ಬಳ್ಳಾರಿಗೆ ಇದ್ದ ಪ್ರತ್ಯೇಕ ಕೊರೊನಾ ಗೈಡ್​ಲೈನ್​ ಹಿಂಪಡೆದ ಜಿಲ್ಲಾಧಿಕಾರಿ, ಹೊಸಪೇಟೆ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು | Coronavirus Guidlines in Bellary Changed Case Registred Against Hospet Muncipal President Vice President for Violating Covid Protocol


ಬಳ್ಳಾರಿಗೆ ಇದ್ದ ಪ್ರತ್ಯೇಕ ಕೊರೊನಾ ಗೈಡ್​ಲೈನ್​ ಹಿಂಪಡೆದ ಜಿಲ್ಲಾಧಿಕಾರಿ, ಹೊಸಪೇಟೆ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

ಹೊಸಪೇಟೆಯಲ್ಲಿ ಬಿಜೆಪಿ ನಾಯಕ ಆನಂದ್ ಸಿಂಗ್ ಮತ್ತು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ

ಬಳ್ಳಾರಿ: ಕರ್ನಾಟಕ ಸರ್ಕಾರವು ಶುಕ್ರವಾರ ಮಧ್ಯಾಹ್ನ ಕೊರೊನಾ ಮಾರ್ಗಸೂಚಿ ಕುರಿತು ನಿರ್ಧಾರ ಪ್ರಕಟಿಸಿದ ನಂತರ ಹಲವು ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಮಾರ್ಪಾಡು ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜಾರಿ ಮಾಡಿದ್ದ ಪ್ರತ್ಯೇಕ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹಿಂಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕೊವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಜನವರಿ 15ರಂದು ಜಿಲ್ಲಾಧಿಕಾರಿ ಜಿಲ್ಲೆಗೆ ಪ್ರತ್ಯೇಕ ಮಾರ್ಗಸೂಚಿ ಜಾರಿ ಮಾಡಿದ್ದರು.

ಈ ಮೊದಲು ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಅರು ಗಂಟೆಯವರೆಗೂ ರಾತ್ರಿ ಕರ್ಫ್ಯೂ ಇತ್ತು. ಇನ್ನು ಮುಂದೆ ಸರ್ಕಾರದ ಆದೇಶದಂತೆ ರಾತ್ರಿ 10ರಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಜಿಲ್ಲೆಯಲ್ಲಿ ದೇವಾಲಯ, ಚರ್ಚ್, ಈಜುಕೊಳ, ಚಿತ್ರಮಂದಿರಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ನೂತನ ಆದೇಶದ ಪ್ರಕಾರ ಈ ಎಲ್ಲ ಸಾರ್ವಜನಿಕ ಸ್ಥಳಗಳು ಇನ್ನು ಮುಂದೆ ಮುಕ್ತವಾಗಲಿವೆ. ದೇವಸ್ಥಾನ ಮತ್ತು ಇತರ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆಗೆ ಅವಕಾಶವಿಲ್ಲ. ಲಸಿಕೆ ಪಡೆದವರಿಗೆ ಮಾತ್ರ ದರ್ಶನ ಪಡೆಯಲು ಅವಕಾಶವಿದೆ. ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಜ.23ರವರೆಗೂ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಘೋಷಿಸಲಾಗಿತ್ತು. ಈ ನಿರ್ಬಂಧವು ಒಂದು ದಿನ ಮೊದಲೇ, ಅಂದರೆ ನಾಳೆಯಿಂದ (ಜ.22) ತೆರವಾಗಲಿದೆ. ಆದರೆ ಜಿಲ್ಲೆಯಲ್ಲಿ 31ರವರೆಗೂ ಪ್ರತಿಭಟನೆ, ಮುಷ್ಕರದ ಮೇಲಿನ ಸಂಪೂರ್ಣ ನಿಷೇಧ ಮುಂದುವರಿಯಲಿದೆ.

ಕೊವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ, ಮೊಕದ್ದಮೆ ದಾಖಲು
ಹೊಸಪೇಟೆ: ಕೊವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ ನಡೆಸಿದ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನೂತನ ಅಧ್ಯಕ್ಷೆ ಸುಂಕಮ್ಮ ಮತ್ತು ಉಪಾಧ್ಯಕ್ಷ ಬಿ.ಎಲ್.ಆನಂದ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ. ಇಂದು ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತರ ಮೆರವಣಿಗೆ ನಡೆಯಿತು. ಈ ಸಂಬಂಧ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ನಗರಸಭೆಗೆ ಚುನಾವಣೆ ನಡೆದಿತ್ತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಒಟ್ಟು 35 ವಾರ್ಡ್​ಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 10, ಪಕ್ಷೇತರರು 12 ಹಾಗೂ ಆಮ್ ಆದ್ಮಿ ಪಕ್ಷದ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ 9 ಪಕ್ಷೇತರರು ಹಾಗೂ ಆಪ್​ನಿಂದ ಗೆದ್ದಿದ್ದ ಶೇಕ್​ ಷಾ ವಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಒಟ್ಟು 20 ಜನರ ಸಂಖ್ಯಾಬಲ ಹೊಂದಿದ್ದ ಬಿಜೆಪಿ ಮೊದಲ ಬಾರಿಗೆ ನಗರಸಭೆಯಲ್ಲಿ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಹೊಸಪೇಟೆ ನಗರಸಭೆ ಚುನಾವಣೆಯು ಮಾಜಿ ಸಚಿವ ಆನಂದ್ ಸಿಂಗ್​ಗೆ ಪ್ರತಿಷ್ಠೆ ಎನಿಸಿತ್ತು. ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿ ಚುನಾವಣೆ ನಡೆದಿತ್ತು‌. ತನ್ನ ಬೆಂಬಲಿಗರರನ್ನ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಆನಂದ್ ಸಿಂಗ್ ಗೆಲ್ಲಿಸಿಕೊಂಡಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕೋವಿಡ್ ನಿಯಮಗಳನ್ನು ಮರೆತ ನಾಯಕರು ಹೊಸಪೇಟೆ ನಗರದ ವಿವಿಧ ಕಡೆ ಭರ್ಜರಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸಚಿವ ಆನಂದ್ ಸಿಂಗ್ ಹಾಗೂ ಸಂಸದ ದೇವೆಂದ್ರಪ್ಪ ಭಾಗಿಯಾಗಿದ್ದರು. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷ ಸೇರಿ 70 ಜನರ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *