ಕಾಮನ್‌ವೆಲ್ತ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕ ತಂದವರು ಮಿಲ್ಖಾ ಸಿಂಗ್‌. ಇಂದು ಫ್ಲೈಯಿಂಗ್‌ ಸಿಖ್‌ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ, ಹೆಮ್ಮೆಯ ಕನ್ನಡಿಗನೊಬ್ಬ ಮಿಲ್ಖಾ ಸಿಂಗ್​ರನ್ನ ಸೋಲಿಸಿದ್ದ ಅನ್ನೋದು ಗೊತ್ತಾ?

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ತುತ್ತು ಅನ್ನಕ್ಕೂ ಪರದಾಡಿದ್ದರು ಮಿಲ್ಖಾ ಸಿಂಗ್‌. ಆ ನಂತರ ಭಾರತೀಯ ಸೈನ್ಯ ಸೇರಿ ಸೇವೆ ಸಲ್ಲಿಸುತ್ತಾರೆ. ಅಲ್ಲಿಯ ಸೈನಾಧಿಕಾರಿಗಳಿಗೆ ಮಿಲ್ಖಾ ಸಿಂಗ್‌ ಒಬ್ಬ ಅದ್ಭುತ ಓಟಗಾರ ಅನ್ನೋದು ಕಣ್ಣಿಗೆ ಬೀಳುತ್ತೆ. ಸಿಂಗ್‌ಗೆ ಅಗತ್ಯ ತರಬೇತಿ ನೀಡಲಾಗುತ್ತೆ. ಹಾಗೇ 1958 ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತರುತ್ತಾರೆ. ಆನಂತರ ಕೂಡ ಅನೇಕ ಪದಕಗಳನ್ನು ಭಾರತಕ್ಕೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸುತ್ತಾರೆ. ಆದ್ರೆ, ಮಿಂಚಿನ ಓಟಗಾರನಾಗಿರುವ ಮಿಲ್ಖಾ ಸಿಂಗ್‌ ಅವರನ್ನು ಸೋಲಿಸಿದ ನಮ್ಮ ಕೊಡಗಿನ ವೀರನ ಸಾಧನೆ ಕಮ್ಮಿ ಏನಲ್ಲ. ಆದ್ರೆ, ಅವರ ಸಾಧನೆ ಬಗ್ಗೆ ಜನತೆಗೆ ತಿಳಿದಿಲ್ಲ

ಮಿಲ್ಖಾ ಸೋಲಿಸಿದ ಕೊಡಗಿನ ವೀರ ಯಾರು?
ಈ ಮೇಲಿನ ಫೋಟೋದಲ್ಲಿ ನಂಬರ್‌ ಓನ್‌ ಸ್ಥಾನದಲ್ಲಿ ನಿಂತವರೆ ಕೊಡಗಿನ ವೀರ ಯೋಧ ಕುಂಜಿಯಂಡ ಐಯ್ಯಣ್ಣ. ಎರಡನೇ ಸ್ಥಾನದಲ್ಲಿ ನಿಂತವರೇ ಮಿಲ್ಖಾ ಸಿಂಗ್‌. ಹೌದು, ಅಂದು ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಮಿಲ್ಖಾ ಸಿಂಗ್‌ ಅವರನ್ನು ಸೋಲಿಸಿದ್ದು, ನಮ್ಮ ಕನ್ನಡಿಗ. ಆದ್ರೆ, ಕೆಲವೊಂದು ಸಾಧನೆಗಳೇ ಹಾಗೆ, ಜನರ ಕಣ್ಣಿಗೆ ಕಾಣೋದೇ ಇಲ್ಲ. ಕಂಡರೂ ಕ್ಷಣಕಾಲದಲ್ಲಿಯೇ ಮರೆಯಾಗಿ ಬಿಡುತ್ತವೆ. ಅಂತಹವರ ಸಾಲಿನಲ್ಲಿ ಸೇರಿದರಲ್ಲಿ ನಮ್ಮ ಕರ್ನಾಟಕದ ಕೊಡಗಿನ ವೀರ ಯೋಧ ಕುಂಜಿಯಂಡ ಐಯ್ಯಣ್ಣ ಕೂಡ ಇದ್ದಾರೆ.

100 ಮೀ. ಓಟದಲ್ಲಿ ಸಿಂಗ್‌ ಸೋಲಿಸಿದ ಐಯ್ಯಣ್ಣ
ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದ ಕನ್ನಡಿಗ

ಅದು, 1951ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟ. 100 ಮೀಟರ್‌ ಓಟದ ಸ್ಪರ್ಧೆ. ಅಲ್ಲಿದ್ದವರಿಗೆಲ್ಲ ಮಿಲ್ಖಾ ಸಿಂಗ್‌ ಮೇಲೆಯೇ ಕಣ್ಣು. ಎಲ್ಲರ ನಿರೀಕ್ಷೆಯಲ್ಲಿಯೂ ಮಿಲ್ಖಾಗೆ ಚಿನ್ನ ಗ್ಯಾರಂಟಿ ಅನ್ನೋ ಮಾತು. ಆದ್ರೆ, ಅಲ್ಲಿ ಆಗಿದ್ದೆ ಬೇರೆ. ಅಲ್ಲೊಬ್ಬ ಕನ್ನಡಿಗ ಮಿಲ್ಖಾಗೆ ಸವಾಲು ಒಡ್ಡಲು ರೆಡಿಯಾಗಿ ಟ್ರ್ಯಾಕ್‌ನಲ್ಲಿ ನಿಂತಿದ್ದ. ಆದ್ರೆ, ಮಿಲ್ಖಾಗೆ ಕನ್ನಡಿಗ ಸವಾಲು ಒಡ್ಡಬಲ್ಲ ಅಂತ ಯಾರಲ್ಲೂ ನಿರೀಕ್ಷೆ ಇರಲಿಲ್ಲ. ಓಟ ಆರಂಭವಾಗಿಯೇ ಬಿಟ್ತು. ಮಿಲ್ಖಾ ಸಿಂಗ್‌ಗೂ ಕನ್ನಡಿಗ ಐಯ್ಯಣ್ಣನಿಗೂ ತೀವ್ರ ಸ್ಪರ್ಧೆ ಏರ್ಪಟ್ಟಿತು. ಅಂತಿಮವಾಗಿ ಐಯ್ಯಣ್ಣ 10.69 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದರು. ಮಿಲ್ಖಾ ಸಿಂಗ್‌ 10.75 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನಕ್ಕೆ ತೃಪ್ತವಾಗಬೇಕಾಯಿತು.

ಹಲವು ಕ್ರೀಡಾಕೂಟದಲ್ಲಿ ಮಿಲ್ಖಾರನ್ನ ಸೋಲಿಸಿದ್ದರು
ಕನ್ನಡಿಗನ ಸಾಧನೆ ಕೊಂಡಾದಿತ್ತು ಇಡೀ ರಾಷ್ಟ್ರ

ಕೊಡಗಿನ ಐಯ್ಯಣ್ಣ ಅವರ ಸಾಧನೆ ಜನರ ಕಣ್ಣಿಗೆ ಬಿದ್ದಿದ್ದೆ ಆವಾಗ ನೋಡಿ. ಇಡೀ ರಾಷ್ಟ್ರವೇ ಕೊಂಡಾಡಿತ್ತು. ಆ ನಂತರ ನಡೆದ ಅನೇಕ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಮಿಲ್ಖಾ ಸಿಂಗ್‌ಗೆ ಸೋಲುಣಿಸಿದ್ದು, ಕನ್ನಡಿಗ ಐಯ್ಯಣ್ಣ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ತರಬಲ್ಲ ರನ್ನರ್‌ ಆಗುತ್ತಾರೆ ಅಂತ ಇಡೀ ರಾಷ್ಟ್ರವೇ ಭರವಸೆ ಇಟ್ಟುಕೊಂಡಿತ್ತು. ದುರಾದೃಷ್ಟವಶಾತ್‌ ಅಂತಾರಾಷ್ಟ್ರೀಯ ಪದಕ ಪಡೆಯಲು ಸಾಧ್ಯವಾಗಲಿಲ್ಲ. ಆದ್ರೆ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರ ಸಾಧನೆ ಅಜರಾಮರ.

ಮಿಲ್ಖಾ ನಿಧನದ ಬಳಿಕ ಮುನ್ನೆಲೆಗೆ ಬಂದ ಸಾಧನೆ
ಕೆಲವು ಸಾಧನೆಗಳು ಆಕ್ಷಣದಲ್ಲಿ ಮಿಂಚಿ ಆ ನಂತರ ಕಣ್‌ಮರೆಯಾಗಿ ಬಿಡುತ್ತವೆ. ದೇಶದಲ್ಲಿ ಅದೆಷ್ಟೋ ಕ್ರೀಡಾಪಟುಗಳು ಸಾಧನೆ ಮರೆಯಾಗಿ ಬಿಟ್ಟಿದೆ. ಆದ್ರೆ ಇದೀಗ ಕನ್ನಡಿಗನ ಸಾಧನೆ ದಿಢೀರ್‌ ಅಂತ ಬೆಳಕಿಗೆ ಬರಲು ಕಾರಣ ಮಿಲ್ಖಾ ಸಿಂಗ್‌ ನಿಧನ. ಹೌದು, ಕೋವಿಡ್‌ನಿಂದ ಚೇತರಿಸಿಕೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಮಿಲ್ಖಾ ಸಿಂಗ್‌ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದ ಬಳಿಕ ರಾಷ್ಟ್ರೀಯ ದಾಖಲೆಗಳನ್ನು ಜಾಲಾಡುತ್ತಾ ಹೋದಾಗ ಮಿಲ್ಖಾ ಅವರನ್ನು ಕನ್ನಡಿಗ ಐಯ್ಯಣ್ಣ ಸೋಲಿಸಿದ್ದರು ಅನ್ನೋದು ತಿಳಿದು ಬಂತು ನೋಡಿ.

ಬಾಲ್ಯದಲ್ಲಿಯೇ ಇತ್ತು ಓಟದ ಕಡೆ ಆಕರ್ಷಣೆ
ಶಾಲಾ ಕ್ರೀಡಾಕೂಟದಲ್ಲಿಯೋ ಇವರದೇ ಮೇಲುಗೈ
ಕೊಡಗು ಜಿಲ್ಲೆಯ ಅಮ್ಮತಿಯಲ್ಲಿರುವ ಕವಾಡಿ ಗ್ರಾಮದಲ್ಲಿ 2 ಆಗಸ್ಟ್‌ 1929ರಲ್ಲಿ ಜನಿಸಿದವರು ಐಯ್ಯಣ್ಣ. ಕುಂಜಿಯಂಡ ಚಿನ್ನಪ್ಪ ಮತ್ತು ಸೀತವ್ವ ಇವರ ತಂದೆ ತಾಯಿ. ಐಯ್ಯಣ್ಣನಿಗೆ ಬಾಲ್ಯದಲ್ಲಿಯೇ ಓಟ ಅಂದ್ರೆ ಅಚ್ಚು ಮೆಚ್ಚು. ಶಾಲೆಗೆ ಹೋಗುವಾಗ ಬರುವಾಗ ನಡೆದುಕೊಂಡು ಬರುವುದಕ್ಕಿಂತ ಓಡುತ್ತಾ ಬರುವುದೇ ಅವರ ಹವ್ಯಾಸವಾಗಿತ್ತು. ಎದೆಷ್ಟೋ ಬಾರಿ ಬಿದ್ದು ಚಿಕ್ಕಪುಟ್ಟ ಗಾಯಮಾಡಿಕೊಂಡಿದ್ದಾರೆ. ಅದ್ರೆ ಓಟದ ಮೇಲೆ ಅವರಿಗಿದ್ದ ಆಸಕ್ತಿ ಕುಗ್ಗಲಿಲ್ಲ. ಶಾಲೆಯಿಂದ ಬಂದವರು ಊರಿನ ಸ್ನೇಹಿತರ ಜೊತೆ ಗುಡ್ಡ ಬೆಟ್ಟಗಳಲ್ಲಿ ಓಡುತ್ತ ಬೆಳೆದವರು. ಪ್ರತಿ ಬಾರಿ ಶಾಲಾ ಕ್ರೀಡಾಕೂಟದಲ್ಲಿಯೂ ಇವರದೇ ಮೇಲುಗೈ ಆಗಿತ್ತು. ಆ ನಂತರ ಅವರು ಸೇರಿದ್ದು ಭಾರತೀಯ ಸೈನ್ಯಕ್ಕೆ.

ಸೈನ್ಯಕ್ಕೆ ಸೇರಿದ್ದೆ ಟರ್ನಿಂಗ್‌ ಪಾಯಿಂಟ್‌
ಐಯ್ಯಣ್ಣ ಓಟ ಗುರುತ್ತಿಸಿದ್ದೇ ಸೇನಾಧಿಕಾರಿಗಳು
ಓಟ ಓಡುತ್ತಾ ಬೆಳೆದ ಐಯ್ಯಣ್ಣಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು, ತಾನು ಭಾರತಾಂಬೆಯ ಸೇವೆ ಮಾಡ್ಬೇಕು ಅನ್ನುವ ಹಂಬಲ ಇರುತ್ತೆ. ಅಂತು ಅವರ ಆಸೆಯಂತೆ ಸೈನ್ಯ ಸೇರಿಕೊಳ್ಳುತ್ತಾರೆ. ಅದುವೇ ಐಯ್ಯಣ್ಣ ಅವರಿಗೆ ಟರ್ನಿಂಗ್‌ ಪಾಯಿಂಟ್‌ ಆಗಿ ಬಿಡುತ್ತೆ. ಐಯ್ಯಣ್ಣ ಅವರಲ್ಲಿರುವ ಪ್ರತಿಭೆಯನ್ನು ಕಮಾಂಡಿಂಗ್‌ ಅಧಿಕಾರಿಗಳ ಕಣ್ಣಿಗೆ ಬೀಳುತ್ತೆ. ಉತ್ತಮ ರತಬೇತಿ ನೀಡಿದರೆ ದೇಶಕ್ಕೆ ಒಂದು ಅದ್ಭುತ ಕೊಡುಗೆ ನೀಡುವ ವ್ಯಕ್ತಿಯಾಗಿ ಐಯ್ಯಣ್ಣ ಬೆಳೆಯುತ್ತಾರೆ ಅಂತ ಸೈನಾಧಿಕಾರಿಗಳಿಗೆ ಅದಾಗಲೇ ಅರ್ಥವಾಗಿ ಬಿಡುತ್ತೆ. ಸೈನ್ಯದ ಕರ್ತವ್ಯದ ನಡುವೆ ತರಬೇತಿ ನೀಡಲಾಗುತ್ತದೆ. ಹಾಗೇ ಅಯ್ಯಣ್ಣ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅನೇಕ ಪದಕ ತರುತ್ತಾರೆ.

1995ರಲ್ಲಿಯೇ ಜೀವನದ ಓಟ ನಿಲ್ಲಿಸಿದ ಹೆಮ್ಮೆಯ ಕನ್ನಡಿಗ
ಮಿಲ್ಖಾ ಸಿಂಗ್‌ ಅವರನ್ನೇ ಸೋಲಿಸಿ ಚಿನ್ನದ ಪದಕ ಗೆದ್ದಿದ್ದು ಐಯ್ಯಣ್ಣ. ಅವರ ಸಾಧನೆ ಇಡೀ ರಾಷ್ಟ್ರಕ್ಕೆ ಹೆಮ್ಮೆ ತರುವಂತಹದ್ದು. ಇಂತಹ ಸಾಧನೆ ಮಾಡಿದ ಅವರು ಸೈನ್ಯದಿಂದ ನಿವೃತ್ತರಾದ ಮೇಲೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ಕೆಲಕಾಲ ಸೇವೆ ಸಲ್ಲಿಸುತ್ತಾರೆ. ಅಲ್ಲಿಯೂ ನಿವೃತ್ತರಾದ ಬಳಿಕೆ ವಿಶ್ರಾಂತಿಯ ಜೀವನ ನಡೆಸುತ್ತಿರುತ್ತಾರೆ. ಆದ್ರೆ, ದುರಾದೃಷ್ಟವಶಾತ್‌ ಅವರ 65ನೇ ವಯಸ್ಸಿನಲ್ಲಿ ಅಂದ್ರೆ 1995ರಲ್ಲಿ ಜೀವನದ ಓಟ ನಿಲ್ಲಿಸುತ್ತಾರೆ. ಅವರ ನಿಧನಕ್ಕೆ ಅನೇಕ ಗಣ್ಯರು, ಕ್ರೀಡಾಪಟುಗಳು ಕಂಬನಿ ಮಿಡಿಯುತ್ತಾರೆ.

ಕೇಳಿದ್ರಲ್ವ, ಐಯ್ಯಣ್ಣ ಅವರ ಪುತ್ರ ಅನಿಲ್‌ ಬೆಳ್ಳಿಯಪ್ಪ ಅವರ ಮಾತನ್ನು. ಅವರು ಹೇಳುವಂತೆ ಮಿಲ್ಖಾ ಸಿಂಗ್‌ ಅವರನ್ನು ಸೋಲಿಸಿರುವ ಬಗ್ಗೆ ಹೆಮ್ಮೆ ಇದೆ. ಆದ್ರೆ, ತಮ್ಮ ತಂದೆಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಪ್ರೋತ್ಸಾಹ ಸಿಕ್ಕರೆ ಇನ್ನು ಹೆಚ್ಚಿನ ಸಾಧನೆ ಮಾಡುತ್ತಿದ್ದರು ಅಂತ ಹೇಳುತ್ತಾರೆ.

ಐಯ್ಯಣ್ಣ ಸಾಧನೆಗೆ ಮನ್ನಣೆ ಬೇಕು
ಸರ್ಕಾರಗಳ ನಿರ್ಲಕ್ಷ ಸಲ್ಲದು
ಕೆಲವು ಕ್ರೀಡಾಪಟುಗಳು ಟ್ರ್ಯಾಕ್‌ ಬಿಟ್ಟ ನಂತರವೂ ಅವರ ಸಾಧನೆಗೆ ಪ್ರಚಾರ ಸಿಗುತ್ತೆ. ಗೌರವ, ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಆದ್ರೆ, ಕೆಲವು ಕ್ರೀಡಾಪಟುಗಳ ಸಾಧನೆ ಮರೆಯಾಗಿ ಬಿಡುತ್ತವೆ. ಸರ್ಕಾರಗಳು ಮರೆತು ಬಿಡುತ್ತವೆ. ಆದ್ರೆ, ಐಯ್ಯಣ್ಣ ಅವರ ಬಗ್ಗೆ ಇನ್ನಷ್ಟು ತಿಳಿಸುವಂತಾಗಬೇಕು. ಅವರ ಸಾಧನೆಗೆ ಗೌರವ ಸಿಗುವ ಕೆಲಸ ಆಗಬೇಕು. ಹಾಕಿ, ಫುಟ್ಬಾಲ್‌, ಬ್ಯಾಡ್ಮಿಂಟ್‌, ಕ್ರಿಕೆಟ್‌, ಟೆನಿಸ್‌, ಅಥ್ಲೆಟಿಕ್ಸ್‌ ಸೇರಿದಂತೆ ಎಲ್ಲಾ ರೀತಿಯ ಕ್ರೀಡೆಗೂ ಕೊಡುಗೆ ನೀಡಿರುವ ಕೊಡಗು ಕ್ರೀಡಾಪಟುಗಳ ಕಾರ್ಖಾನೆ ಇದ್ದಂತೆ. ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಮಿಲ್ಖಾ ಸಿಂಗ್‌ ಅವರನ್ನು ಸೋಲಿಸಿದ್ದು, ನಮ್ಮ ಕನ್ನಡಿಗ ಅನ್ನೋದೆ ನಮ್ಮೆಲ್ಲರಿಗೂ ಹೆಮ್ಮೆ.

The post ‘ಫ್ಲೈಯಿಂಗ್‌ ಸಿಖ್ ಮಿಲ್ಖಾ ಸಿಂಗ್‌’ರನ್ನೇ ಸೋಲಿಸಿದ್ದ ಹೆಮ್ಮೆಯ ಕನ್ನಡಿಗ appeared first on News First Kannada.

Source: newsfirstlive.com

Source link