ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತಕ್ಕೆ ಸಹಾಯ ಮಾಡಿದ ಮಾಜಿ ಪಾಕ್ ಯೋಧನಿಗೆ ಪದ್ಮಶ್ರೀ; ಯಾರು ಈ ವ್ಯಕ್ತಿ? | Padma Shri award to Lt Col Qazi Sajjad Ali Zahir former Pak soldier who helped India liberate Bangladesh


ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತಕ್ಕೆ ಸಹಾಯ ಮಾಡಿದ ಮಾಜಿ ಪಾಕ್ ಯೋಧನಿಗೆ ಪದ್ಮಶ್ರೀ; ಯಾರು ಈ ವ್ಯಕ್ತಿ?

ಪದ್ಮ ಪ್ರಶಸ್ತಿ ಸ್ವೀಕರಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್

ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರು ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ಪ್ರಶಸ್ತಿಗಳನ್ನು(Padma awards) ಪ್ರದಾನ ಮಾಡಿದಾಗ ಅದನ್ನು ಸ್ವೀಕರಿಸಿದವರಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್(Lt Col Qazi Sajjad Ali Zahir).  ಇವರು ಒಬ್ಬ ಮಾಜಿ ಪಾಕಿಸ್ತಾನಿ ಯೋಧ. ತಮ್ಮ ಪ್ರಾಣವನ್ನು ಪಣಕ್ಕಿಟ್ಟಿಟ್ಟು ಭಾರತಕ್ಕೆ ಗಡಿ ದಾಟಿ ಬಂದ ಇವರು 1971ರ ಯುದ್ಧದಲ್ಲಿ ಬಾಂಗ್ಲಾದೇಶವನ್ನು (Bangladesh) ಸ್ವತಂತ್ರಗೊಳಿಸಲು ಸಹಾಯ ಮಾಡಿದ್ದರು. ಲೆಫ್ಟಿನೆಂಟ್ ಕರ್ನಲ್ ಜಹೀರ್ ಅವರ ಹೆಸರು ಇಷ್ಟು ವರ್ಷ (ಮಿಲಿಟರಿ ವ್ಯವಹಾರದ ಗೌಪ್ಯ ರೀತಿ) ಸುದ್ದಿಯಾಗದೇ ಇದ್ದರೂ ಈ ವಾರ ಪದ್ಮಶ್ರೀಯನ್ನು ಸ್ವೀಕರಿಸಲು ವೇದಿಕೆಗೆ ಬಂದಾಗ ಅವರು ಗಮನ ಸೆಳೆದರು. ಭಾರತೀಯ ಗುಪ್ತಚರಕ್ಕೆ ನೀಡಿದ ಕೊಡುಗೆ ಮತ್ತು ಬಾಂಗ್ಲಾದೇಶ ಸ್ವಾತಂತ್ರ್ಯ ಚಳುವಳಿಗೆ ಅವರು ನೀಡಿರುವ ಕೊಡುಗೆಗಳಿಗೆ ಸಿಕ್ಕ ಮನ್ನಣೆ ಇದಾಗಿದೆ. ರಾಷ್ಟ್ರಪತಿ ಕೋವಿಂದ್ ಅವರು ಸಾರ್ವಜನಿಕ ವ್ಯವಹಾರಗಳಿಗಾಗಿ ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ (ನಿವೃತ್ತ) ಅವರಿಗೆ ಪದ್ಮಶ್ರೀ ಪ್ರದಾನ ಮಾಡಿದರು. ಅವರು ಸ್ವತಂತ್ರ ಸಂಶೋಧಕರು ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದ ಲೇಖಕರಾಗಿದ್ದಾರೆ. ಅವರು ವಿಮೋಚನೆಯ ಯುದ್ಧ ಸೇರಿದಂತೆ ಭಾರತೀಯ ಸೇನೆಯೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದರು ಎಂದು ರಾಷ್ಟ್ರಪತಿ ಭವನ್ ಟ್ವೀಟ್ ಮಾಡಿದೆ.

ಲೆಫ್ಟಿನೆಂಟ್ ಕರ್ನಲ್ ಖಾಜಿ ಸಜ್ಜದ್ ಅಲಿ ಜಹೀರ್ ಅವರು ಭಾರತ ಮತ್ತು ಬಾಂಗ್ಲಾದೇಶಕ್ಕೆ ಸಹಾಯ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟರು. ಸಿಯಾಲ್‌ಕೋಟ್‌ನಲ್ಲಿ 20 ವರ್ಷದ ಅಧಿಕಾರಿಯಾಗಿ ಲೆಫ್ಟಿನೆಂಟ್ ಕರ್ನಲ್ ಜಹೀರ್ ಬಾಂಗ್ಲಾದೇಶದಲ್ಲಿ (ಹಿಂದಿನ ಪೂರ್ವ ಪಾಕಿಸ್ತಾನ) ಪಾಕಿಸ್ತಾನಿ ಸೇನೆಯ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಉತ್ತುಂಗದಲ್ಲಿ ಅವರು ಭಾರತಕ್ಕೆ ದಾಟಿ ಬಂದರು.

ಭಾರತಕ್ಕೆ ಬಂದ ನಂತರವೂ ಅವರ ತೊಂದರೆಗಳು ಕಡಿಮೆ ಆಗಿಲ್ಲ. ಅವರನ್ನು ಪಾಕಿಸ್ತಾನದ ಗೂಢಚಾರ ಎಂದು ಶಂಕೆ ಮಾಡಲಾಯಿತು. ಗಡಿ ಭದ್ರತಾ ಪಡೆ ಮತ್ತು ನಂತರ ಪಠಾಣ್‌ಕೋಟ್‌ನಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಜಹೀರ್ ಅವರನ್ನು ವಿಚಾರಣೆಗೊಳಪಡಿಸಿದರು. ಆದಾಗ್ಯೂ, ಲೆಫ್ಟಿನೆಂಟ್ ಕರ್ನಲ್ ಜಹೀರ್ ತನ್ನ ಕಾರಣವನ್ನು ಬೆಂಬಲಿಸಲು ಪಾಕಿಸ್ತಾನಿ ಸೇನೆಯ ಗೌಪ್ಯ ದಾಖಲೆಗಳನ್ನು ಪ್ರಸ್ತುತಪಡಿಸಿದ ನಂತರ ಅವರನ್ನು ದೆಹಲಿಯ ಸುರಕ್ಷಿತ ಮನೆಗೆ ಕಳುಹಿಸಲಾಯಿತು. ಅಲ್ಲಿಂದ ಭಾರತೀಯ ಗುಪ್ತಚರರು ಅವರೊಂದಿಗೆ ಸಹಕರಿಸಿದರು. ನಂತರ ಅವರು ಬಾಂಗ್ಲಾದೇಶಕ್ಕೆ ತೆರಳಿದರು, ಅಲ್ಲಿ ಅವರು ಪಾಕಿಸ್ತಾನಿ ಪಡೆಗಳನ್ನು ಎದುರಿಸಲು ಮುಕ್ತಿ ಬಾಹಿನಿ (ಸ್ವಾತಂತ್ರ್ಯ ಹೋರಾಟಗಾರರು) ಗೆರಿಲ್ಲಾ ಯುದ್ಧಕ್ಕೆ ತರಬೇತಿ ನೀಡಿದರು.

ವಾಸ್ತವವಾಗಿ, ಲೆಫ್ಟಿನೆಂಟ್ ಕರ್ನಲ್ ಜಹೀರ್ ಅವರನ್ನು ಪಾಕಿಸ್ತಾನವು ಇಂದಿಗೂ ದ್ವೇಷಿಸುತ್ತಲೇ ಇದೆ. ಜಹೀರ್ ಪ್ರಕಾರ ಕಳೆದ 50 ವರ್ಷಗಳಿಂದ ಪಾಕಿಸ್ತಾನದಲ್ಲಿ ಅವನ ಹೆಸರಿನಲ್ಲಿ ಮರಣದಂಡನೆ ಬಾಕಿ ಇದೆ. ಆದಾಗ್ಯೂ, ಬಾಂಗ್ಲಾದೇಶದಲ್ಲಿ, ಲೆಫ್ಟಿನೆಂಟ್ ಕರ್ನಲ್ ಜಹೀರ್ ಅವರನ್ನು ಬೀರ್ ಪ್ರತೀಕ್ ಮತ್ತು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಸ್ವಾಧಿನತಾ ಪದಕದಂತಹ ಶೌರ್ಯ ಪದಕಗಳನ್ನು ನೀಡಿ ಗೌರವಿಸಲಾಗಿದೆ. ಈಗ ಭಾರತ ಕೂಡ ಉಪಖಂಡದ ಮಿಲಿಟರಿ ಇತಿಹಾಸಕ್ಕೆ ಅವರ ಕೊಡುಗೆಗಳನ್ನು ಗುರುತಿಸಿದೆ ಮತ್ತು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ.

ಪದ್ಮ ಪ್ರಶಸ್ತಿಗಳು ಗಣರಾಜ್ಯೋತ್ಸವದ ಮೊದಲು ವಾರ್ಷಿಕವಾಗಿ ಘೋಷಿಸಲ್ಪಟ್ಟ ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. ಪದ್ಮ ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾರ್ವಜನಿಕ ಸೇವೆಯ ಅಂಶ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳು ಅಥವಾ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ಓದಿ: ಏಕಾಏಕಿ ಉರುಳಿದ ಕಲ್ಲುಬಂಡೆ; ಹಳಿ ತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ಪ್ರಯಾಣಿಕರು ಕೊಂಚದರಲ್ಲೇ ಬಚಾವ್!

TV9 Kannada


Leave a Reply

Your email address will not be published. Required fields are marked *