
ರಕ್ಷಿತ್ ಶೆಟ್ಟಿ
Rakshit Shetty | Saptha Sagaradache Ello: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಇದರಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಟಪ್ ಗಮನ ಸೆಳೆಯುತ್ತಿದೆ.
‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (Rakshit Shetty) ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಲಿದೆ. ಅದರ ಜೊತೆಗೆ ರಕ್ಷಿತ್ ಶೆಟ್ಟಿ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆಯೂ ಕೌತುಕ ಮೂಡಿದೆ. ನಿರ್ದೇಶಕ ಹೇಮಂತ್ ಎಂ. ರಾವ್ (Hemanth M Rao) ಆ್ಯಕ್ಷನ್-ಕಟ್ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಅವರು ತುಂಬ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ’ (Saptha Sagaradache Ello) ಸಿನಿಮಾ ಮೇಲೆ ಕೌತುಕ ಮೂಡುವಂತಾಗಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಅವರ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಿಗೆ ತುಂಬ ನಿರೀಕ್ಷೆ ಇದೆ. ಈಗ ರಕ್ಷಿತ್ ಶೆಟ್ಟಿ ಅವರ ಈ ಹೊಸ ಪೋಸ್ಟರ್ ವೈರಲ್ ಆಗುತ್ತಿದೆ. ಇದನ್ನು ನೋಡಿ ಅನೇಕ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಮಾಧ್ಯಮಗಳ ಎದುರು ರಕ್ಷಿತ್ ಕಾಣಿಸಿಕೊಂಡಾಗ ಅವರು ಕೊಂಚ ದಪ್ಪ ಆಗಿದ್ದಾರೆ ಎಂಬುದು ಎಲ್ಲರ ಗಮನಕ್ಕೂ ಬಂತು. ಅಷ್ಟಕ್ಕೂ ಅವರು ದೇಹದ ತೂಕ ಹೆಚ್ಚಿಸಿಕೊಂಡಿದ್ದು ಯಾಕೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಬೇರೆ ಬೇರೆ ಗೆಟಪ್ ಧರಿಸಲಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್ಗಳಲ್ಲಿ ಅವರು ಲವರ್ ಬಾಯ್ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್ ಶೆಟ್ಟಿ ಲುಕ್ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್ ಮೂಲಕ ಉತ್ತರ ಸಿಕ್ಕಿದೆ.