ಬೇಕಾಗುವ ಪದಾರ್ಥಗಳು
ಬಾಂಬೆ ರವಾ-1 ಕಪ್
ಜೀರಿಗೆ-1 ಚಮಚ
ಹಸಿಮೆಣಸಿನಕಾಯಿ-4ರಿಂದ 5
ಈರುಳ್ಳಿ- 1
ಟೊಮ್ಯಾಟೊ-3
ಕರಿಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಗಟ್ಟಿ ಮೊಸರು-ಒಂದು ಕಪ್
ಉಪ್ಪು

ಮಾಡುವ ವಿಧಾನ
ಒಂದು ಪಾತ್ರೆಗೆ ರವಾ ಹಾಕಿ ಅದಕ್ಕೆ ಅರ್ಧ ಚಮಚ ಜೀರಿಗೆ, ಹೆಚ್ಚಿದ ಹಸಿ ಮೆಣಸಿನ ಕಾಯಿ, ಒಂದು ಸಣ್ಣಗೆ ಕತ್ತರಿಸಿದ ಟೊಮ್ಯಾಟೊ, ಈರುಳ್ಳಿ, ಕರಿ ಬೇವು, ಕೊತ್ತಂಬರಿ ಸೊಪ್ಪು, ಮೊಸರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಿಕೊಳ್ಳಿ. ತುಂಬಾ ನೀರು ಆಗಬಾರದು ಹಿಟ್ಟು. ಸಾಮ್ಯಾನ್ಯ ಗಟ್ಟಿಯಾಗಿರಬೇಕು. ಈ ಮಿಶ್ರಣವನ್ನು 15 ನಿಮಿಷಗಳ ಕಾಲ ಚೆನ್ನಾಗಿ ನೆನೆಯಲು ಬಿಡಿ. ಬೇಕೆಂದರೆ ಕ್ಯಾರೆಟ್, ಬೀನ್ಸ್ ನ್ನು ಸಣ್ಣದಾಗಿ ಹೆಚ್ಚಿ ಇದಕ್ಕೆ ಸೇರಿಸಬಹುದು.

ನಂತರ ಒಂದು ಮಿಕ್ಸಿ ಜಾರಿನಲ್ಲಿ ಎರಡು ಟೊಮ್ಯಾಟೊ ಹಣ್ಣುಗಳನ್ನು ಕತ್ತರಿಸಿ ಹಾಕಿಕೊಳ್ಳಿ. ಸ್ವಲ್ಪ ಹಸಿಶುಂಠಿ, ನಾಲ್ಕೈದು ಬೆಳ್ಳುಳ್ಳಿ ಎಸಳು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ಟೊಮ್ಯಾಟೊ ಕ್ಯೂರಿ ರೆಡಿಯಾಗಿರುತ್ತದೆ.

ನಂತರ ಪಡ್ಡು ಮಾಡುವ ಪಾತ್ರವನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಿಸಿಯಾದ ನಂತರ ಪಡ್ಡಿನ ಹಿಟ್ಟನ್ನು ಹಾಕಿ, ಒಂದು ಕಡೆ ಬೆಂದ ನಂತರ ಮಗುಚಿ ಹಾಕಿ, ಚೆನ್ನಾಗಿ ಬೆಂದ ಮೇಲೆ ಒಲೆಯಿಂದ ತೆಗೆಯಿರಿ.

ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸ್ವಲ್ಪ ಜೀರಿಗೆ, ನಾಲ್ಕೈದು ಎಸಳು ಕತ್ತರಿಸಿದ ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು, ಚಿಟಿಕೆ ಅರಶಿನ, ಚಿಟಿಕೆ ಅಚ್ಚ ಖಾರದ ಪುಡಿ ಮತ್ತು ರುಬ್ಬಿಟ್ಟ ಟೊಮ್ಯಾಟೊ ಮಿಶ್ರಣ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಒಂದು ಚಮಚ ಸಕ್ಕರೆ, ಬೇಕೆಂದರೆ ಚಿಲ್ಲಿ ಸಾಸ್, ಗರಂ ಮಸಾಲ ಪುಡಿ ಇದ್ದರೆ ಹಾಕಬಹುದು, ಈ ಮಿಶ್ರಣ ಚೆನ್ನಾಗಿ ಬೆಂದ ನಂತರ ಅದಕ್ಕೆ ಪಡ್ಡು ಹಾಕಿ ಕಲಸಿ.ಐದು ನಿಮಿಷ ಬಿಟ್ಟು ಚೆನ್ನಾಗಿ ಹೀರಿಕೊಂಡ ನಂತರ ಬಿಸಿಬಿಸಿ ಪಡ್ಡು ಸೇವಿಸಿ.

ಮಸಾಲೆ ಮಿಶ್ರಣ ಹಾಕಿ ತಿನ್ನಲು ಇಷ್ಟಪಡದವರು ಹಾಗೆಯೇ ಪಡ್ಡುವನ್ನು ಚಟ್ನಿ, ಸಾಸ್ ಜೊತೆ ಕೂಡ ತಿನ್ನಬಹುದು.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Leave a comment