ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಚಿಕ್ಕದೊಂದು ಖಾಸಗಿ ಫೈನಾನ್ಸ್ ಕಂಪನಿ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಬೇಕು ಎಂಬ ಕೂಗು ಇಂದು ಮತ್ತೊಮ್ಮೆ ಕೇಳಿ ಬಂತು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರೇ ಮತ್ತೊಮ್ಮೆ ಇಂಥದ್ದೊಂದು ಕೂಗು ಕೇಳಿ ಬರಲು ಕಾರಣರಾದರು.

ಸುರಾನಾ ಫೈನಾನ್ಸ್ ಹೆಸರಿನ ಕಂಪನಿಯ ಉದ್ಘಾಟನೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಆಗಮಿಸಿದ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದರೆ ನೀವು ಅವರಿಗೆ ಮತ ಹಾಕಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ಸಮಾರಂಭವನ್ನು ಸಿದ್ದರಾಮಯ್ಯ ದೀಪ ಬೆಳಗಿ ಉದ್ಘಾಟನೆ ಮಾಡಿದ ಸಂದರ್ಭ ವ್ಯಕ್ತಿಯೊಬ್ಬರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಂದು ಕೂಗಿದಾಗ ಅಲ್ಲಿದ್ದವರೆಲ್ಲ ಜೈಕಾರ ಹಾಕಿದರು. ಆಗ ಮಾತನಾಡಿದ ಜಮೀರ್ ಕೇವಲ ಜೈಕಾರ ಕೂಗುವುದರಿಂದ ಪ್ರಯೋಜನವಿಲ್ಲ ನೀವು ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದರೆ ನೀವೆಲ್ಲ ಮತ ಹಾಕಬೇಕು ಎಂದರು.

ಮತ್ತಷ್ಟು ಅನುಮಾನ:
ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತಿಗೆ ಜಮೀರ್ ಈ ಮೇಲೆ ಆಡಿದ ಈ ಮಾತು ಇನ್ನಷ್ಟು ಪುಷ್ಠಿ ನೀಡಿತು. ಅಲ್ಲದೆ ಸಣ್ಣ ಫೈನಾನ್ಸ್ ಕಂಪನಿಯೊಂದರ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿತು. ಇತ್ತೀಚಿನ ದಿನಗಳಲ್ಲಿ ಚಾಮರಾಜಪೇಟೆಯಲ್ಲಿ ಹಮ್ಮಿಕೊಳ್ಳುವ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರಿಂದ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ನಮ್ಮ ಮಾವ ಇಲ್ಲಿ ಇದ್ದರು. ಇದರಿಂದ ಚಾಮರಾಜಪೇಟೆ ಕ್ಷೇತ್ರದ ಜೊತೆಗೆ ನನಗೆ ತುಂಬಾ ಬಾಂಧವ್ಯ ಇದೆ ಎಂದು ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಅಲ್ಲಿ ಮುಂದಿನ ಸಿಎಂ ಎಂಬ ದನಿ ಕೇಳಿ ಬರುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಜಾತಿಗಣತಿ ಕಾಂಗ್ರೆಸ್ ಪಕ್ಷ ಯಾಕೆ ಬಿಡುಗಡೆ ಮಾಡಿಲ್ಲ: ಅಶ್ವಥ್ ನಾರಾಯಣ

ಕ್ರಮದ ಭಯವಿಲ್ಲ:
ಮುಂದಿನ ಸಿಎಂ ವಿಚಾರವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಶಿಸ್ತು ಸಮಿತಿ ಮೇಲಿಂದಮೇಲೆ ಹೇಳುತ್ತಿದ್ದರು ಸಿದ್ದರಾಮಯ್ಯ ವಿಚಾರದಲ್ಲಿ ಜಮೀರ್ ನಿಲುವು ಬದಲಾಗುತ್ತಿಲ್ಲ. ಸಿದ್ದರಾಮಯ್ಯರಂಥ ನಾಯಕರ ಬೆಂಬಲ ಇರುವ ಹಿನ್ನೆಲೆ ತಮ್ಮ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸದಿಂದ ಜಮೀರ್ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸಮಾರಂಭದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಜುಲೈ ತಿಂಗಳಲ್ಲೇ ಈ ಅಧಿವೇಶನ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರ ಅಧಿವೇಶನ ನಡೆಸಿಲ್ಲ, ಹೀಗಾಗಿ ಅಧಿವೇಶನ ನಡೆಸಿ ಎಂದು ಪತ್ರ ಬರೆದಿರುವೆ. ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು, ಆದರೆ ಈ ಸರ್ಕಾರ ನಡೆಸುತ್ತಿಲ್ಲ. ಭ್ರಷ್ಟಾಚಾರ, ಕೊರೊನಾ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.

ಡಿಕೆಶಿ ನಿವಾಸಕ್ಕೆ ತೆರಳುತ್ತೇನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಮನೆಯಲ್ಲಿ ಸಭೆ ಕರೆದಿದ್ದಾರೆ. ಬೆಂಗಳೂರು ಶಾಸಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ನನ್ನನ್ನು ಆಹ್ವಾನಿಸಿದ್ದು ನಾನು ತೆರಳುತ್ತಿದ್ದೇನೆ. ರಾಕೇಶ್ ಪಾಪಣ್ಣ ಸಿದ್ದರಾಮಯ್ಯ ಆಪ್ತ ಎಂಬ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಯಾರು ಏನು ಬೇಕಾದರು ಹೇಳಿ ಕೊಳ್ಳಬಹುದು.ನೀನು ಹೇಳಿಕೊಳ್ಳಬಹುದು ಸಿದ್ದರಾಮಯ್ಯ ನನಗೆ ಆಪ್ತ ಅಂತ. ಆದರೆ ಅದೆಲ್ಲ ನಡೆಯಲ್ಲ ಎಂದು ಹೇಳಿದರು.

The post ಫೈನಾನ್ಸ್ ಕಂಪನಿ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮನ – ಸಿಎಂ ಮಾಡಿ ಎಂದ ಜಮೀರ್ appeared first on Public TV.

Source: publictv.in

Source link