ಬದ್ಧವೈರಿಗಳಂತಾಡುತ್ತಿದ್ದ ರೇಣುಕಾಚಾರ್ಯ ಮತ್ತು ಬಸನಗೌಡ ಯತ್ನಾಳ್ ಆಪ್ತ ಸಮಾಲೋಚನೆ ನಡೆಸಿದರು! | Known for rivalry between them BJP MLAs Renukacharya and Basangouda Yatnal hold one on one talks Thursday


ಹಾವು ಮುಂಗುಸಿಯಂತಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ (Basangouda Patil Yatnal) ಪಾಟೀಲ ಯತ್ನಾಳ್ ನಡುವೆ ದೋಸ್ತಿ ಕುದುರಿದಂತಿದೆ ಮಾರಾಯ್ರೇ. ಈ ವಿಡಿಯೋನಲ್ಲಿ ಅವರಿಬ್ಬರು ಆಪ್ತ ಸ್ನೇಹಿತರಂತೆ ಮಾತಾಡುತ್ತಿರುವುದು ಯಾವುದೋ ಹಳೆಯ ಜಮಾನಾದ್ದಲ್ಲ. ಇಂದು ಅಂದರೆ, ಗುರುವಾರ ಬೆಳಗ್ಗೆ ವಿಕಾಸ ಸೌಧದ (Vikasa Soudha) ತಮ್ಮ ಕಚೇರಿಯಲ್ಲಿ ರೇಣುಕಾಚಾರ್ಯ, ಯತ್ನಾಳರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು. ಬಸವರಾಜ ಬೊಮ್ಮಾಯಿ ಅವರ ಸಂಪುಟ ರೀಜಿಗ್ ಅಗಬಹುದಾದ ವದಂತಿಗಳ ಹಿನ್ನೆಲೆಯಲ್ಲಿ ಇವರಿಬ್ಬರು ಭೇಟಿಯಾಗಿ ಮಾತುಕತೆ ನಡೆಸಿರುವುದು ಬಿಜೆಪಿ ಪಕ್ಷ ಮತ್ತು ರಾಜಕೀಯ ವಲಯಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ರೇಣುಕಾಚಾರ್ಯ ಮತ್ತು ಯತ್ನಾಳ್ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದೆವೆಂದು ಹೇಳಿದರಾದರೂ ಅವರಿಬ್ಬರೇ ಕುಳಿತು ಚರ್ಚಿಸುವ ವಿದ್ಯಮಾನ ರಾಜ್ಯದಲ್ಲಿ ಯಾವುದೂ ಇಲ್ಲ.

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಸರಿದ ನಂತರ ಸರ್ಕಾರ ಮತ್ತು ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಹಳಷ್ಟು ನಾಯಕರಿಗೆ ಬೊಮ್ಮಾಯಿ ಅವರು ಬಿ ಎಸ್ ವೈ ಅವರ ಸ್ಥಾನಕ್ಕೆ ಬರುವುದು ಬೇಕಿರಲಿಲ್ಲ. ಅವರೆಲ್ಲ ಬೂದಿ ಮುಚ್ಚಿದ ಕೆಂಡದಂತಿದ್ದಾರೆ. ಮೊನ್ನೆ ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆಯನ್ನು ತಡೆಯಲು ಬಿಜೆಪಿ ಸರ್ಕಾರ ವಿಫಲಗೊಂಡಿದ್ದು ದೆಹಲಿ ವರಿಷ್ಠರ ಕಣ್ಣು ಕೆಂಪಾಗಿಸಿದೆ. ಹೈಕೋರ್ಟ್ ಸಹ ಛೀಮಾರಿ ಹಾಕಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮುಖ್ಯಮಂತ್ರಿಗಳು ತೀವ್ರ ಸ್ವರೂಪದ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಆಡಳಿತ ಯಂತ್ರ ಕುಸಿದಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಎಲ್ಲದರ ನಡುವೆ ಸಂಪುಟ ಪುನಾರಚನೆ ಕುರಿತು ಮಾತು ಕೇಳಿಬರುತ್ತಿವೆ. ರೇಣುಕಾಚಾರ್ಯ ಮತ್ತು ಯತ್ನಾಳ್ ಒಬ್ಬರೂ ಸಚಿವಾಕಾಂಕ್ಷಿಗಳು. ಅಷ್ಟ್ಯಾಕೆ, ಯತ್ನಾಳ್ ಗೆ ಮುಖ್ಯಮಂತ್ರಿಯಾಗುವ ಕನಸಿದೆ ಎಂದು ಅವರ ಪಕ್ಷದವರೇ ಹೇಳುತ್ತಾರೆ.

ಕೇವಲ 6-7 ತಿಂಗಳ ಹಿಂದೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಅವರು ಕಾಂಗ್ರೆಸ್ ಏಜೆಂಟ್ ಅಂತೆಲ್ಲ ಕೂಗಾಡಿದ್ದ ರೇಣುಕಾಚಾರ್ಯಗೆ ಈಗ್ಯಾಕೆ ಅವರ ಪ್ರೀತಿ ಉಕ್ಕಿ ಬಂದಿದೆ ಎಂದು ಅರ್ಥವಾಗುತ್ತಿಲ್ಲ ಮಾರಾಯ್ರೇ!

TV9 Kannada


Leave a Reply

Your email address will not be published. Required fields are marked *