ಬಹುಕಾಲದಿಂದ ಟೀಂ ಇಂಡಿಯಾಗೆ ಕಾಡ್ತಿದೆ ಆ ಒಂದು ಸಮಸ್ಯೆ; ವಿಶ್ವಕಪ್​ನಲ್ಲಿ ಸೋಲಿಗೂ ಅದೇ ಕಾರಣ..!


ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಗೆ ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳೋಕೆ ಸಾಧ್ಯವಾಗಿಲ್ಲ.. ಆದೇ ಸಮಸ್ಯೆ ಇದೀಗ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಕಪ್​ ಗೆಲ್ಲೋ ಕನಸಿಗೂ ಕೊಳ್ಳಿ ಇಟ್ಟಿದೆ. ಹಾಗಾದ್ರೆ ಆ ಸಮಸ್ಯೆ ಯಾವುದು..?

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಸೆಮಿಸ್​ ಪ್ರವೇಶಕ್ಕೆ ಪವಾಡದ ನಿರೀಕ್ಷೆಯಲ್ಲಿದೆ. ಟೂರ್ನಿಗೂ ಮುನ್ನ ಚಾಂಪಿಯನ್​ ಪಟ್ಟಕ್ಕೇರಲಿದೆ ಎಂದೇ ಅನಿಸಿಕೊಂಡಿದ್ದ ತಂಡದ ಹೀನಾಯ ಸ್ಥಿತಿಗೆ ತಲುಪಲು ಮೊದಲ ಎರಡು ಪಂದ್ಯಗಳೇ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆ ಸೋಲಿಗೆ ಕಾರಣ ಏನು ಅನ್ನೋ ಪ್ರಶ್ನೆಗೆ ಹಲವು ಉತ್ತರಗಳಿವೆ. ಅದರ ಜೊತೆಗೆ ಈ ಒಂದು ವಿಚಾರದಲ್ಲಿ ಬಿಸಿಸಿಐ ಎಡವಿರೋದೂ ಕೂಡ ಸ್ಪಷ್ಟವಾಗಿ ಕಾಣ್ತಿದೆ.

ತಂಡವನ್ನ ಕಾಡ್ತಿರೋ ಬಹುಕಾಲದ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ..!
ವಿಶ್ವಕಪ್​ನಲ್ಲೂ ಹಿನ್ನಡೆಗೆ ಕಾರಣವಾದ ಲೆಫ್ಟ್​ ಆರ್ಮ್​ ಪೇಸರ್​​ ಕೊರತೆ..!

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಸೋಲಿಗೆ ಇದೂ ಕೂಡ ಪ್ರಮುಖ ಕಾರಣ. ಮೊದಲ ಪಂದ್ಯದಲ್ಲಿ ಶಾಹೀನ್​ ಶಾ ಅಫ್ರಿದಿ, 2ನೇ ಪಂದ್ಯದಲ್ಲಿ ಟ್ರೆಂಟ್​ ಬೋಲ್ಟ್​​ ಹೇಗೆ ಟೀಮ್​ ಇಂಡಿಯಾವನ್ನ ಕಾಡಿದ್ರು ಅನ್ನೋದು ನಿಮಗೂ ಗೊತ್ತಿದೆ. ಇವರಿಬ್ಬರು ಮಾತ್ರವಲ್ಲ.. ಇಡೀ ಟೂರ್ನಿಯಲ್ಲೇ ಎಡಗೈ ವೇಗಿಗಳ ದರ್ಬಾರ್ ನಡೀತಿದೆ​. ಸೂಕ್ಷ್ಮವಾಗಿ ಗಮನಿಸಿದ್ರೆ, ಎಡಗೈ ಬೌಲರ್​ಗಳ ಎದುರು ಎಲ್ಲ ತಂಡದ ಬ್ಯಾಟ್ಸ್​ಮನ್​ಗಳು ಪರದಾಡಿರೋದು ಸ್ಪಷ್ಟವಾಗುತ್ತೆ.

ವಿಶ್ವ ಕ್ರಿಕೆಟ್​ ಲೋಕದಲ್ಲಿ ಅಸ್ತಿತ್ವದ ಹೋರಾಟ ನಡೆಸ್ತಾ ಇರೋ, ನಮೀಬಿಯಾ, ಸ್ಕಾಟ್ಲೆಂಡ್ ತಂಡಗಳಿಂದ ಹಿಡಿದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಪಾಕಿಸ್ತಾನ, ಇಂಗ್ಲೆಂಡ್​ ತಂಡಗಳು ಕೂಡ ಇದೇ ಅಸ್ತ್ರದಿಂದ ಯಶಸ್ಸು ಕಂಡಿದೆ. ಆದ್ರೆ, ಟೀಮ್​ ಇಂಡಿಯಾದ ಬತ್ತಳಿಕೆಯಲ್ಲಿ ಈ ಅಸ್ತ್ರವೇ ಇಲ್ಲ. ಇನ್ನು ಯಶಸ್ಸು ಹೇಗೆ ಸಾಧ್ಯ!

ಇದನ್ನೂ ಓದಿ:ಕಿಂಗ್​ ಕೊಹ್ಲಿಗೆ ಬರ್ತ್​​ಡೇ ಸಂಭ್ರಮ.. ಸ್ಪೆಷಲ್ ವಿಡಿಯೋ ಶೇರ್ ಮಾಡಿದ RCB

ಜಹೀರ್​ ಖಾನ್​, ಆಶಿಶ್​​ ನೆಹ್ರಾ, ಇರ್ಫಾನ್​ ಪಠಾಣ್​ ಈ ಮೂವರ ನಿರ್ಗಮನದ ಬಳಿಕ ಸ್ಥಿರ ಪ್ರದರ್ಶನ ನೀಡಬಲ್ಲ ಎಡಗೈ ವೇಗಿಯ ಕೊರತೆ ತಂಡವನ್ನ ಬಿಡದೇ ಕಾಡ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿ ತಂಡಕ್ಕೆ ಎಂಟ್ರಿ ಕೊಟ್ಟರೂ ಕೂಡ ಫಾರ್ಮ್​ ಸಮಸ್ಯೆಯಿಂದಲೂ, ಇಂಜುರಿಯಿಂದಲೂ ತಂಡದಿಂದ ಹೊರ ನಡೆಯುತ್ತಿದ್ದಾರೆ. ಇತ್ತಿಚೆಗಷ್ಟೇ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜನ್​ ಕಥೆಯೂ ಇದೆ ಆಗಿದೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್​​ ಮಂಡಳಿಗೆ ಒಬ್ಬ ಸಮರ್ಥ ಲೆಫ್ಟ್​ ಆರ್ಮ್​ ಪೇಸರ್​ ಅನ್ನ ಗುರುತಿಸೋ ಸಾಮರ್ಥ್ಯ ಇಲ್ವಾ..? ಅಥವಾ ಇದನ್ನ ಸಮಸ್ಯೆ ಎಂದು ಬಿಸಿಸಿಐ ಪರಿಗಣಿಸಿಯೇಲ್ವಾ.? ಎಂಬ ಪ್ರಶ್ನೆ ಹುಟ್ಟಿದೆ.

News First Live Kannada


Leave a Reply

Your email address will not be published. Required fields are marked *