ಫೇಸ್​​ಬುಕ್​ ಲವ್​; ಮದುವೆಗೆ ನಿರಾಕರಿಸಿದ ಯುವಕನ ಮೇಲೆ ಆ್ಯಸಿಡ್​ ಎರಚಿದ ಮಹಿಳೆ ಅರೆಸ್ಟ್


ಇಡುಕ್ಕಿ: ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಆ್ಯಸಿಡ್​ ದಾಳಿ ನಡೆಸಿರುವ ಘಟನೆ ನವೆಂಬರ್ 16 ರಂದು ಕೇರಳದ ತಿರುವನಂತಪುರಂನಲ್ಲಿ ನಡೆದಿದ್ದು, ಯುವತಿ ಆ್ಯಸಿಡ್​​ ದಾಳಿ ನಡೆಸಿದ ದೃಶ್ಯಗಳು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ.

ಮಹಿಳೆಗೆ ಫೇಸ್​​ಬುಕ್​​ನಲ್ಲಿ ಯುವಕನ ಪರಿಚಯವಾಗಿದ್ದು, ಇಬ್ಬರ ನಡುವೆ ಕೆಲ ಸಮಯದ ಬಳಿಕ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಆದರೆ ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ಯುವಕ ಮಹಿಳೆಯಿಂದ ದೂರವಾಗಲು ಮುಂದಾಗಿದ್ದನಂತೆ. ಮಹಿಳೆ ಮಾತ್ರ ಯುವಕನನ್ನು ಬ್ಲ್ಯಾಕ್​ ಮೇಲ್​ ಮಾಡಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಳಂತೆ. ಇದಕ್ಕೆ ಯುವಕ ಒಪ್ಪದ ಕಾರಣ ಆ್ಯಸಿಡ್ ಮಾಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಸದ್ಯ ಆ್ಯಸಿಡ್​ ದಾಳಿಗೆ ಒಳಗಾಗಿರುವ 28 ವರ್ಷದ ಯುವಕ ಅರುಣ್​ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಆ್ಯಸಿಡ್​ ದಾಳಿ ಮಾಡಿದ 35 ವರ್ಷದ ಮಹಿಳೆ ಷಿಬಾಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಮಹಿಳೆಗೂ ಆ್ಯಸಿಡ್​ನಿಂದ ಗಾಯಗಳಾಗಿದ್ದು, ಯುವಕನ ದೂರಿನ ಅನ್ವಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆ್ಯಸಿಡ್​ ದಾಳಿಗೆ ಒಳಗಾಗಿರುವ ಯುವಕ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದು, ಮುಖ ಹಾಗೂ ಕುತ್ತಿಗೆ ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *