ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಮುಂದುವರಿಯಲಿದೆ ಮಳೆ | Heavy Rains Exprected in Karnataka Tamil Nadu Andhra Pradesh due to Depression over Bay of Bengal


ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಮುಂದುವರಿಯಲಿದೆ ಮಳೆ

ತಿರುಪತಿಯಲ್ಲಿ ಮಳೆಯಿಂದ ಜಲಾವೃತವಾಗಿರುವ ರಸ್ತೆಗಳು

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತಮಿಳು ಮತ್ತು ಆಂಧ್ರ ಪ್ರದೇಶ ಕರಾವಳಿಯನ್ನು ಶುಕ್ರವಾರ ಮುಂಜಾನೆ ಪ್ರವೇಶಿಸಿದೆ. ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿರುವ ತಡ ಮತ್ತು ಸುಲ್ಲೂರುಪೆಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ರಸ್ತೆ ಮತ್ತು ರೈಲು ಹಳಿಗಳ ಮೇಲೆ ನೀರು ಜೋರಾಗಿ ಹರಿಯುತ್ತಿದೆ. ದಕ್ಷಿಣ ರೈಲ್ವೆಯು ಹಲವು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಿದೆ, ಮಾರ್ಗ ಬದಲಾವಣೆ ಮಾಡಿದೆ.

ಪುದುಚೇರಿ ಮತ್ತು ಚೆನ್ನೈ ನಡುವೆ ಮುಂಜಾನೆ 3ರಿಂದ 4 ಗಂಟೆ ಅವಧಿಯಲ್ಲಿ ಚಂಡಮಾರುತವು ತೀರಪ್ರವೇಶ ಮಾಡಿದೆ. ಬೆಳಿಗ್ಗೆ 5.30ರಿಂದ ಚೆನ್ನೈ ಸುತ್ತಮುತ್ತಲ 60 ಕಿಮೀ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪಶ್ಚಿಮ ಮತ್ತು ವಾಯವ್ಯ ಪ್ರದೇಶಕ್ಕೆ ಮಳೆಮಾರುತಗಳು ತೇಲಿಹೋಗುವ ಸಾಧ್ಯತೆಯಿದ್ದು, ತಮಿಳುನಾಡು ಮತ್ತು ಪುದುಚೇರಿಯ ಹಲವು ಪ್ರದೇಶದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ವ್ಯಾಪಕ ಮಳೆ ಸುರಿಯಲಿದೆ. ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ತಿರುಪತ್ತೂರು, ಈರೋಡ್ ಮತ್ತು ಸೇಲಂ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆಯ ವಲಯ ಕಚೇರಿ ತಿಳಿಸಿದೆ.

ಮಳೆಯ ಜೊತೆಗೆ ಗಂಟೆಗೆ ಸುಮಾರು 65 ಕಿಮೀ ವೇಗದವರೆಗೂ ಗಾಳಿ ಬೀಸುವ ನಿರೀಕ್ಷೆಯಿದೆ. ಆಂಧ್ರ ಪ್ರದೇಶದ ತೀರದಿಂದ ರಾಯಲಸೀಮೆ ಮತ್ತು ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಗಳಿವೆ. ತಿರುಪತಿ ಸುತ್ತಮುತ್ತ ಗುರುವಾರ ಪ್ರವಾಹ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ತಿರುಪತಿಗೆ ಹೋಗುವ ಮತ್ತು ಬರುವ ಎಲ್ಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಡ ಮತ್ತು ಸುಳೂರುಪೆಟ್ಟ ಮಧ್ಯದ ಸೇತುವೆಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಜರತ್ ನಿಜಾಮುದ್ದೀನ್​ಗೆ ಹೋಗುವ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನ ಮಾರ್ಗಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ತಮಿಳುನಾಡಿನ ಚೆನ್ನೈ ಮಹಾನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿ ಮತ್ತು ಕರ್ನಾಟಕ ರಾಜ್ಯಗಳಲ್ಲಿಯೂ ಶಿಕ್ಷಣ ಇಲಾಖೆ ಕೆಲ ಜಿಲ್ಲೆಗಳಲ್ಲಿ ರಜೆ ಘೋಷಿಸಿದೆ.

ಇದನ್ನೂ ಓದಿ: TTD: ತಿರುಪತಿಯಲ್ಲಿ ಭಾರಿ ಮಳೆ, ಪ್ರವಾಹದ ಸ್ಥಿತಿ ನಿರ್ಮಾಣ; ವಿಡಿಯೋ ನೋಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ದಿನ 73.4 ಮಿಮೀ ಮಳೆ: ಇನ್ನೂ ಕೆಲ ದಿನ ಮುಂದುವರಿಯಲಿದೆ ಧಾರಾಕಾರ ಮಳೆ

TV9 Kannada


Leave a Reply

Your email address will not be published. Required fields are marked *