ಫೇಮಸ್​​​ ಸಿಂಗರ್​​​​ ತಂದೆ ಸಾವು ಕೇಸ್​​​​ಗೆ ಟ್ವಿಸ್ಟ್​; ₹390 ಕೋಟಿ ಡೀಲ್​​ ಪ್ರಕರಣವೇ ಮುಳುವಾಯ್ತಾ?


ಬೆಂಗಳೂರು: ತೆಲುಗು ಗಾಯಕಿ ಹರಿಣಿ ತಂದೆ ಎ.ಕೆ.ರಾವ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್  ಸಿಕ್ಕಿದ್ದು ಸಾವಿಗೆ ಗಾಯಕಿ ತಂದೆ ಭಾಗಿಯಾಗಿದ್ದ ಹಣಕಾಸಿನ ವ್ಯವಹಾರವೇ ಕಾರಣ ಎನ್ನಲಾಗಿದೆ.

ಹೌದು ಇತ್ತೀಚಿಗೆ ಕಾಣೆಯಾಗಿ ರೈಲು ಹಳಿಯ ಮೇಲೆ ಬಿದ್ದಿದ್ದ ಗಾಯಕಿ ತಂದೆಯ ನಿಗೂಢ ಸಾವಿನ ಸುತ್ತ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಅವರ ಸಾವಿಗೆ ಮೂಲ ಕಾರಣವೇ ಅವರು ತೊಡಗಿಕೊಂಡಿದ್ದ ಹಣದ ವ್ಯವಹಾರ ಎನ್ನಲಾಗಿದೆ.

ಗಾಯಕಿಯ ತಂದೆಯ ಸಾವಿನ ಸುತ್ತ 390 ಕೋಟಿ ಡೀಲ್​ ವ್ಯವಹಾರ..!

ರಿಯಲ್ ಎಸ್ಟೇಟ್  ಪ್ರಾಜೆಕ್ಟ್ ನಿರ್ಮಾಣಕ್ಕೆ ಸಂಬಂಧಿಸಿ ಬಿಲ್ಡರ್​ ಇಬ್ಬರಿಗೆ 390 ಕೋಟಿ ಲೋನ್ ಕೊಡಿಸುವುದಾಗಿ ಮುಂದಾಳತ್ವ ವಹಿಸಿದ್ದ ರಾವ್ ಉದ್ಯಮಿಗಳಾದ ಗಿರೀಶ್,ಮತ್ತು ಪನಿ ತಾರಮ್ ಎಂಬುವವರನ್ನ ‘ಏಸ್ ಕ್ಯಾಪಿಟಲ್ ವೆಂಚರ್ಸ್ ಫೈನಾನ್ಸ್’ ಕಂಪನಿಗೆ ಭೇಟಿ ಮಾಡಿಸಿದ್ದಾರೆ.

ಆ ಬಳಿಕ ಗಿರೀಶ್​ಗೆ  150 ಕೋಟಿ ಮತ್ತು ಪನಿ ತಾರಮ್​ಗೆ  240 ಕೋಟಿ ಲೋನ್​  ಕೊಡಿಸುವುದಾಗಿ ಮಾತುಕತೆ ನಡೆದಿದೆ. ಈ ವೇಳೆ ಲೋನ್​ ಹಣ ಕೈ ಸೇರುವ ಮೊದಲು 3 ಕೋಟಿ ಕಮಿಷನ್​ ಅನ್ನು ನಮಗೆ ನೀಡಬೇಕೆಂದು ಏಸ್ ಕ್ಯಾಪಿಟಲ್ ವೆಂಚರ್ಸ್ ಫೈನಾನ್ಸ್ ಮಾಲೀಕರು ಹೇಳಿದ್ದಾರೆ. ಅವರ ಮಾತಿಗೆ ತಲೆ ಅಲ್ಲಾಡಿಸಿದ ಉದ್ಯಮಿಗಳು ರಾವ್​ ಅವರ ಮುಂದಾಳತ್ವದಲ್ಲಿ 3 ಕೋಟಿ ರೂಪಾಯಿಯನ್ನು ಕೊಡಲು ಒಪ್ಪಿದ್ದಾರೆ.

ಇಲ್ಲಿಗೆ ಅಸಲಿ ಆಟ ಶುರುವಾಗಿದ್ದು ಲೋನ್​ ಬರುವ ಮುನ್ನವೇ ಕಮಿಷನ್​ ನೀಡಿದ ಉದ್ಯಮಿಗಳು ಲೋನ್​ ಮಂಜೂರು ಆಗತ್ತೆ, ಆಗತ್ತೆ ಎಂದು ಕಾದು ಕುಳಿತು ಸಾಕಾಗಿದೆ. ಆಗ ಕಮೀಷನ್​ ಪಡೆದ ಫೈನಾನ್ಸ್​ ಮಾಲೀಕರು  ಮೋಸ ಮಾಡಿ ಎಸ್ಕೇಪ್​ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಇನ್ನು ಫೈನಾನ್ಸ್​ ಕಂಪನಿಯ ಮಾಲೀಕರಾದ ಡೇನಿಯಲ್ ಆರ್ಮ್‌ಸ್ಟ್ರಾಂಗ್, ರಾಘವನ್, ಹಾಗೂ ವಿವೇಕಾನಂದ ಎಂಬುವವರಿಂದ ಮೋಸ ಹೋದ ಉದ್ಯಮಿಗಳು ಸದ್ದನಗುಂಟೆ ಪಾಳ್ಯ ಠಾಣೆಯಲ್ಲಿ  ಕೇಸ್​ ದಾಖಲಿಸಿದ್ದಾರೆ.

ಮನನೊಂದು ಆತ್ಮಹತ್ಯೆಗೆ ಶರಣಾದ್ರಾ ರಾವ್​?
ಇನ್ನು ವಂಚನೆಗೊಳಗಾದ ಉದ್ಯಮಿಗಳು ಫೈನಾನ್ಸ್​ ಮಾಲೀಕರ ಜೊತೆ ಎ. ಕೆ. ರಾವ್ ಹೆಸರನ್ನು ಕೂಡ ಎಫ್​ಐಆರ್​ ​ನಲ್ಲಿ ಉಲ್ಲೇಖಿಸಿದ್ದರಂತೆ. ಇದರಿಂದ ಗಾಬರಿಯಾದ ರಾವ್​ ತಾನೊಬ್ಬ ವೃತ್ತಿಯಲ್ಲಿ ಅಧ್ಯಾಪಕನಾಗಿದ್ದುಕೊಂಡು ಕಮೀಷನ್​ ಆಸೆಗಾಗಿ ಮೋಸ ಹೋದೆ ಎಂದು ಮನನೊಂದಿದ್ದರಂತೆ. ಆ ಬಳಿಕ  ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ನೇಹಿತರೊಬ್ಬರ ಬಳಿ  ಈ ಕುರಿತು ಮಾತನಾಡಿದ್ದರೆಂದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.

ಇತ್ತ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿರುವ ಹಿನ್ನೆಲೆ ಸದ್ಯ ಕೊಲೆ ಆಯಾಮದಲ್ಲಿ ಕೂಡ ತನಿಖೆ ನಡೆಸುತ್ತಿರುವ ಪೊಲೀಸರು ಎಸ್ಕೇಪ್ ಆಗಿರುವ ಮೂವರು ಫೈನಾನ್ಸ್​ ಮಾಲೀಕರಿಗೆ ಹುಡುಕಾಟ ಆರಂಭಿಸಿದ್ದಾರೆ.

ಪ್ರಕರಣ ಕುರಿತು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ಮಾಹಿತಿ ನೀಡಿದ್ದು ಎರಡು ಪ್ರತ್ಯೇಕ ವಂಚನೆ ಕೇಸ್ ನಲ್ಲಿ ಎ.ಕೆ ರಾವ್ ರನ್ನು ವಿಚಾರಣೆ ಮಾಡಲಾಗಿತ್ತು.  ಆಗ 390 ಕೋಟಿಯನ್ನು ಕಡಿಮೆ ಬಡ್ಡಿಗೆ ಕೊಡಿಸುತ್ತೇನೆ ಅಂತ ಉದ್ಯಮಿಗಳಿಗೆ ಹೇಳಿದ್ದರಂತೆ.  ಹೀಗೆ ಎ.ಕೆ ರಾವ್ ಮಧ್ಯವರ್ತಿಯಾಗಿ ಕೆಲಸ ಮಾಡಿರಬಹುದು ವಿಚಾರಣೆ ವೇಳೆ ಘಟನೆ ಬಗ್ಗೆ ಎಕೆ ರಾವ್ ಮಾಹಿತಿ ನೀಡಿದ್ದಾರೆ  ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *