ಬರೋಬ್ಬರಿ ಮೂರು ಮದುವೆಯಾದ ಯೋಧ.. ಪೊಲೀಸ್​ ಠಾಣೆ ಮೆಟ್ಟಿಲೇರಿದ 2ನೇ ಪತ್ನಿ


ಹುಬ್ಬಳ್ಳಿ: ಯೋಧರೆಂದ್ರೆ ಯಾರು? ದೇಶದ ಜನ ಸುರಕ್ಷಿತವಾಗಿರಬೇಕು ಅಂತ ಹಗಲು-ರಾತ್ರಿ ನಿದ್ದೆಗೆಟ್ಟು ದೇಶದ ಗಡಿಯಲ್ಲಿ ನಿಂತು ನಮ್ಮನ್ನೆಲ್ಲಾ ಕಾಯೋರು. ಆದ್ರೆ, ಇಲ್ಲೊಬ್ಬ ಯೋಧ, ದೇಶದ ಗಡಿ ಕಾಯೋದು ಬಿಟ್ಟು, ಮೂವರು ಮಹಿಳೆಯರ ಬಾಳಲ್ಲಿ ಚೆಲ್ಲಾಟವಾಡಿರೋ ಆರೋಪ ಕೇಳಿ ಬಂದಿದೆ.

ನಾನು, ನನ್ನ ಹೆಂಡ್ತೀರು ಅಂತ ಸಿನಿಮಾದಲ್ಲಿ ರವಿಮಾಮ ಇಬ್ಬರು ಹೆಂಡ್ತಿಯರ ಜೊತೆ ಡುಯೆಟ್ ಹಾಡಿದ್ರೆ, ಇಲ್ಲೊಬ್ಬ ಯೋಧ ಒಬ್ರಲ್ಲ, ಇಬ್ರಲ್ಲ ಬರೋಬ್ಬರಿ ಮೂವರು ಹೆಂಡ್ತಿಯರನ್ನ ಮದುವೆ ಆಗಿ ಮೋಸ ಮಾಡಿದ್ದಾನಂತೆ. ಬಿಎಸ್​ಎಫ್​ ಯೋಧನಾಗಿದ್ದುಕೊಂಡು ಕೈಕೊಟ್ಟ ಆರೋಪ ಹೊತ್ತಿರುವ ಈ ಸುರಸುಂದರಾಂಗನ ಹೆಸರು ಗುರುಸಿದ್ದಪ್ಪ ಶಿರೋಳ ಅಂತಾ.. ಹುಬ್ಬಳ್ಳಿ ತಾಲೂಕಿನ ನಲವಡಿ ಗ್ರಾಮದ ಗುರುಸಿದ್ದಪ್ಪ, ಸದ್ಯ ಪಂಜಾಬ್​​ನಲ್ಲಿ ಬಿಎಸ್ಎಫ್ ಯೋಧನಾಗಿ ಕರ್ತವ್ಯದಲ್ಲಿದ್ದಾರೆ. ಆದ್ರೀಗ ದೇಶ ಕಾಯೋ ಯೋಧನ ಮೇಲೆ ಮೂವರ ಜೊತೆ ಮಳ್ಳಾಟವಾಡಿದ ಆರೋಪ ಕೇಳಿಬಂದಿದೆ.

‘ನಾನೂ ನನ್ನ ಮೂವರು ಹೆಂಡ್ತೀರು’
ಮ್ಯಾಟ್ರಿಮೋನಿಯಾದಲ್ಲಿ ಮಂಜುಳಾರನ್ನ ಪರಿಚಯಿಸಿಕೊಂಡು 2ನೇ ಮದುವೆ

2015 ರಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ದೀಪಾ ಜೊತೆಗೆ ಗುರುಸಿದ್ದಪ್ಪ ಅರೆಂಜ್ಡ್ ಮ್ಯಾರೇಜ್ ಆಗಿದ್ದ. ಅಲ್ಲದೇ ಈ ದಂಪತಿಗೆ ಓರ್ವ ಮುದ್ದಾದ ಮಗು ಕೂಡ ಇದೆ. ಆದ್ರೆ ದೀಪಾ ಹಾಗೂ ಗುರುಸಿದ್ದಪ್ಪ ನಡುವೆ ಪದೇ ಪದೇ ಜಗಳವಾಗ್ತಿತ್ತು. ಗುರುಸಿದ್ದಪ್ಪ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ್ತಿದ್ದ ಕಾರಣಕ್ಕೆ ದೀಪಾ ಗುರುಸಿದ್ದಪ್ಪನನ್ನು ಬಿಟ್ಟು ತವರು ಮನೆ ಸೇರಿದ್ದರು. ಈ ಗ್ಯಾಪ್​ಲ್ಲೇ ಮ್ಯಾಟ್ರಿಮೋನಿಯಾದಲ್ಲಿ ಮಂಜುಳಾ ಎಂಬವರನ್ನು ಪರಿಚಯಿಸಿಕೊಂಡು ಎರಡನೇ ಮದುವೆ ಆಗಿದ್ದಾನೆ. ಎರಡನೆಯ ಮದುವೆ ನಂತರ ಮಂಜುಳಾ ಜೊತೆ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದ. ಆದ್ರೀಗ ಮಂಜುಳಾಗೂ ಮೋಸ ಮಾಡಿ ಸುಧಾ ಎಂಬವರ ಜೊತೆ ಗುರುಸಿದ್ದಪ್ಪ ಮೂರನೇ ಮದುವೆ ಆಗಿದ್ದಾನೆ.

ಸದ್ಯ, ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡನೇ ಪತ್ನಿ ಮಂಜುಳಾ ದೂರು ದಾಖಲಿಸುವ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇತ್ತ, ತವರು ಮನೆ ಸೇರಿರುವ ಮೊದಲ ಹೆಂಡತಿ ದೀಪಾ ನ್ಯಾಯಕ್ಕಾಗಿ ಅಲೆದಾಟ ನಡೆಸ್ತಿದ್ದಾರೆ. ಒಟ್ಟು 3 ಮದುವೆಯಾಗಿರೋ ಪತಿ ಮಹಾಶಯನ ಕರ್ಮಕಾಂಡ ಕೇಳಿ ರೋಸಿಹೋದ ಮೊದಲೆರೆಡು ಹೆಂಡ್ತೀರು, ಇಂತಹ ಅನ್ಯಾಯ ಮತ್ಯಾರಿಗೂ ಆಗಬಾರದು ಅಂತಾ ಅಳಲು ತೋಡಿಕೊಳ್ತಿದ್ದಾರೆ.

ಇನ್ನೊಂದ್ಕಡೆ, ಮೂರನೇ ಹೆಂಡತಿಗೂ ತನ್ನ ಗಂಡನ ಹಿಸ್ಟರಿ ಬಗ್ಗೆ ಗೊತ್ತಿದ್ಯೋ ಇಲ್ವೋ? ಸದ್ಯ, ಯೋಧನ ಮೇಲೆ ಆರೋಪ ಕೇಳಿಬಂದ ಹಿನ್ನೆಲೆ, ಪೊಲೀಸರ ತನಿಖೆ ಆರಂಭವಾಗಿದೆ. ಅನ್ಯಾಯಕ್ಕೊಳಗಾದ ಆರೋಪ ಮಾಡ್ತಿರೋ ಮಹಿಳೆಯರಿಗೆ ನ್ಯಾಯ ಸಿಗುತ್ತಾ? ಅನ್ನೋದನ್ನ ಕಾದುನೋಡ್ಬೇಕಿದೆ.

ವರದಿ: ದುರ್ಗೇಶ ನಾಯಿಕ, ನ್ಯೂಸ್​ಫಸ್ಟ್ ಹುಬ್ಬಳ್ಳಿ

News First Live Kannada


Leave a Reply

Your email address will not be published. Required fields are marked *