ಕೊಪ್ಪಳ: ಕೋವಿಡ್ ಸೋಂಕು ತಗುಲಿ ಸತತ 158 ದಿನ ಚಿಕಿತ್ಸೆ ಪಡೆದು ಮಹಿಳೆಯೊಬ್ಬರು ಗುಣವಾಗಿ ಪುನರ್ಜನಮ್ಮ ಪಡೆದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು.ರಾಜ್ಯದಲ್ಲಿಯೇ ಇಷ್ಟು ಅವಧಿ ಚಿಕಿತ್ಸೆ ಪಡೆದು ಗುಣವಾದ ಮೊದಲ ಪ್ರಕರಣ ಇದಾಗಿದ್ದು, ವೈದ್ಯರ ಕಾರ್ಯವನ್ನು ಶ್ಲಾಘಿಸಲಾಗಿದೆ.
ಹೌದು! ಹೀಗೆ ಬೆಡ್ ಮೇಲೆ ಮಲಗಿರುವ ಮಹಿಳೆ ಕೋವಿಡ್ ಸೋಂಕಿನೊಂದಿಗೆ ಹೋರಾಟ ಮಾಡಿ ಬದುಕಿದ್ದು, ಇಂದು ಡಿಸ್ಚಾರ್ಜ್ ಆಗುತ್ತಿದ್ದಾರೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಬಹುತೇಕರು ಹೆಚ್ಚೆಂದರೆ ಮೂರು ತಿಂಗಳ ಚಿಕತ್ಸೆ ಪಡೆದಿದ್ದಾರೆ. ಸಾಮಾನ್ಯ ರೋಗ ಲಕ್ಷಣ ಇದ್ದವರೂ ಮೃತಪಟ್ಟಿದ್ದಾರೆ. ಆದರೆ ಕೊಪ್ಪಳದ 43 ವರ್ಷದ ಗೀತಾ ಎಂಬ ಮಹಿಳೆಯೊಬ್ಬರು ಜುಲೈನಲ್ಲಿ ಸೋಂಕು ತಗುಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸಿಟಿ ಸ್ಕ್ಯಾನ್ ನಲ್ಲಿ ಸಂಪೂರ್ಣ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದರು, ವೆಂಟಿಲೇಟರ್ ನಲ್ಲಿ 108 ದಿನ, ಎಚ್ಎಫ್ ಎನ್ಸಿ ವೆಂಟಿಲೇಟರ್ ನಲ್ಲಿ 8 ದಿನ ಚಿಕಿತ್ಸೆ ಪಡೆದಿದ್ದಾರೆ. 32 ದಿನ ಆಕ್ಸಿಜೆನ್ ಬೆಡ್ ನಲ್ಲಿದ್ದು ಕೊನೆಗೂ ಮರು ಜನ್ಮ ಪಡೆದು ಬದುಕಿ ಬಂದಿದ್ದಾರೆ.
ಕೋವಿಡ್ ಸಮಯದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳಿದ್ದವು. ಆದರೆ, ಇನ್ನೇನು ಸತ್ತು ಹೋಗುತ್ತಿದ್ದ ರೋಗಿಗೆ ಸತತ 158 ದಿನ ಚಿಕಿತ್ಸೆ ನೀಡಿ ವೈದ್ಯರು ಬದುಕಿಸಿದ್ದು, ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಉತ್ತಮ ಚಿಕಿತ್ಸೆ, ರೋಗಿ ಧೈರ್ಯ ಇದ್ದರೆ ಕೋವಿಡ್ ಗೆಲ್ಲಬಹುದು ಎಂಬುದಕ್ಕೆ ಈ ಪ್ರಕರಣ ನಿದರ್ಶನ ಎನ್ನಬಹುದು. ಹಾಗಾಗಿ ಸಕಲ ಗೌರವಗಳೊಂದಿಗೆ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ಬೀಳ್ಕೊಟ್ಟರು.
ಒಟ್ಟಾರೆ ಒಮಿಕ್ರಾನ್ ಆತಂಕದಲ್ಲಿ ಸತತ 158 ದಿನಗಳ ಕಾಲ ಚಿಕಿತ್ಸೆ ಪಡೆದು ಕೋವಿಡ್ ಸೋಂಕಿನಿಂದ ಗುಣಮುಖ ಆಗಿದ್ದು, ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.