ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿ ಆಟಿಕೆ ಗೊಂಬೆ: ಸಿದ್ದರಾಮಯ್ಯ ಸರಣಿ ಟ್ವೀಟ್ | Siddaramaiah reacts to Communal Clashes Hindu Muslim in Karnataka slams Government Basavaraj Bommai


ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿ ಆಟಿಕೆ ಗೊಂಬೆ: ಸಿದ್ದರಾಮಯ್ಯ ಸರಣಿ ಟ್ವೀಟ್

ಸಿದ್ದರಾಮಯ್ಯ

ಬೆಂಗಳೂರು: ಮುಸ್ಲಿಂ ವ್ಯಾಪಾರಿಯ ಮೇಲೆ ಧಾರವಾಡದಲ್ಲಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ದೌರ್ಜನ್ಯವೆಸಗಿದ ಶ್ರೀರಾಮಸೇನೆ ಪುಂಡರನ್ನು ಬಂಧಿಸಲು ಸೂಚಿಸಿ. ಒದ್ದು ಒಳಗೆ ಹಾಕುವಂತೆ ಧಾರವಾಡ ಜಿಲ್ಲಾ ಪೊಲೀಸರಿಗೆ ಆದೇಶಿಸಿ. ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿ ಮಾನ ಕಾಪಾಡಿ ಎಂದು ಟ್ವೀಟ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಬಿಜೆಪಿ ‘ರಾಮರಾಜ್ಯ’ದ ಒಂದು ಚಿತ್ರವನ್ನು ಜಗತ್ತಿಗೆ ತೋರಿಸಿದ್ದಾರೆ. ಧಾರವಾಡದ ಶ್ರೀರಾಮಸೇನೆ ಗೂಂಡಾಗಳು ಜಗತ್ತಿನ ಪ್ರದರ್ಶಿಸಿದ್ದಾರೆ. ಇಂಥಾ ಗೂಂಡಾಗಳಿಗೆ ರಾಮನ ಹೆಸರೇಳುವ ಯೋಗ್ಯತೆ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಧಾರವಾಡದಲ್ಲಿ ನಡೆದ ಹಲ್ಲೆ ಮುಸ್ಲಿಂ ವ್ಯಾಪಾರಿ ಮೇಲೆ ನಡೆದದ್ದಲ್ಲ. ಅದು ಕಲ್ಲಂಗಡಿ ಬೆಳೆಯುವ ರೈತರ ಮೇಲೂ ನಡೆದಿರುವ ದೌರ್ಜನ್ಯ ಎಂದು ಟೀಕಿಸಿದ್ದಾರೆ.

ಈ ಗೂಂಡಾಗಳನ್ನು ಹೀಗೆ ಬಿಟ್ಟರೆ ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ. ಡಿಜಿ & ಐಜಿಪಿ ಹೇಳಿಕೆಯನ್ನೇ ಧಿಕ್ಕರಿಸುತ್ತಿರುವ ಬಿಜೆಪಿಯ ಸಿ.ಟಿ.ರವಿ, ರವಿಕುಮಾರ್​ ಮುಂತಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕ ಬಸವಣ್ಣನಾಗಿದ್ದಾರೆ. ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದ ನೈತಿಕತೆ ಕುಸಿತ. ರಾಜ್ಯದ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ. ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ, ಸಂಘ ಪರಿವಾರದ ಪುಂಡಾಟಿಕೆಯಿಂದ ತಲೆತಗ್ಗಿಸುವಂತಾಗಿದೆ. ಹೊರರಾಜ್ಯ, ವಿದೇಶಗಳ ಎದುರು ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಶಾಂತಿ, ಸೌಹಾರ್ದಪ್ರಿಯ ಕನ್ನಡಿಗರು ಎಂದಿಗೂ ಇದನ್ನ ಕ್ಷಮಿಸಲಾರರು. ಇದೆಲ್ಲವೂ ಸಿಎಂ ಬೊಮ್ಮಾಯಿಯವರೇ ಮಾಡಿರುವ ಪಾಪದ ಫಲ. ಬೀದಿ ಗೂಂಡಾಗಳ ಪುಂಡಾಟಿಕೆ ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥನೆ ನೀಡಿದ್ದಾರೆ. ಸಿಎಂ ಸಮರ್ಥಿಸಿಕೊಂಡ ನಂತರ ಕೊಲೆ, ಹಿಂಸಾಚಾರ ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಕುಸಿದುಬಿದ್ದು ನಾಗರಿಕ ಯುದ್ಧಕ್ಕೆ ಎಡೆಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರದ ಜತೆ ಸಹಯೋಗದಿಂದ ಕೋಮುದ್ವೇಷ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಉದ್ಯಮಿಗಳು ಹೊರ ರಾಜ್ಯಗಳತ್ತ ಮುಖಮಾಡುತ್ತಿದ್ದಾರೆ. ಕಿರಣ್ ಶಾರವರು ಪ್ರತಿರೋಧ ವ್ಯಕ್ತಪಡಿಸಿದ್ದು ಕಳವಳಕಾರಿ ಬೆಳವಣಿಗೆ. ರಾಜ್ಯದ ಬೇಡದ ಕೂಸು, ಅಳುವ ಕೂಸುಗಳನ್ನು ನೋಡಿಯಾಗಿದೆ. ಈಗಿನದ್ದು ಆಡುವ ಗೊಂಬೆಯ ಸರ್ಕಾರವೆಂದು ಸಿದ್ದರಾಮಯ್ಯ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಆ ಕೂಸುಗಳಿಗೆ ಜೀವವಿತ್ತು, ಈಗಿನದ್ದು ನಿರ್ಜೀವ ಆಟದ ಗೊಂಬೆ. ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿ ಆಟಿಕೆ ಗೊಂಬೆ ಎಂದು ಸರಣಿ ಟ್ವೀಟ್​ ಮೂಲಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

TV9 Kannada


Leave a Reply

Your email address will not be published.