ಆರೋಗ್ಯ ಸುಧಾರಿಸ್ತಾ ಇತ್ತು. ಅವರು ಇನ್ನೇನು ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗೋದು ಪಕ್ಕಾ ಆಗಿತ್ತು. ಅಷ್ಟರಲ್ಲಿ ಆ ಆಸ್ಪತ್ರೆಯಲ್ಲಿ ನಡೆದ ಒಂದ ಘಟನೆ ಇವರ ಮನಕರಗಿಸಿ ಬಿಟ್ಟಿತ್ತು.

ನಾಗಪುರದ ಇದೇ ಆಸ್ಪತ್ರೆಗೆ ತನ್ನ ಪತಿಯನ್ನು ಕರೆದುಕೊಂಡು ಬಂದಿದ್ದ ಪತ್ನಿ, ಗಂಡನಿಗಾಗಿ ಬೆಡ್ ಹುಡುಕ್ತಾ ಇದ್ರು. ಆಸ್ಪತ್ರೆಯವರಿಗೆ ಗೋಗರೆದು ಕೇಳಿಕೊಳ್ತಾ ಇದ್ರು. 40 ವರ್ಷ ವಯಸ್ಸಿನ ತನ್ನ ಗಂಡನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಪರದಾಡ್ತಾ ಇದ್ರು. ಈ ವಿಚಾರ ನಾರಾಯಣ ಅವರ ಗಮನಕ್ಕೆ ಬಂದಿದೆ. ಇವರು ಈ ಮಹಿಳೆಯ ಪರದಾಟ ನೋಡಿದ್ದಾರೆ. ತನ್ನ ಪತಿಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲವನ್ನು ಅರಿತಿದ್ದಾರೆ. ತಕ್ಷಣವೇ ಒಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ ನಾರಾಯಣ ದಾಬಡ್ಕರ್.

ನಾನು ನನ್ನ ಜೀವನ ಸಾಕಷ್ಟು ಅನುಭವಿಸಿದ್ದೇನೆ. ನನಗೆ ಸಾಕಿನ್ನು ಈ ಬದುಕು. ನನ್ನ ಬದಲಿಗೆ ಆ 40 ವರ್ಷ ಪ್ರಾಯದ ವ್ಯಕ್ತಿಗೆ ಬೆಡ್ ಕೊಟ್ಟುಬಿಡಿ ಅಂತ ವೈದ್ಯರಿಗೆ ಹೇಳಿಬಿಡ್ತಾರೆ. ಎಲ್ಲರೂ ಹೇಗಾದರೂ ಮಾಡಿ ಬದುಕಿದರೆ ಸಾಕಪ್ಪಾ ಅಂತಿರುವಾಗ ಈ ವಯೋವೃದ್ಧ ಹೀಗೆ ಹೇಳ್ತಾ ಇರೋದನ್ನ ನೋಡಿ ಎಲ್ಲರಿಗೂ ಅಚ್ಚರಿಯಾಗಿಬಿಡುತ್ತೆ.

ಏನೋ ವಯಸ್ಸಾಯ್ತು ಏನೋ ಮಾತಾಡ್ತಿದಾರೆ ಅಂತ ಸುಮ್ಮನಿರ್ತಾರೆ. ಆದರೂ ನಾರಾಯಣ್ ಬಿಡಲ್ಲ. ನಾನು ಸ್ವಯಂ ನಿರ್ಧಾರ ತೆಗೆದುಕೊಂಡಿದ್ದು ಇದನ್ನು ಮಾಡಲೇಬೇಕೆಂದು ಹಠ ಹಿಡಿಯುತ್ತಾರೆ. ವಯೋವೃದ್ಧ ನಾರಾಯಣ್ ದಾಬಢ್ಕರ್ ಹೇಳ್ತಾ ಇರೋದನ್ನು ನೋಡಿ ಆಸ್ಪತ್ರೆಯವರೇ ಇಕ್ಕಟ್ಟಿಕೆ ಸಿಲುಕುತ್ತಾರೆ. ನಿಮಗೆ ಉಸಿರಾಟದ ಸಮಸ್ಯೆ ತೀವ್ರವಾಗಿದೆ, ಬಹಳ ಕಷ್ಟ ಅಂತ ಕನ್ವಿನ್ಸ್ ಮಾಡಲು ಪ್ರಯತ್ನಿಸ್ತಾರೆ. ಆದರೆ ನಾರಾಯಣ್ ಕೇಳೋದೇ ಇಲ್ಲ. ಎದ್ದು ಹೊರಟು ಬಿಡ್ತಾರೆ.

ನನಗೀಗ 85 ವರ್ಷ. ನಾನು ನನ್ನ ಜೀವನದಲ್ಲಿ ಎಲ್ಲಾ ಅನುಭವಿಸಿದ್ದೇನೆ. ಈ ಯುವಕನ ಜೀವ ಉಳಿಸುವುದು ಹೆಚ್ಚು ಮುಖ್ಯ. ಅವರ ಮಕ್ಕಳು ಚಿಕ್ಕವರು.. ದಯವಿಟ್ಟು ನನ್ನ ಬೆಡ್ ಅವರಿಗೆ ನೀಡಿ ಅಂತ ಆಸ್ಪತ್ರೆಯವರಿಗೆ ಖಡಕ್ ಆಗಿ ಹೇಳಿ ಬಿಡ್ತಾರೆ ನಾರಾಯಣ್. ಕೊನೆಗೆ ಆಸ್ಪತ್ರೆಯವರು ನೀವು ಬರೆದು ಕೊಟ್ಟರೆ ಅವರಿಗೆ ಬೆಡ್ ಕೊಡ್ತೇವೆ ಅಂತ ಹೇಳಿದಾಗ ದಾಭಲ್ಕರ್ ಲಿಖಿತವಾಗಿ ಬರೆದೂ ಕೊಟ್ಟು ಬಿಡ್ತಾರೆ. ತಮ್ಮ ದೇಹದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದರೂ ತಲೆ ಕೆಡಿಸಿಕೊಳ್ಳದೇ ವೈದ್ಯರ ಸಲಹೆಗೆ ವಿರುದ್ಧವಾಗಿ ನಡೆದುಬಿಡ್ತಾರೆ. ತನ್ನ ಗಂಡನನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಮಹಿಳೆಯ ಮೇಲೆ ಕರುಣೆಯ ನೋಟ ಬೀರಿ ,ಆಸ್ಪತ್ರೆಯಿಂದ ಮನೆಯತ್ತ ಬಂದುಬಿಡ್ತಾರೆ ನಾರಾಯಣ್.

ಏಪ್ರಿಲ್ 22ರಂದು ಅವರ ಆಮ್ಲಜನಕದ ಮಟ್ಟವು ಕಡಿಮೆಯಾದಾಗ ನಾವು ಅವರನ್ನು ಐಜಿಆರ್ಗೆ ಕರೆದೊಯ್ದೆವು. ಹೆಚ್ಚಿನ ಪ್ರಯತ್ನದ ನಂತರ ನಮಗೆ ಬೆಡ್ ಸಿಕ್ಕಿತು. ಆದರೆ, ಅವರು ಒಂದೆರಡು ಗಂಟೆಗಳಲ್ಲಿ ಮನೆಗೆ ಮರಳಿದರು. ನನ್ನ ಕೊನೆಯ ಕ್ಷಣಗಳನ್ನು ನಮ್ಮೊಂದಿಗೆ ಕಳೆಯಲು ಆದ್ಯತೆ ನೀಡುವುದಾಗಿ ನನ್ನ ತಂದೆ ಹೇಳಿದರು. ಯುವ ರೋಗಿಯ ಪ್ರಾಣ ಕಾಪಾಡುವುದು ಮುಖ್ಯವೆಂದರು ಅಂತ ದಾಭಲ್ಕರ್ ಪುತ್ರಿ ಹೇಳಿಕೆ ನೀಡಿದ್ದಾರೆ.

ಮನೆಗೆ ಬಂದ ದಾಬಡ್ಕರ್ ನಿಧನರಾಗಿದ್ದಾರೆ. ಮೃತ್ಯುವಿನ ಬಳಿಗೆ ಹೋಗಿಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಕ್ಕ 40 ವರ್ಷದ ವ್ಯಕ್ತಿ ಬದುಕಿದ್ದಾರೆ. ಆದರೆ ಇವರಿಗೆ ಬೆಡ್ ಕೊಟ್ಟು ಬಂದ ನಾರಾಯಣ್ ಸಾವನ್ನಪ್ಪಿದ್ದಾರೆ. ತಮ್ಮ ಬದುಕನ್ನೇ ಇನ್ನೊಬ್ಬರಿಗೆ ತ್ಯಾಗ ಮಾಡಿದ್ದಾರೆ. ಅದು ತಮ್ಮ ಮಗನಿಗೋ, ಮಗಳಿಗೋ, ಸಂಬಂಧಿಗೋ ಅಲ್ಲ. ಗೊತ್ತಿಲ್ಲದ ಅದ್ಯಾರೋ ಅಪರಿಚಿತನ ಜೀವ ಉಳಿಸಲು ಇವರು ತಮ್ಮ ಬದುಕು ಮುಗಿಸಿ ಹೊರಟು ಹೋಗಿದ್ದಾರೆ.

ಇವರ ಉದಾತ್ತತೆಗೆ ಮಧ್ಯಪ್ರದೇಶ ಸಿಎಂ ಸೇರಿದಂತೆ ಹಲವರು ಮಿಡಿದಿದ್ದಾರೆ. ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೂ ಇನ್ನೊಬ್ಬರಿಗಾಗಿ ತಮ್ಮ ಜೀವವನ್ನೇ ಕೊಡುವ ಇಂತವರು ನಿಜಕ್ಕೂ ಸಿಗುವುದೇ ಇಲ್ಲ. ಬೆಡ್ ಆಗತ್ಯ ಇಲ್ಲದಿದ್ರೂ ಆಸ್ಪತ್ರೆಯಲ್ಲಿ ಸೀರಿಯಸ್ ಆಗಿರೋರಿಗೆ ಬೆಡ್ ಬಿಟ್ಟು ಕೊಡೋದಿರಲಿ, ಸತ್ತರೇ ಒಂದು ಸಮಾಧಾನದ ಮಾತು ಹೇಳೋರು ಈಗ ಸಿಗ್ತಾ ಇಲ್ಲ. ಆಸ್ಪತ್ರೆ ಮುಂದೆ ಆಂಬ್ಯುಲೆನ್ಸ್ಗಳು ಸಾಲು ಸಾಲಾಗಿ ಬಂದು ನಿಲ್ತಾ ಇರೋದ್ರಿಂದ ವೈದ್ಯರ ಮೇಲೂ ಒತ್ತಡ ಹೆಚ್ಚಾಗ್ತಿದೆ. ಆದ್ರೆ ದುಡ್ಡಿರೋರು, ಪ್ರಭಾವ ಇರೋರು ಹೇಗೋ ಅಲ್ಲಿ ಇಲ್ಲಿ ಅಡ್ಜೆಸ್ಟ್​​ ಮಾಡಿ ಬಿಡ್ತಾರೆ. ಬಡವರು, ಜನ ಸಾಮಾನ್ಯರು ಎಲ್ಲಾ ಕಡೆ ಅಲೆದಾಡಿ ಕೊನೆಗೆ ಚಿತಾಗಾರದತ್ತ ನಡೆಯುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ.

ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರು ಇರಬಹುದು. ಕುಟುಂದವರೂ ಸಿಗಬಹುದು. ಆದ್ರೆ ಯಾರೋ ಅಪರಿಚತರಿಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡೋರು ಸಿಗೋದು ತೀರಾ ಅಪರೂಪ. ಮಾನವೀಯತೆಯೇ ಮರೆಯಾಗುತ್ತಿರುವ ಈ ಕೊರೊನಾ ಸಂದರ್ಭದಲ್ಲಿ ಇಂತಹ ಘಟನೆಗಳು ಬಡೆದೆಬ್ಬಿಸುತ್ತವೆ.

ವಿ.ಸೂ: ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಫೇಕ್​ ಸುದ್ದಿ ಎಂದಿದ್ದೇ ಫೇಕ್.. ಯುವಕನಿಗಾಗಿ ನಿಜವಾಗಿಯೂ ಬೆಡ್​ ಬಿಟ್ಟುಕೊಟ್ಟಿದ್ದ RSS ವೃದ್ಧ appeared first on News First Kannada.

Source: newsfirstlive.com

Source link