ಕಬ್ಬು (ಸಾಂದರ್ಭಿಕ ಚಿತ್ರ)
ಬಾಗಲಕೋಟೆ: ಕಬ್ಬು ಪೂರೈಸಿದ್ದ ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಇಲ್ಲಿನ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಚೇರಿ ಎದುರು ರೈತರಿಂದ ಪ್ರತಿಭಟನೆ ನಡೆಸಲಾಗಿದೆ. 2018ರಲ್ಲಿ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ್ದರು. ಕಬ್ಬು ಕ್ರಷಿಂಗ್ ನಂತರ ಸಾವರಿನ್ ಸಕ್ಕರೆ ಕಾರ್ಖಾನೆ ಬಂದ್ ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಬಳಿಯಿರುವ ಸಾವರಿನ್ ಸಕ್ಕರೆ ಕಾರ್ಖಾನೆ ಸುಮಾರು 20 ಕೋಟಿ ಬಾಕಿ ಉಳಿಸಿಕೊಂಡಿದೆ. 4 ವರ್ಷವಾದರೂ ಬಾಕಿ ಬಿಲ್ ಪಾವತಿಸಿಲ್ಲವೆಂದು ಆಕ್ರೋಶ ವ್ಯಕ್ತವಾಗಿದೆ. ಬಾಕಿ ಬಿಲ್ಗೆ ಒತ್ತಾಯಿಸಿ ರೈತರ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಧರಣಿ ನಡೆಸಲಾಗಿದೆ.
ವಿಜಯನಗರ: ತಿಮ್ಮಲಾಪುರ ಬಳಿ ಕಬ್ಬಿನ ಗದ್ದೆಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಬಳಿ ಕಬ್ಬಿನ ಗದ್ದೆಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ 2 ಕರಡಿಗಳ ರಕ್ಷಣೆ ಮಾಡಲಾಗಿದೆ. ಕಬ್ಬಿನ ಗದ್ದೆಯಲ್ಲಿ ಎರಡು ಕರಡಿಗಳು ಸಿಲುಕಿ ಹಾಕಿಕೊಂಡಿದ್ದವು. ಕರಡಿ ಚೀರಾಟ ಕೇಳಿ ಅರಣ್ಯ ತಿಮ್ಮಲಾಪುರ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ, ಅರಣ್ಯ ಅಧಿಕಾರಿಗಳು ಕರಡಿ ರಕ್ಷಣೆ ಮಾಡಿದ್ದಾರೆ. ಸೆರೆ ಹಿಡಿದ ಎರಡು ಕರಡಿಗಳನ್ನು ದರೋಜಿ ಕರಡಿ ಧಾಮಕ್ಕೆ ಸ್ಥಳಾಂತರ ಮಾಡಿದ್ದಾರೆ.
ಕೋಲಾರ: ಯಾವುದೇ ರೋಗ ಲಕ್ಷಣವಿಲ್ಲದೆ 20 ಕುರಿಗಳ ಸಾವು
ಯಾವುದೇ ರೋಗ ಲಕ್ಷಣವಿಲ್ಲದೆ 20 ಕುರಿಗಳು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುಣಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ರೈತ ಸಂಜೀವಪ್ಪಗೆ ಸೇರಿದ ಕುರಿಗಳು ಯಾವುದೇ ರೋಗ ಲಕ್ಷಣಗಳು ಇಲ್ಲದೆಯೂ ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.