ಬಳ್ಳಾರಿ ಜಿಲ್ಲೆಯ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ್ದ ರೈತರು ಈ ಭಾರಿ ನಕಲಿ ಹತ್ತಿ ಬೀಜದಿಂದ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ.
ಬಳ್ಳಾರಿ: ಜಿಲ್ಲೆಯ ರೈತರು ಮುಖ್ಯವಾಗಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಆದರೆ ಕಳೆದ ಭಾರಿ ಮೆಣಸಿನಕಾಯಿ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ರೈತರು ಈ ಭಾರಿ ಬಿಳಿ ಬಂಗಾರದಲ್ಲಾದರೂ ಲಾಭ ಬರಲಿ ಎಂದು ಹತ್ತಿ ಬೆಳೆಯಲು ಮುಂದಾಗಿದ್ದು, ಗಂಗಾ ಕಾವೇರಿ ಬ್ರಾಂಡ್ನ ಜಿಕೆ-231(ganga kaveri brand GK-231) ಹತ್ತಿ ಬೀಜ ಬಿತ್ತಿ ಮತ್ತೆ ಕೈ ಸುಟ್ಟುಕೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹತ್ತಿ ಬೀಜ ಖರೀದಿಸಿದ್ದ ರೈತರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಿ ಬೆಳೆ ಬೆಳೆದಿದ್ದರು. ಹತ್ತಿ ಬೆಳೆ ಎದೆಯೆತ್ತರಕ್ಕೆ ಬೆಳೆದು ಗಿಡದಲ್ಲಿ ನೂರಾರು ಕಾಯಿಗಳನ್ನು ಬಿಟ್ಟಾಗ ರೈತರ ಮುಖದಲ್ಲಿ ಸಂತಸ ಮೂಡಿತ್ತು. ಆದರೆ ಗಿಡದಲ್ಲಿ ಬಿಟ್ಟ ಕಾಯಿಗಳು ಅರಳದೇ, ಫಸಲು ಬಾರದೇ ಇರುವುದರಿಂದ ಹತ್ತಿ ಬೆಳೆದ ರೈತರು ಇದೀಗ ಬೆಳೆ ಸಿಗದೇ ಕಂಗಾಲಾಗಿ ಹೋಗಿದ್ದಾರೆ.
ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಗಂಗಾ ಕಾವೇರಿ ಬ್ರಾಂಡ್ನ ಜಿಕೆ-231 ಹತ್ತಿ ಬೀಜ ಬಿತ್ತಿದ್ದು, ಆದರೆ ಬಳ್ಳಾರಿಯ ವರದಾ ಆಗ್ರೋ ಸರ್ವಿಸ್ ಸೆಂಟರ್ನಲ್ಲಿ ಖರೀದಿಸಿದ ಬೀಜಗಳೆಲ್ಲಾ ಕಳಪೆ ಗುಣಮಟ್ಟದಾಗಿದೆ. ಇದೇ ತಳಿಯ ಹತ್ತಿ ಬಿತ್ತಿದರೆ ಉತ್ತಮ ಬೆಳೆ ಬರುತ್ತದೆ. ಎಂಬ ಭರವಸೆ ನೀಡಿದ ಕಂಪನಿಯವರು ಇದೀಗ ರೈತರು ಬೆಳೆ ಕಳೆದುಕೊಂಡ ನಂತರ ಕೈ ಎತ್ತಿದ್ದಾರೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿರುವ ರೈತರಿಗೆ ಇದೀಗ ಫಸಲು ಕೈ ಸಿಗದಿರುವುದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಹತ್ತಿ ಬೆಳೆ ಬೆಳೆದರು ಫಸಲು ಬಾರದ ಪರಿಣಾಮ ರೈತರು ಹತ್ತಿ ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ನಕಲಿ ಹತ್ತಿ ಬೀಜ ಮಾರಾಟ ಮಾಡಿದವರು ಮತ್ತು ನಕಲಿ ಬೀಜ ತಯಾರಿಸಿದ ಕಂಪನಿ ವಿರುದ್ದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೈತರಿಗೆ ಬೆಳೆ ನಷ್ಟ ತುಂಬಿಸಿಕೊಡುವಂತೆ ರೈತರು ಇದೀಗ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.