ಮೈಸೂರು: ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಬಹುತೇಕ ಮಠಾಧೀಶರು ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ದಾರಿ ತಪ್ಪಿದ ವೇಳೆ ಮಠಾಧೀಶರು ಎಚ್ಚರಿಸಬೇಕು. ನಾಡಿನ ಧರ್ಮಾಧಿಕಾರಿಗಳು ಒಂದು ಪಕ್ಷದ ಪರವಾಗಿ, ಒಂದು ನಾಯಕತ್ವದ ಪರವಾಗಿ ಧ್ವನಿ ಎತ್ತಿರುವುದು ಎಷ್ಟು ಸರಿ? ರಾಜಕಾರಣಿಗಳನ್ನು ಮೀರಿಸುವಂತೆ ರಾಜಕೀಯದಲ್ಲಿ ಪಾತ್ರ ಮಾಡುತ್ತಿರುವುದು ಎಷ್ಟು ಸರಿ? ವೀರಶೈವ ಧರ್ಮ ಮಾನವ ಧರ್ಮ. ಇದನ್ನು ಜಾತಿಗೆ ಸೀಮಿತ ಮಾಡಿ ಧರ್ಮದ ವ್ಯಾಪ್ತಿಯನ್ನು ಕುಬ್ಜ ಮಾಡುತ್ತಿದ್ದಾರೆ. ಮಠಗಳು ರಾಜಕೀಯ ಕೇಂದ್ರಗಳಂತಾಗಿದ್ದು, ಸಮಾಜದ ಭಾಗವಾಗಬೇಕೆ ಹೊರತು ಅಧಿಕಾರದ ಭಾಗವಾಗಬಾರದು. ಒಬ್ಬ ನಾಯಕನ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ

ನಮ್ಮ ಸಮುದಾಯದ ಸ್ವಾಮೀಜಿಗಳು ಸಹ ಸಮುದಾಯದ ನಾಯಕನ ಪರವಾಗಿ ಧ್ವನಿ ಎತ್ತಿದಾಗ ಅವರಿಗೂ ಈ ಮಾತು ಹೇಳಿದ್ದೇನೆ. ರಾಜಕೀಯಕ್ಕಾಗಿ ಧರ್ಮಾಧಿಕಾರಿಗಳು ಬೀದಿಗೆ ಬರಬಾರದು. ಧರ್ಮಾಧಿಕಾರಿಗಳು ಸಂವಿಧಾನಕ್ಕಿಂತ ದೊಡ್ಡವರು ಎನ್ನುವ ರೀತಿ ಹೋಗುತ್ತಿರುವುದು ಸರಿಯಲ್ಲ ಎಂದರು.

ಸಿಎಂ ಅವರನ್ನು ಭ್ರಷ್ಟಾಚಾರದ ಕಾರಣಕ್ಕೆ ಬದಲಾಯಿಸಲಾಗುತ್ತಿದೆ. ಮಠಾಧಿಪತಿಗಳು ನಾಡಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತೀದ್ದೀರಾ? ಧರ್ಮಾಧಿಕಾರಿಗಳನ್ನು ಬೀದಿಗೆ ತಂದು ನಿಲ್ಲಿಸಿ, ತಮ್ಮ ಪರವಾಗಿ ಧ್ವನಿ ಎತ್ತಿಸುವುದು ಯಾರಿಗೂ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಜಾತಿವಂತನಾಗಬಾರದು ನೀತಿವಂತನಾಗ ಬೇಕು. ಮುರಾಘಾ ಶ್ರೀಗಳೇ ಬೀದಿಗೆ ಬಂದು ನಿಂತು ಜಾತಿಗೆ ಹೋರಾಡುತ್ತಿದ್ದಾರೆ. ಬಸವ ಶ್ರೀ ಪ್ರಶಸ್ತಿ ಕೊಡುವ ನೀವು ಇಂತಹ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಲಾಗಿದೆ. ಆದರೆ, ಇದನ್ನು ಈಗ ಸರ್ಕಾರದ ಕೆಲಸ ಸ್ವಾಮೀಜಿಗಳ ಕೆಲಸವಾಗಿ ಬದಲಾಯಿಸಬೇಕಿದೆ. ಯಡಿಯೂರಪ್ಪ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಎರಡು ಬಾರಿಯೂ ಪರಿಸ್ಥಿತಿಯ ಶಿಶುವಾದರು. ಮೊದಲ ಬಾರಿಯೂ ಗೌರವಯುತವಾಗಿ ಸಿಎಂ ಸ್ಥಾನದಿಂದ ಅವರು ನಿರ್ಗಮಿಸಲಿಲ್ಲ. 48 ಇದ್ದ ಸ್ಥಾನ 104 ಸ್ಥಾನ ಆಗಿದ್ದು ಮೋದಿ ಅವರಿಂದ. ಮೋದಿ ಅವರ ಕಾರ್ಯ ಸಿದ್ಧಾಂತಕ್ಕೆ ವಿರೋಧವಾಗಿ ಇಲ್ಲಿ ಆಡಳಿತ ನಡೆಯುತ್ತಿದೆ. ಯಡಿಯೂರಪ್ಪ ಹೋರಾಟಗಾರ ಎಂದು ಅವರ ಕೈಗೆ ಅಧಿಕಾರ ಕೊಡಲಾಯಿತು. ಆದರೆ ಕಥೆ ಏನಾಗಿದೆ ನೋಡಿ, ಸಿಎಂ ಆದ ಮೇಲೆ ಯಡಿಯೂರಪ್ಪ ಅವರ ತಮ್ಮ ನಾಲಿಗೆ, ಕೈಯನ್ನು ಮಗನ ಕೈಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅಲ್ಲ, ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಶಂಕರಮೂರ್ತಿಯಂತಹವರು ಕಟ್ಟಿದ್ದು. ನಂತರವೂ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಒಬ್ಬರೇ ಅಲ್ಲ. ಹಲವು ನಾಯಕರು ಬಿಜೆಪಿ ಕಟ್ಟಿದ್ದಾರೆ. ಯಡಿಯೂರಪ್ಪ ಅಧಿಕಾರ ಅನುಭವಿಸಿದ್ದಾರೆ ಅಷ್ಟೆ, ರಾಜ್ಯದ ಆಡಳಿತ, ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ. ಎರಡು ಬಾರಿಯೂ ನಿಮ್ಮ ನಿರ್ಗಮನ ಸರಿ ಆಗಲಿಲ್ಲ, ಇಂದು ಗೌರವಯುತವಾಗಿ ನಿರ್ಗಮನವಾದರೆ ನಿಮಗೇ ಒಳ್ಳೆಯದು ಎಂದರು.

ರಾಜಕಾರಣ ಸ್ವಾಮೀಜಿಗಳ ಕೈಗೆ ಹೋಗಬಾರದು. ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಗಳಾಗಬಾರದು. ಯಡಿಯೂರಪ್ಪ ಬದಲಾದ ತಕ್ಷಣ ಶೂನ್ಯ ಸೃಷ್ಟಿಯಾಗಲ್ಲ, ಮಠಗಳ ಉತ್ತರಾಧಿಕಾರಿ ಮಾಡುವಾಗ ರಾಜಕಾರಣಿಗಳು ಮಧ್ಯ ಪ್ರವೇಶಿಸುತ್ತಾರಾ? ನಾಯಕತ್ವ ಬದಲಾವಣೆ ಶಾಸಕರ ಕೈಯಲ್ಲಿದೆ. ಮತ ಹಾಕುವವರು ಶಾಸಕರು, ನೀವು ಬಂದು ಮತ ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಎನ್ನುತ್ತಾರೆ. ಅದೇ ಪಕ್ಷದ ಶಾಮನೂರು ಶಿವಶಂಕರಪ್ಪ ಸಿಎಂ ಮನೆಗೆ ಹೋಗಿ ಅವರಿಗೆ ಬೆಂಬಲ ಕೊಡುತ್ತಾರೆ. ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಶಿಕ್ಷಣದ ದಲ್ಲಾಳಿಗಳು. ಕಾಂಗ್ರೆಸ್ ನ ನಿಜವಾದ ಸ್ಟ್ಯಾಂಡ್ ಏನು? ಶಾಮನೂರು, ಎಂ.ಬಿ.ಪಾಟೀಲ್ ಯಾವ ಪಕ್ಷದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಂಬೆ ಟೀಂನವರನ್ನು ಮಂತ್ರಿ ಮಾಡಬೇಡಿ
ಮುಂದೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ. ಬದಲಾವಣೆಗಾಗಿ ಬೆಂಬಲವನ್ನು ಎಲ್ಲರೂ ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿಯಾದರು. ಕೊಡಿ ಕೊಡಿ ಎನ್ನುವುದಕ್ಕೆ ಶುರು ಮಾಡಿದ್ದರು. ಅವರಿಗೆಲ್ಲ ಯಡಿಯೂರಪ್ಪ ಸಿಎಂ ಆಗಿರಲಿಲ್ಲ, ಬದಲಿಗೆ ವಿಜಯೇಂದ್ರ ಸಿಎಂ ಆಗಿದ್ದರು. 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಆದರೆ ಇನ್ನು ಯಾವುದೇ ಅಧಿಕಾರ ನೀಡಬಾರದು. ಅವರು ಎಲ್ಲಿಗೂ ಹೋಗುವುದಿಲ್ಲ, ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದು ತಿಳಿಸಿದರು.

The post ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬಾರದು: ವಿಶ್ವನಾಥ್ appeared first on Public TV.

Source: publictv.in

Source link