ಬೆಂಗಳೂರು: ಬಡವರು, ಶ್ರೀಮಂತರು ಎಂಬ ಬೇಧ ಈ ಸೋಂಕಿಗೆ ಇಲ್ಲವಾದರೂ, ಇದರ ಅಟ್ಟಹಾಸ ಬಡವರಿಗೆ ಹೆಚ್ಚಿನ ಬರೆ ಎಳೆದಿದೆ. ಅವರ ಬದುಕು ಹೈರಾಣಾಗಿಸಿದೆ.

ಲಾಕ್ ಡೌನ್ ನಿಂದ ಆದಾಯ ಇಲ್ಲ. ಹೊಟ್ಟೆ ತುಂಬಿಸುವುದೇ ಕಷ್ಟ. ಇದರ ಮಧ್ಯೆ ಕೋವಿಡ್ ಪರಿಸ್ಥಿತಿಯ ಕ್ರೌರ್ಯ. ವೈದ್ಯಕೀಯ ಸೌಲಭ್ಯ, ಮಾರ್ಗದರ್ಶನ, ಸುರಕ್ಷಾ ಸಾಧನ, ಚಿಕಿತ್ಸೆ, ಔಷಧ – ಇವೆಲ್ಲವೂ ಬಡವರ ಪಾಲಿಗೆ ಗಗನ ಕುಸುಮ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಡ ಸೋಂಕಿತರಿಗೆ ಅಭಯವಾಗಿ ನಿಂತಿದ್ದಾರೆ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್.

ಕಳೆದ ವರ್ಷ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ನಿಂದ ಹಿಡಿದು ಆಹಾರ ಕಿಟ್ ವರೆಗೂ ಪೂರೈಸಿದ್ದ ಸುರೇಶ್ ಅವರು, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದ ರೈತರಿಂದ ಬೆಳೆ ಖರೀದಿಸಿ ಜನ ಸಾಮಾನ್ಯರಿಗೆ ಉಚಿತವಾಗಿ ಹಂಚಿಕೆ ಮಾಡಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಮಾದರಿ ಕಾರ್ಯಕ್ರಮವನ್ನು ಪಕ್ಷಬೇಧ ಮರೆತು ಅನೇಕರು ರಾಜ್ಯಾದ್ಯಂತ ಅನುಷ್ಠಾನಕ್ಕೆ ತಂದಿದ್ದರು. ಹೀಗೆ ಹತ್ತು ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸುರೇಶ್ ಅವರು ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಜನರ ಜೀವ ರಕ್ಷಣೆಗೆ ತಮ್ಮ ಬದ್ಧತೆ ಮೆರೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನರ ನೆರವಿಗೆಂದು ಬೆಂಗಳೂರಲ್ಲಿ ಪ್ರತ್ಯೇಕ ಕೋವಿಡ್ ಸಹಾಯವಾಣಿ ಕೇಂದ್ರವನ್ನು War Room, ದೂರವಾಣಿ ಸಂಖ್ಯೆ : 080-37121133) ಅವರು ಆರಂಭಿಸಿದ್ದಾರೆ. 12 ಮಂದಿ ಈ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದಾರೆ. 30 ಮಂದಿ ವೈದ್ಯರು ಈ ಸಹಾಯವಾಣಿ ಕೇಂದ್ರದ ಜತೆ ಸಂಯೋಜಿತರಾಗಿದ್ದಾರೆ. ವಾರ್ ರೂಂನ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಸೋಂಕಿತರಿಗೆ ವೈದ್ಯರಿಂದ ಸಲಹೆ, ಚಿಕಿತ್ಸೆ ಮಾರ್ಗದರ್ಶನ ನೀಡುವುದರ ಜತೆಗೆ ಅಗತ್ಯ ಔಷಧಿ ಖರೀದಿಸಲು ಸಾಧ್ಯವಾಗದ ಬಡವರ ಮನೆ ಬಾಗಿಲಿಗೆ ಸುರೇಶ್ ಅವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ, ಉಚಿತವಾಗಿ ಮೆಡಿಕಲ್ ಕಿಟ್ ಕೂಡ ವಿತರಿಸುತ್ತಿದ್ದಾರೆ.

ಈ ಕಿಟ್ ನಲ್ಲಿ ಪಲ್ಸ್ ಆಕ್ಸಿಮೀಟರ್, ದೇಹದ ಉಷ್ಣತೆ ಪರೀಕ್ಷಿಸುವ ಥರ್ಮಾಮೀಟರ್, ವಿವಿಧ ಮಾತ್ರೆ, ಔಷಧಿ, ಮಾಸ್ಕ್, ಸ್ಯಾನಿಟೈಸರ್, ಇರುತ್ತದೆ. ಪ್ರತಿ ಕಿಟ್ ಬೆಲೆ ಸುಮಾರು 3500 ನಿಂದ 4000 ರಷ್ಟಿದ್ದು, ಇದುವರೆಗೂ 2000 ಬಡವರಿಗೆ ಈ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಸುರೇಶ್ ಅವರ ಈ ಸೇವೆಯನ್ನು ಕ್ಷೇತ್ರದ ಜನ ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ.

The post ಬಡ ಸೋಂಕಿತರಿಗೆ ಉಚಿತ ಮೆಡಿಕಲ್ ಕಿಟ್ – ಮುಂದುವರಿದ ಡಿ.ಕೆ ಸುರೇಶ್ ಜನಸೇವೆ appeared first on Public TV.

Source: publictv.in

Source link