ಬೆಂಗಳೂರು; ಬಾಡಿಗೆ ನೀಡಲು ಮನೆಯಲ್ಲಿಟ್ಟಿದ್ದ ಹಣದಲ್ಲಿ ಪತ್ನಿ ಆಭರಣ ಖರೀದಿ ಮಾಡಿದ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಜೀಯಾ ಕೊಲೆಯಾದ ದುರ್ದೈವಿ. ಪತಿ ಫಾರೂಖ್ ಪತ್ನಿಯನ್ನೇ ಹತ್ಯೆ ಮಾಡಿದ ಆರೋಪಿ. ಫಾರೂಖ್ ಬಾಡಿಗೆಯನ್ನು ಮಾಲೀಕರಿಗೆ ಕೊಡಲು 6,500 ರೂಪಾಯಿಗಳನ್ನು ಮನೆಯಲ್ಲಿ ಇಟ್ಟಿದ್ದನಂತೆ. ಈ ಹಣದಿಂದ ಪತ್ನಿ ನಾಜೀಯಾ ಫ್ಯಾನ್ಸಿ ಆಭರಣಗಳನ್ನು ಖರೀದಿ ಮಾಡಿದ್ದಳಂತೆ. ಇದರಿಂದ ದಂಪತಿಯ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಖ್, ಪತ್ನಿಯನ್ನು ಕೊಲೆಗೈದಿದ್ದಾನೆ ಎಂಬ ಆರೋಪಿಸಲಾಗಿದೆ.
ಪತ್ನಿಯ ಮೇಲೆ ಫಾರೂಖ್ ಹಲ್ಲೆ ಮಾಡಿದ್ದ ಪರಿಣಾಮ ಆಕೆ ಪ್ರಜ್ಞಾಹೀನರಾಗಿದ್ದರು. ಕೂಡಲೇ ಸ್ಥಳೀಯರ ನೆರವು ಪಡೆದಿದ್ದ ಪತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಆಕೆ ಮೃತಪಟ್ಟಿದ್ದಳು ಎನ್ನಲಾಗಿದೆ. ಸದ್ಯ ನಾಜೀಯ ಪೋಷಕರು ನೀಡಿರೋ ದೂರಿನ ಅನ್ವಯ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿ ಪತಿ ಫಾರೂಖ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.