ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ ವರುಣದೇವ.. ಎಲ್ಲೆಲ್ಲಿ ಏನೆಲ್ಲಾ ಆಗ್ತಿದೆ..?


ಬೆಂಗಳೂರು: ರಾಜ್ಯಾದ್ಯಂತ ಆರ್ಭಟಿಸುತ್ತಿರೋ ಮಳೆರಾಯನ ಅಬ್ಬರಕ್ಕೆ ಕರುನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಗೆ ಮನೆಗಳನ್ನ, ಬೆಳೆಗಳನ್ನ ಕಳೆದುಕೊಂಡು ಜನರು ಕಂಗಾಲಾಗಿ ಹೋಗಿದ್ದಾರೆ. ನೆಮ್ಮದಿಯನ್ನು ಕಿತ್ತುಕೊಂಡ ಹೋದ ನೆರೆರಾಯ ಈಗ ಜನರ ಬದುಕನ್ನೆ ನರಕ ಮಾಡಿದ್ದಾನೆ.

ಮಳೆರಾಯನ ಆರ್ಭಟದಿಂದ ಗ್ರಾಮಗಳು ಜಲದಿಗ್ಭಂಧನಕ್ಕೊಳಗಾಗಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಮಳೆ ನೀರಲ್ಲಿ ಕೊಚ್ಚಿ ಹೋಗುತ್ತಿದೆ. ರಾಂಗ್ ಟೈಮಲ್ಲಿ ಎಂಟ್ರಿ ಕೊಟ್ಟು ಶ್ರಮದ ಫಲ ನೆಲಕಚ್ಚುವಂತೆ ಮಾಡಿರೋ ವರುಣನನ್ನು ರೈತರು ಮನದಲ್ಲೇ ಶಪಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ
ಬಿಟ್ಟು ಬಿಡದೆ ಸುರಿದ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸುಮಾರು 360ಕ್ಕೂ ಹೆಚ್ಚು ಮನೆಗಳು ನೆಲಕ್ಕೂರುಳಿವೆ. ಮನೆ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ನಿನ್ನೆ ಒಂದೇ ದಿನ ಸುರಿದ ಮಳೆಗೆ ಬಾಗೇಪಲ್ಲಿ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಪೆಟ್ರೋಲ್​​​ ಬಂಕ್, ಮಾರ್ಕೇಟ್​​​​, ದೇವಸ್ಥಾನ ಸೇರಿ ತಗ್ಗು ಪ್ರದೇಶದ ಹಲವೆಡೆ ನೀರು ನುಗ್ಗಿದ್ದು, ವಾಹನಗಳು ಜಲಾವೃತವಾಗಿವೆ. ಇನ್ನೂ ನದಿಗಳು ತುಂಬಿ ಹರಿಯುತ್ತಿದ್ದು, ಸೇತುವೆ ಮೇಲೆ ಜನರು ಓಡಾಡದಂತೆ ಎಚ್ಚರಿಕೆ ವಹಿಸಲಾಗಿದೆ. ಪ್ರತೀ ಹೋಬಳಿಯಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಗದಗ ಜಿಲ್ಲೆಯಲ್ಲಿ ನಿರಂತರ ಮಳೆಗೆ ಬೆಳೆ ನಾಶ, ಕಂಗಾಲಾದ ರೈತ


ಗದಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರೈತರ ಬದುಕು ಬೀದಿಗೆ ಬಂದಿದೆ. ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ನರಗುಂದ, ರೋಣ, ಗಜೇಂದ್ರಗಡ ಸೇರಿದಂತೆ ಹಲವು ಕಡೆ ಜಿಟಿಜಿಟಿ ಮಳೆಯಾಗುತ್ತಿದೆ.

ಅದರಲ್ಲೂ ಗದಗ ತಾಲೂಕಿನ ಹುಲಕೋಟಿ ಗ್ರಾಮದ ರೈತರು ಶೇಂಗಾ ಕಟಾವು ಮಾಡಿ, ರಾಶಿ ಮಾಡೂವಷ್ಟರಲ್ಲಿ ಮಳೆ ಸುರಿದಿದೆ. ಹೀಗಾಗಿ ಜಮೀನಿನಲ್ಲಿ ಬೆಳೆ ಕೊಳೆಯುವಂತಾಗಿದೆ. ಅಲ್ಲದೆ ಜಿಟಿಜಿಟಿ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಮೆಣಸಿನಕಾಯಿ ಬೆಳೆ ರೋಗಕ್ಕೆ ತುತ್ತಾಗುತ್ತಿದೆ. ಇನ್ನೂ ಈರುಳ್ಳಿ ನಿರಂತರ ಮಳೆಗೆ ಕೊಳೆತು ಹೋಗುತ್ತಿದೆ. ಒಂದೇ ವಾರದಲ್ಲಿ 28.40 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ.

ಕೊಪ್ಪಳದ ನಡುಗಡ್ಡೆಯಲ್ಲಿ ಸಿಲುಕಿದ ನಾಲ್ವರ ರಕ್ಷಣೆ
ಕೊಪ್ಪಳದ ತುಂಗಾಭದ್ರ ನದಿದಂಡೆಯ ಶಿವಪುರ ಗ್ರಾಮದಲ್ಲಿ, ನಡುಗಡ್ಡೆಯಲ್ಲಿ ಸಿಲುಕಿದ ನಾಲ್ವರನ್ನು ರಕ್ಷಿಸಲಾಗಿದೆ. ನಿನ್ನೆ ದನಗಳನ್ನು ಮೇಯಿಸಲು ಹೋಗಿದ್ದ ಮಂಜುನಾಥಮತ್ತು ಚಂದ್ರಶೇಖರ್​ ಹಾಗೂ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ವರಾವ್ ಬೇಬಿ ಎನ್ನುವ ದಂಪತಿಗಳ ರಕ್ಷಣೆ ಮಾಡಲಾಗಿದೆ. ನಿನ್ನೆ ತುಂಗಾಭದ್ರ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿತ್ತು, ಇದರಿಂದ ನಡುಗಡ್ಡೆಯಲ್ಲಿಯೇ ದನಗಾಯಿಗಳು ಹಾಗೂ ದಂಪತಿ ಸಿಲುಕಿದ್ದರು.

ಹಾವೇರಿಯಲ್ಲೂ ಆರ್ಭಟಿಸಿದ ಮಳೆರಾಯ
ಹಾವೇರಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಭೇಟಿ ನೀಡಿ, ಮಳೆಹಾನಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ತಕ್ಷಣವೇ ವರದಿ ಕೊಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೂಲೈನಿಂದ ಇದುವರೆಗೂ ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದ ಬೆಳ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡೋಕೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ವರದಿ ಬಂದ ತಕ್ಷಣವೇ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗುವುದು ಅಂತ ಬಿ.ಸಿ ಪಾಟೀಲ್​ ಭರವಸೆ ನೀಡಿದ್ದಾರೆ.

ಅಂದ್ಹಾಗೆ ರಾಜ್ಯದ ಹಲವೆಡೆ ಜನರ ಬದುಕೆ ಕುಸಿದು ಬಿದ್ದಂತೆ ಆಗಿದೆ. ಅಕಾಲಿಕವಾಗಿ ಎಂಟ್ರಿ ಕೊಟ್ಟಿರೋ ವರುಣನ ಅಬ್ಬರಕ್ಕೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅದರಲ್ಲೂ ಫಲವತ್ತಾಗಿ ಬೆಳೆದಿದ್ದ ಬೆಳೆ ಕಂಡು ಖುಷಿ ಪಟ್ಟಿದ್ದ ಅನ್ನದಾತನ ಮುಖದಲ್ಲಿನ ನಗುವನ್ನೇ ಮಳೆರಾಯ ಕಸಿದುಕೊಂಡಿದ್ದಾನೆ. ಸರ್ಕಾರ ಇತ್ತ ಗಮನಹರಿಸಿ, ನೊಂದವರಿಗೆ ಆಸರೆಯಾಗಬೇಕಿದೆ.

The post ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ ವರುಣದೇವ.. ಎಲ್ಲೆಲ್ಲಿ ಏನೆಲ್ಲಾ ಆಗ್ತಿದೆ..? appeared first on News First Kannada.

News First Live Kannada


Leave a Reply

Your email address will not be published. Required fields are marked *