ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಾಸ್ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನ ಸ್ವಾಗತಿಸಿದ್ದಾರೆ.
ಸರೋಗಸಿ ಮೂಲಕ ಇಬ್ಬರೂ ಪಾಲಕರಾಗಿ ಬಡ್ತಿ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಚೋಪ್ರಾ ಈ ಖುಷಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಕುಟುಂಬದ ಕಡೆ ಹೆಚ್ಚು ಸಮಯ ಕೊಡಬೇಕಾಗಿದೆ. ಹೀಗಾಗಿ ನಮಗೆ ಪ್ರೈವಸಿ ಬೇಕು, ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಆದರೆ ಪ್ರಿಯಾಂಕ ಚೋಪ್ರಾ ಅವರು ಯಾವ ಮಗು ಅನ್ನೋದರ ಗುಟ್ಟು ಬಿಟ್ಟುಕೊಟ್ಟಿಲ್ಲ.
ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ ಚೋಪ್ರಾ, ತಾಯ್ತನದ ಬಗ್ಗೆ ಮಾತನಾಡಿದ್ದರು. ನಾನು ಮತ್ತು ನಿಕ್ ಇಬ್ಬರೂ ಮಗು ಪಡೆಯಬೇಕು ಅನ್ನೋ ಆಸೆ ಇದೆ. ಅದರ ನಿರೀಕ್ಷೆಯಲ್ಲಿ ಇದ್ದೇವೆ ಎಂದಿದ್ದರು. ಅಂದ್ಹಾಗೆ ಈ ಜೋಡಿ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ನಿಕ್ ಜೋನಾಸ್ ಹಾಗೂ ಪ್ರಿಯಾಂಕಾ ಚೋಪ್ರಾ ನಡುವೆ 10 ವರ್ಷಗಳ ಅಂತರವಿದೆ ಇದೆ. ನಿಕ್ ಜೋನಾಸ್ಗಿಂತ ಪ್ರಿಯಾಂಕಾ 10 ವರ್ಷ ದೊಡ್ಡವರು.