IPL ಆಟಗಾರರ ರಿಟೈನ್ ಪಟ್ಟಿ ಸಲ್ಲಿಕೆಗೆ ದಿನಗಣನೆ ಶುರುವಾಗುತ್ತಿದ್ದಂತೆ, ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಪ್ರಮುಖ ಆಟಗಾರರ ಮೇಲೆ ಯಾವೆಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ ಅನ್ನೋ ತೀವ್ರ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
IPL-2022ರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ತಂಡಗಳು ನವೆಂಬರ್ 30ರೊಳಗೆ ತಾವು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನ ಬಿಸಿಸಿಐಗೆ ಸಲ್ಲಿಸಬೇಕಿದೆ. ಹೀಗಾಗಿ ಫ್ರಾಂಚೈಸಿಗಳು ತಮ್ಮ ತಂಡಗಳ ಅತ್ಯುತ್ತಮ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಒತ್ತು ನೀಡ್ತಿವೆ. ಆದರೆ ಕೆಲ ಫ್ರಾಂಚೈಸಿಗಳು ಯಾರನ್ನ ಉಳಿಸಿಕೊಳ್ಳಬೇಕು ಕೈಬಿಡಬೇಕು ಅನ್ನೋ ಗೊಂದಲಕ್ಕೆ ಸಿಲುಕಿದ್ರೆ, ಇನ್ನೂ ಕೆಲ ಫ್ರಾಂಚೈಸಿಗಳು, ಇತರ ತಂಡಗಳ ಆಟಗಾರರ ಮೇಲೆ ಕಣ್ಣಿಟ್ಟಿವೆ.
ಶ್ರೇಯಸ್ ಅಯ್ಯರ್ ಮೇಲೆ ಮುಂಬೈ ಕಣ್ಣು..?
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮಾಜಿ ನಾಯಕ ಶ್ರೇಯಸ್ ಅಯ್ಯರ್ರನ್ನ ಕೈಬಿಟ್ಟಿದೆ. ಏಕೆಂದ್ರೆ ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಆ್ಯನ್ರಿಚ್ ನೋಕಿಯಾರನ್ನ ಮಾತ್ರ ರಿಟೈನ್ ಮಾಡಿಕೊಳ್ಳಲಿದೆ. ಸದ್ಯ ಅಯ್ಯರ್ರನ್ನ ಖರೀದಿಸೋಕೆ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್, ಒಲವು ತೋರಿದೆ ಎನ್ನಲಾಗ್ತಿದೆ. ಮೆಗಾ ಹರಾಜಿನಲ್ಲಿ ಎಷ್ಟು ಕೋಟಿ ಆದರೂ ಸರಿ ಅಯ್ಯರ್ ಮೇಲೆ ಬಿಡ್ ಮಾಡೋದಕ್ಕೆ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಆಟಗಾರರ ರಿಟೈನ್-ಗೊಂದಲದಲ್ಲಿ ಹೈದ್ರಾಬಾದ್..?
ರಿಟೈನ್ ವಿಚಾರದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ ಯಾರನ್ನ ಉಳಿಸಿಕೊಳ್ಳಬೇಕು ಎಂಬ ಸ್ಪಷ್ಟತೆಯೇ ಇಲ್ಲವಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ರನ್ನ ಉಳಿಸಿಕೊಳ್ಳೋಕೆ ಚಿಂತಿಸಿದೆ. ಆದ್ರೆ ರಶೀದ್ ತಮ್ಮನ್ನೇ ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಳ್ಳಬೇಕೆಂದಿದ್ದಾರೆ. ಆದ್ರೆ ಫ್ರಾಂಚೈಸಿ ಒಪ್ಪಲಿಲ್ಲ. ಬಹುಶಃ ಈ ಬೆಳವಣಿಗೆ ನೋಡ್ತಿದ್ರೆ, ರಶೀದ್ ಕೂಡ ಹರಾಜಿಗೆ ಬರುವ ಸಾಧ್ಯತೆ ಇದೆ.
ಸಿಎಸ್ಕೆ ತಂಡದಿಂದ ಸುರೇಶ್ ರೈನಾ ಔಟ್..?
IPL ಶುರುವಾದಾಗಿನಿಂದ ಚೆನ್ನೈ ತಂಡದಲ್ಲೇ ಇದ್ದ ಸುರೇಶ್ ರೈನಾ, ಮೊದಲ ಬಾರಿಗೆ ಬೇರೆ ಫ್ರಾಂಚೈಸಿ ಪರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದ್ರೆ ಸಿಎಸ್ಕೆ ಧೋನಿ, ಋತುರಾಜ್, ಜಡೇಜಾ, ಮೊಯಿನ್ ಅಲಿ ಅವರನ್ನ ರಿಟೈನ್ ಮಾಡಿಕೊಳ್ಳೋದು ಪಕ್ಕಾ. ಹೀಗಾಗಿ ರೈನಾರನ್ನ ತಂಡದಿಂದ ಕೈ ಬಿಡಲಾಗ್ತಿದೆ. ಆದ್ರೆ ಧೋನಿ ಜೊತೆಗೆ ಆಡುವ ಇಂಗಿತ ವ್ಯಕ್ತಪಡಿಸಿರುವ ರೈನಾ, ಧೋನಿ ಇಲ್ಲದ ಬೇರೊಂದು ತಂಡದಲ್ಲಿ ಆಡ್ತಾರಾ ಇಲ್ವಾ ಅನ್ನೋದು ಅನುಮಾನ ಮೂಡಿದೆ.
ಹೊಸ ಫ್ರಾಂಚೈಸಿಗೆ ಧವನ್, ಕೆ.ಎಲ್.ರಾಹುಲ್..?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಮತ್ತು ಪಂಜಾಬ್ ತಂಡದ ನಾಯಕ ಹಾಗೂ ಓಪನರ್ KL ರಾಹುಲ್, ನೂತನ ಫ್ರಾಂಚೈಸಿಗಳ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ. ಇಬ್ಬರೂ ಕೂಡ ತಮ್ಮ ತಮ್ಮ ಟೀಮ್ಗಳಿಂದ ಹೊರಬಂದಿದ್ದು, ರಾಹುಲ್ ಹೊಸ ಫ್ರಾಂಚೈಸಿ ಲಕ್ನೋಗೆ ನಾಯಕರಾಗಲಿದ್ದಾರೆ ಎನ್ನಲಾಗ್ತಿದೆ. ಅದೇ ರೀತಿ ಧವನ್ರನ್ನ ಎರಡೂ ನೂತನ ಫ್ರಾಂಚೈಸಿಗಳು, ಖರೀದಿಸೋಕೆ ಒಲವು ತೋರಿವೆ.
ಗೇಲ್ ಐಪಿಎಲ್ ಆಡ್ತಾರಾ ಆಡಲ್ವಾ ಅನ್ನೋ ಗೊಂದಲ..!
42 ವರ್ಷದ ಯೂನಿವರ್ಸ್ ಬಾಸ್ ಕ್ರಿಸ್ಗೇಲ್, IPLನಿಂದಲೇ ಹೊರಗುಳಿಯಲು ನಿರ್ಧರಿದ್ದಾರೆ ಎನ್ನಲಾಗ್ತಿದೆ. ಏಕೆಂದ್ರೆ, 14ನೇ ಆವೃತ್ತಿಯಲ್ಲಿ ಗೇಲ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಪಂಜಾಬ್ ತಂಡ ಗೇಲ್ರನ್ನ ಕೈ ಬಿಡಲಿದೆ. ಸದ್ಯ ಗೇಲ್ ಫಾರ್ಮ್ ಕಳೆದುಕೊಂಡಿದ್ದು, ವಯಸ್ಸೂ ಕೂಡ ಮುಳುವಾಗಲಿದೆ. ಹೀಗಾಗಿ ಹರಾಜಿಗೆ ಬಂದರೂ ಖರೀದಿಸೋಕೆ ಯಾವ ಫ್ರಾಂಚೈಸಿಯೂ ಒಲವು ತೋರುವುದಿಲ್ಲ ಎನ್ನಲಾಗ್ತಿದೆ. ಆದ್ದರಿಂದ ಗೇಲ್ IPLನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚೇ ಇದೆ.