‘ತಂದೆಯ ಋಣ ತೀರಿಸಬಹುದು, ಆದ್ರೆ ತಾಯಿ ಋಣ ತೀರಿಸಲಾಗದು’ ಅನ್ನೋ ಮಾತಿದೆ ಗೊತ್ತಾ? ಅದು ಸತ್ಯ ಕೂಡ ಹೌದು. ಕನ್ನಡಿಗರ ಕಣ್ಮಣಿ ಪ್ರೀತಿಯ ಅಪ್ಪು ಇಂದು ನಮ್ಮ ಜೊತೆಗಿಲ್ಲ. ಆದ್ರೆ, ಅವರ ಚಿತ್ರದಲ್ಲಿ ತಾಯಿ ಪ್ರೀತಿ ಎಂಥಾದ್ದು ಅನ್ನೋದನ್ನು ತೆರೆಯ ಮೇಲೆ ತೋರಿಸಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅವರ ಯಾವ ಚಿತ್ರದಲ್ಲಿ ತಾಯಿ, ಮಗನ ಪ್ರೀತಿ ಹೇಗಿತ್ತು?
ವರನಟ ಡಾ.ರಾಜ್ ಕುಮಾರ್ ಚಿತ್ರದ ಮೂಲಕ ಸಮಾಜಕ್ಕೆ ಅನೇಕ ರೀತಿಯ ಸಂದೇಶ ರವಾನಿಸಿದವರು, ಆ ಮೂಲಕ ಸಮಾಜದ ಸುಧಾರಣೆಗೆ ಪ್ರಯತ್ನಿಸಿದವರು. ಅಂತಹ ಮೇರು ವ್ಯಕ್ತಿತ್ವದ ಡಾ.ರಾಜ್ ಮಗನಾಗಿ ಅಪ್ಪು ಕೂಡ ಅವರ ಹಾದಿಯಲ್ಲಿಯೇ ಸಾಗಿದವರು. ಪ್ರತಿ ಚಿತ್ರದಲ್ಲಿಯೂ ಒಂದಲ್ಲ ಒಂದು ರೀತಿಯ ಸಂದೇಶವನ್ನು ರವಾನಿಸಿದ್ದಾರೆ. ಅದರಲ್ಲಿಯೂ ಅಪ್ಪು ಅಭಿನಯಿಸಿದ ಅನೇಕ ಚಿತ್ರಗಳಲ್ಲಿ ತಾಯಿ, ಮಗನ ಪ್ರೀತಿ ಇದೆ.
‘ವಂಶಿ’ಯಲ್ಲಿ ಕಣ್ಣೀರು ತರಿಸುವ ತಾಯಿ, ಮಗನ ಪ್ರೀತಿ
ಡಾ.ರಾಜ್ ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿರೋ ಈ ಹಾಡನ್ನು ಕೇಳುತ್ತಾ ಹೋದರೆ, ನಮ್ಮನ್ನು ಹೆತ್ತು ಹೊತ್ತ ತಾಯಿ ನೆನಪಾಗುತ್ತಾಳೆ. ಆಕೆ ತನಗೆ ಎಷ್ಟು ಪ್ರೀತಿ ಕೊಟ್ಟಿದಾಳೆ, ಅವಳಿಗೆ ತಾನೆಷ್ಟು ಪ್ರೀತಿ ಕೊಟ್ಟೆ ಅನ್ನೋದೆಲ್ಲ ಮನಸ್ಸಿನ ಆಳಕ್ಕೆ ಇಳಿದು, ಕಣ್ಣೀರ ಹನಿಗಳು ಕೆನ್ನೆಯ ಮೇಲೆ ಜಾರುತ್ತವೆ. ಒಂದು ಕಡೆ ಅಪ್ಪು ಕಣ್ಣೀರು, ಮತ್ತೊಂದು ಕಡೆ ಲಕ್ಷ್ಮೀಯ ದುಃಖ ತೆರೆಯ ಮೇಲೆ ಕಾಣಿಸುತ್ತಿದ್ರೆ, ಡಾ.ರಾಜ್ ಕುಮಾರ್ ಅವರ ಧ್ವನಿ ನಮ್ಮನ್ನು ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿ ಬಿಡುತ್ತೆ. ಅಂದ ಹಾಗೇ ಇದು ಅಪ್ಪು ನಟನೆಯ ‘ವಂಶಿ’ ಚಿತ್ರ. 2008 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಭರ್ಜರಿ ಯಶಸ್ಸು ಸಾಧಿಸಿತ್ತು. ತಾಯಿ ಮಗನ ಬಾಂಧವ್ಯವೇ ಈ ಚಿತ್ರದ ಹೈಲೆಟ್.
‘ಮೌರ್ಯ’ದಲ್ಲಿ ಅಮ್ಮ ಐ ಲವ್ ಯೂ ಅಂದ ಅಪ್ಪು
ಅಮ್ಮಾ ಅಮ್ಮಾ ಐ ಲವ್ ಯೂ.. ಈ ಹಾಡನ್ನು ಕೇಳ್ತಾ ಹೋದ್ರೆ ತಾಯಿ ಮೇಲಿರೋ ಪ್ರೀತಿ ಉಕ್ಕಿ ಬರುತ್ತೆ. ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಆಕೆಯ ಮನಸ್ಸು ನೋಯಿಸಬಾರದು ಅಂತ ಸಂದೇಶ ಅಪ್ಪು ನೀಡಿದ್ದಾರೆ. ಅಂದ ಹಾಗೇ ಇದು ಮೌರ್ಯ ಚಿತ್ರ. ಈ ಚಿತ್ರದಲ್ಲಿ ಅಪ್ಪು ತಾಯಿಯನ್ನು ತಂದೆ ಬಿಟ್ಟು ಹೋಗಿರುತ್ತಾರೆ. ಹೀಗಾಗಿ ತಾಯಿ ಮಗ ಇಬ್ಬರೇ ಜೀವನ ಮಾಡ್ತಾರೆ. ತಾಯಿ ಮಗನನ್ನು ಎಷ್ಟು ಪ್ರೀತಿಸುತ್ತಾರೋ ಅದೇ ರೀತಿ ಮಗ ಕೂಡ ತಾಯಿಗೆ ಪ್ರೀತಿ ಕೊಡ್ತಾನೆ. 2004 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ 100 ದಿನ ಪ್ರದರ್ಶನ ಕಂಡು ಭರ್ಜರಿ ಯಶಸ್ಸುಗಳಿಸಿತ್ತು.
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ, ಅಮ್ಮಾ… ಅಮ್ಮಾ…ನಮ್ಮಮ್ಮಾ. ವಾವ್! ಈ ಹಾಡನ್ನು ಕೇಳುತ್ತಾ ಕುಳಿತರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಾಡಿರುವ ಈ ಹಾಡು ಮನಸ್ಸಿಗೆ ನಾಟುವಂತಿದೆ. ಕಾಣದ ದೇವರನ್ನು ಹುಡುಕುತ್ತಾ ಗುಡಿ ಗೋಪುರ ಸುತ್ತುತ್ತೇವೆ. ಆದ್ರೆ, ನಮ್ಮ ಕಣ್ಣಿನ ಮುಂದೆಯೇ ದೇವರು ಇರುತ್ತಾನೆ. ಅದೇ ಹೆತ್ತ ತಾಯಿ.
ಅಂಜನಿಪುತ್ರದಲ್ಲಿಯೂ ಇದೆ ತಾಯಿ ಪ್ರೀತಿ
ಈ ಚಿತ್ರದಲ್ಲಿ ಯಾರೋ ಮಾಡಿದ ತಪ್ಪಿಗೆ ಅಪ್ಪು ಮನೆ ಬಿಟ್ಟು ಹೋಗಿರುತ್ತಾನೆ. ಆದ್ರೆ, ಅಪ್ಪುಗೆ ತಾಯಿ ಮೇಲಿನ ಪ್ರೀತಿ ಎಳಷ್ಟು ಕಡಿಮೆಯಾಗಿರುವುದಿಲ್ಲ. ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ, ಮಗನ ಪಾತ್ರದಲ್ಲಿ ಅಪ್ಪು ಅದ್ಭುತ ಅಭಿನಯ ನೀಡಿದ್ದಾರೆ.
ಅಭಿ ಚಿತ್ರದಲ್ಲಿಯೂ ತಾಯಿ ಮಗನ ಪ್ರೀತಿ
ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ನಟಿಸಿದ ಅಪ್ಪು ಚಿತ್ರ ಪುನೀತ್‌ಗೆ ಮೊದಲನೇ ಚಿತ್ರವಾಗಿದ್ರೆ, ಎರಡನೇ ಚಿತ್ರವೇ ‘ಅಭಿ’. ಈ ಚಿತ್ರದಲ್ಲಿನ ತಾಯಿ, ಮಗನ ಸೆಂಟಿಮೆಂಟ್ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ. ಒಬ್ಬ ಮಗನಾಗಿ ತಾಯಿಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು, ತಾಯಿಗೆ ಎಷ್ಟು ಪ್ರೀತಿ ಕೊಡಬೇಕು ಅನ್ನೋದನ್ನು ತೋರಿಸಿದೆ. ಅಂದ ಹಾಗೇ ಇದು ಸ್ಟಾರ್ ನಟಿ ರಮ್ಯಾಗೆ ಮೊದಲನೇ ಚಿತ್ರವಾಗಿತ್ತು. 2003 ರಲ್ಲಿ ತೆರೆ ಕಂಡ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.
‘ರಾಜ್’ನಲ್ಲಿ ಮನಕಲಕುತ್ತೆ ತಾಯಿ, ಮಗನ ಪ್ರೀತಿ
‘ರಾಜ್ ದಿ ಶೋಮ್ಯಾನ್’ ಚಿತ್ರದಲ್ಲಿ ಅಪ್ಪು ಆರಂಭದಲ್ಲಿ ಕುರಿಗಾಯಿ ಆಗಿರುತ್ತಾನೆ. ಅಪ್ಪನ ಕಂಡ್ರೆ ಭಯ. ತಾಯಿ ಕಂಡ್ರೆ ಎಲ್ಲಿಲ್ಲದ ಪ್ರೀತಿ. ವಿಪರೀತ ಸಿನಿಮಾ ಹುಚ್ಚಿರೋ ಅಪ್ಪುಗೆ ಸಿನಿಮಾ ನೋಡಲು ತಾಯಿ ತಾನು ಕೂಡಿಟ್ಟ ಹಣ ನೀಡಿ ನೆರವು ನೀಡುತ್ತಾಳೆ. ಹಾಗೇ ಅಪ್ಪು ಸಿನಿಮಾ ನೋಡಲು ಹೋದಾಗ ಮನೆಯಲ್ಲಿರೋ ಕುರಿಗಳ ಕಳ್ಳತನವಾಗುತ್ತೆ. ಮನೆಗೆ ಬಂದರೆ ಅಪ್ಪ ತನ್ನನ್ನು ಬಿಡಲ್ಲ ಅಂತ ಭಯ ಬಿದ್ದು ಅಪ್ಪು ಮನೆ ಬಿಟ್ಟು ಹೋಗುತ್ತಾನೆ. ಅನಂತರ ಹೀರೋ ಆಗಿ ಮನೆಗೆ ಮರಳುತ್ತಾನೆ. ಈ ಚಿತ್ರದಲ್ಲಿ ತಾಯಿ, ಮಗನ ಮುಗ್ಧ ಪ್ರೀತಿಯನ್ನು ತೋರಿಸಲಾಗಿದೆ.
ಬೆಟ್ಟದ ಹೂ ಚಿತ್ರದಲ್ಲಿ ತಾಯಿ ಪ್ರೀತಿ
ಅಪ್ಪು ಬಾಲ ನಟನಾಗಿ ಅಭಿನಯಿಸಿರೋ ಚಿತ್ರ ‘ಬೆಟ್ಟದ ಹೂ’, ಈ ಚಿತ್ರದ ಅಭಿನಯಕ್ಕಾಗಿ ಅಪ್ಪುಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ತಾಯಿ ಮಗನ ಪ್ರೀತಿ ಮನಸ್ಸಿಗೆ ನಾಟುವಂತಿದೆ. ರಾಮಾಯಣ ಪುಸ್ತಕ ಕೊಳ್ಳಲು ಅಪ್ಪು ಪೈಸೆ ಪೈಸೆ ಹಣ ಕೂಡಿಡುತ್ತಾನೆ. ಆದ್ರೆ, ಅನಂತರ ಅದೇ ಹಣದಲ್ಲಿ ದುತ್ತಿ ತೆಗೆದುಕೊಳ್ಳುತ್ತಾನೆ. ಅದು ತನ್ನ ತಾಯಿ ಮತ್ತು ಸೋದರ, ಸೋದರಿ ಮೇಲಿರೋ ಕಾಳಜಿಯಿಂದ.
ಬಹುತೇಕ ಎಲ್ಲಾ ಚಿತ್ರದಲ್ಲಿಯೂ ತಾಯಿ ಪ್ರೀತಿ
ಅಪ್ಪು ಚಿತ್ರಗಳು ಅಂದ್ರೆ ಇಡೀ ಫ್ಯಾಮಿಲಿ ಕೂತು ನೋಡುವ ಚಿತ್ರಗಳಾಗಿದ್ವು. ಇಲ್ಲಿಯವರೆಗೆ ಅಪ್ಪು ಹೀರೋ ಆಗಿ ನಟಿಸಿರುವ 29 ಚಿತ್ರಗಳು ತೆರೆಕಂಡಿವೆ. ಅದರಲ್ಲಿ ಬಹುತೇಕ ಚಿತ್ರಗಳಲ್ಲಿ ತಾಯಿ ಮಗನ ನಡುವಿನ ಪ್ರೀತಿ ಇತ್ತು. ಒಳ್ಳೆಯ ಸಂದೇಶವಿತ್ತು. ಅಪ್ಪು ತಮ್ಮ ನಟನೆಯ ಹಲವಾರು ಚಿತ್ರಗಳಲ್ಲಿ ತಾಯಿ ಪ್ರೀತಿಯನ್ನು ತೋರಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ಆದ್ರೆ, ಅಪ್ಪುಗೆ ತಾಯಿ ಮೇಲಿರೋ ಪ್ರೀತಿ ಕೇವಲ ರೀಲ್ ಲೈಫ್‌ನಲ್ಲಿ ಅಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲಿಯೂ ಇತ್ತು.