ನೆಚ್ಚಿನ ನಟ ನಟಿಯರು ಅಥವಾ ಕ್ರಿಕೆಟ್​ ಸ್ಟಾರ್​ಗಳು ಯಾವುದಾದ್ರೂ ವಸ್ತುವಿನ ಜಾಹೀರಾತು ನೀಡಿದಾಗ ಅವರ ಅಭಿಮಾನಿಗಳು ಅದರಿಂದ ಇನ್​ಫ್ಲುಯೆನ್ಸ್​ ಆಗ್ತಾರೆ. ಸ್ಟಾರ್​ಗಳು ಎಂಡಾರ್ಸ್​ ಮಾಡಿದ ವಸ್ತುವಿನ ಖರೀದಿಗೆ ಮುಂದಾಗ್ತಾರೆ. ಹೀಗಾಗಿಯೇ ಹಲವಾರು ಬ್ರ್ಯಾಂಡ್​ಗಳು ತಮ್ಮ ರಾಯಭಾರಿಯಾಗಿ ಸೆಲೆಬ್ರಿಟಿಗಳ ಮೊರೆ ಹೋಗುತ್ತವೆ. ಆದ್ರೆ ಅದೇ ಸ್ಟಾರ್​ಗಳಿಂದ ಒಂದು ಬ್ರ್ಯಾಂಡ್​ನ ಡೀಎಂಡಾರ್ಸ್​ ಕೂಡ ಆಗಬಹುದು ಅನ್ನೋದಕ್ಕೆ ತಾಜಾ ಉದಾಹರಣೆ ರೋನಾಲ್ಡೋ ಅವರ ವಿಡಿಯೋ.

ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸುದ್ದಿಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಅವರ ಈ ಒಂದು ನಡೆಯಿಂದ ಕೊಕಾಕೋಲಾ ಕಂಪನಿಗೆ ಭಾರೀ ನಷ್ಟ ಉಂಟಾಗಿದೆ.

ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮೇಜಿನ ಮೇಲೆ ಕೊಕಾಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ ರೊನಾಲ್ಡೊ, ಬಾಟಲಿಗಳನ್ನು ದೂರ ಸರಿಸಿ, ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಅಂತ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಕೋಕಾಕೋಲಾದ ಮಾರುಕಟ್ಟೆ ಮೌಲ್ಯ ಇಳಿಕೆ ಕಂಡಿದೆ.

ಅಂದ್ಹಾಗೆ ರೊನಾಲ್ಡೊ ತಮ್ಮ ಬಾಡಿ ಫಿಟ್​ನೆಸ್​ ಉತ್ತಮ ರೀತಿಯಲ್ಲಿ ಕಾಪಾಡಿಕೊಂಡಿದ್ದಾರೆ ಎಂಬುದು ಗುಟ್ಟಾಗೇನಿಲ್ಲ. 36ನೇ ವಯಸ್ಸಿನಲ್ಲೂ ಈ ಪೋರ್ಚುಗೀಸ್ ಸೂಪರ್​​ಸ್ಟಾರ್​ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ಆಟಗಾರರೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದಾರೆ. ತಮ್ಮ ಮ್ಯಾನೇಜರ್ ಫರ್ನಾಂಡೊ ಸ್ಯಾಂಟೋಸ್ ಅವರೊಂದಿಗೆ ಪೋರ್ಚುಗಲ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ರೊನಾಲ್ಡೊ ಆಗಮಿಸುತ್ತಿದ್ದಂತೆ, ಕೋಕಾ-ಕೋಲಾದ ಎರಡು ಬಾಟಲಿಗಳನ್ನು ನೋಡಿ, ಅವರನ್ನ ಕ್ಯಾಮೆರಾ ಕಣ್ಣಿನಿಂದ ಮರೆಯಾಗುವಂತೆ ಸಂಪೂರ್ಣವಾಗಿ ತೆಗೆದು ಸೈಡಿಗಿಟ್ಟರು.

ಕೋಕಾಕೋಲಾ ಬ್ರ್ಯಾಂಡ್​ ವ್ಯಾಲ್ಯೂ 29 ಸಾವಿರ ಕೋಟಿ ಕುಸಿತ
ರೊನಾಲ್ಡೋ ಗ್ಲೋಬಲ್ ಸೂಪರ್​ಸ್ಟಾರ್. ಆನ್​ಫೀಲ್ಡ್​ ಆಗಲೀ, ಆಫ್​ ಫೀಲ್ಡ್​ ಆಗಲಿ ಅವರು ಏನೇ ಮಾಡಿದರೂ ಅದರ ಪರಿಣಾಮ ಇದ್ದೇ ಇರುತ್ತೆ. ಕೋಲಾ ಬಾಟಲಿ ಸರಿಸಿ, ನೀರು ಕುಡಿಯಿರಿ ಅಂತ ಅವರು ಸಲಹೆ ನೀಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕೊಕಾಕೋಲಾ ಕಂಪನಿಯ ಮಾರುಕಟ್ಟೆ ಮೌಲ್ಯ 4 ಬಿಲಿಯನ್ ಡಾಲರ್(ಸುಮಾರು 29 ಸಾವಿರ ಕೋಟಿ ರೂಪಾಯಿ)ಯಷ್ಟು ಕುಸಿದಿದೆ.​​

ಕೋಕಾಕೋಲಾ ಯುರೋ 2020ರ ಪ್ರಾಯೋಜಕರಲ್ಲಿ ಒಂದಾಗಿದೆ. ಹೀಗಿದ್ರೂ ಕೂಡ ರೊನಾಲ್ಡೊ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಹಿಂದೇಟು ಹಾಕಲಿಲ್ಲ. ಪ್ರತಿಯೊಬ್ಬರೂ ನೀರನ್ನು ಕುಡಿಯಿರಿ ಎಂದು ಒತ್ತಾಯಿಸಿದರು. ರೊನಾಲ್ಡೊ ಅವರ ವಿಡಿಯೋ ವೈರಲ್ ಆದ ನಂತರ  ಕೋಕಾಕೋಲಾದ ಷೇರು ಬೆಲೆ 56.10 ಡಾಲರ್​ನಿಂದ 55.22 ಡಾಲರ್​ಗೆ ಇಳಿದಿದೆ ಎಂದು ವರದಿಯಾಗಿದೆ. ಷೇರು ಬೆಲೆ ಶೇಕಡ 1.6 ರಷ್ಟು ಕಡಿಮೆಯಾಗಿದೆ. ಇದರಿಂದ ಬ್ರಾಂಡ್‌ನ ಮಾರುಕಟ್ಟೆ ಮೌಲ್ಯ 242 ಬಿಲಿಯನ್​ ಡಾಲರ್​ನಿಂದ 238 ಬಿಲಿಯನ್ ಡಾಲರ್ ಇಳಿದಿದೆ​(4 ಬಿಲಿಯನ್ ಡಾಲರ್ ಕುಸಿತ).

ಕೋಕಾಕೋಲಾ ಪ್ರತಿಕ್ರಿಯೆ
ಈ ಹಿನ್ನೆಲೆ ಕೋಕಾಕೋಲಾ ಕಂಪನಿ ಪ್ರತಿಕ್ರಿಯೆ ನೀಡಿದ್ದು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದೆ. ಜನರು ವಿಭಿನ್ನ ಅಭಿರುಚಿಗಳು ಮತ್ತು ಅಗತ್ಯಗಳನ್ನು ಹೊಂದಿರುವುದರಿಂದ ಪ್ರತಿಯೊಬ್ಬರೂ ತಮಗೆ ಬೇಕಾದ ಪಾನೀಯಕ್ಕೆ ಆದ್ಯತೆ ನೀಡಲು ಅರ್ಹರಾಗಿದ್ದಾರೆ ಎಂದು ಕಂಪನಿ ಹೇಳಿಕೆ ನೀಡಲು ನಿರ್ಧರಿಸಿದೆ ಅಂತ ವರದಿಯಾಗಿದೆ. ಯುರೋ 2020 ಪಂದ್ಯಾವಳಿಯ ವಕ್ತಾರರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ಪತ್ರಿಕಾಗೋಷ್ಠಿಗಳಿಗೆ ಆಗಮಿಸಿದಾಗ ಆಟಗಾರರಿಗೆ ಕೋಕಾಕೋಲಾ, ಕೋಕಾಕೋಲಾ ಝೀರೋ ಶುಗರ್ ಜೊತೆಗೆ ನೀರನ್ನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ರೊನಾಲ್ಡೊ ಇನ್ಸ್​​ಟಾಗ್ರಾಂನಲ್ಲಿ ಸುಮಾರು  30 ಕೋಟಿ ಫಾಲೋವರ್ಸ್​ ಹೊಂದಿದ್ದಾರೆ. ಅವರು ಕೋಕಾಕೋಲಾವನ್ನು ತಿರಸ್ಕರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಹಲವಾರು ಅಭಿಮಾನಿಗಳು ಇದನ್ನ ವ್ಯಾಪಕವಾಗಿ ಶೇರ್ ಮಾಡ್ತಿದ್ದಾರೆ. ಇದು ಕೋಕಾಕೋಲಾದ ಸ್ಟಾಕ್ ಬೆಲೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

 

The post ಬರೀ ಕೋಕಾಕೋಲಾ ಬಾಟಲ್ ಎತ್ತಿಟ್ಟಿದ್ದಕ್ಕೇ ₹29,000 ಕೋಟಿ ಲಾಸ್; ಇದು ರೋನಾಲ್ಡೋ ಪವರ್ appeared first on News First Kannada.

Source: newsfirstlive.com

Source link