ಅಭಿಮಾನಿಗಳ ಹೃದಯದ ಚಕ್ರವ್ಯೂಹದಲ್ಲಿ ಬಂಧಿಯಾದ ಸ್ಯಾಂಡಲ್ವುಡ್ನ ರಾಜಕುಮಾರ ನಮ್ಮನ್ನ ಅಗಲಿ, ಇಂದಿಗೆ 12 ದಿನ. ಇವತ್ತಿಗೂ ಪುನೀತ್ ರಾಜ್ಕುಮಾರ್ ಇಲ್ವಂತೆ ಅಂದ್ರೆ, ಕೋಟ್ಯಂತರ ಹಲವು ಜನ ನಂಬೋದಕ್ಕೆ ಸಿದ್ಧರೂ ಇಲ್ಲ.. ಅಪ್ಪು ನಮ್ಮನ್ನಗಲಿ ಇಷ್ಟು ದಿನವಾದ್ರೂ ಅವರಿಲ್ಲ ಎನ್ನುವ ನೋವು ಮರೆಯಾಗಿಲ್ಲ.. ಬೆಟ್ಟದ ಹೂ ಬಾಡುವ ಮುನ್ನ ಕರುನಾಡಿನ ಕಂದಮ್ಮಗಳ ಮನದಲ್ಲಿ ನೆಟ್ಟ ಪ್ರೀತಿ ಅನ್ನೋ ಅಭಿಮಾನದ ಹೂ, ಇಂದಿಗೂ ಪರಿಮಳ ಸೂಸುತ್ತಿದೆ. ಪುಟ್ಟ ಪುಟ್ಟ ಮಕ್ಕಳೂ ಕೂಡ ಅಪ್ಪುವನ್ನ ಕರೆದುಕೊಂಡ ಭಗವಂತನಿಗೆ ಹಿಡಿಶಾಪ ಹಾಕ್ತಿವೆ.
ದೇವರು ಅನ್ಯಾಯ ಮಾಡ್ಬಿಟ್ಟ.ದೇವರು ಈ ಥರಾ ಮಾಡ್ಬಾರ್ದಿತ್ತು. ಅಪ್ಪುವನ್ನ ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಬೇಕಿತ್ತು. ಆದ್ರೆ, ಈ ರೀತಿ ನೋಡ್ತೀವಂತಾ ನಾವು ಅಂದ್ಕೊಂಡೇ ಇರಲಿಲ್ಲ. ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೇ ಆಗ್ತಿಲ್ಲ . ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ನೋವು ಪುಟಾಣಿಗೆ ಅಲೆ ಅಲೆಯಾಗಿ ಅಪ್ಪಳಿಸಿದಾಗ ಮಗುವಾಡಿದ ಆಕ್ರೋಶದ ನುಡಿಗಳಿವು..
ಈ ಮಗು, ಈ ರೀತಿ ಹೇಳಬೇಕಿದ್ರೆ, ಹೃದಯಕ್ಕೆ ಅದೆಷ್ಟೋ ಸಂಕಟವಾಗಿರ್ಬೇಡ ಅನ್ನೋದನ್ನ ನೀವೆ ಒಮ್ಮೆ ಯೋಚ್ನೆ ಮಾಡಿ. ಇದು ಒಂದು ಕತೆಯಲ್ಲ. ಇಂತಹ ನೂರಾರು ದೃಶ್ಯಗಳು ಅಪ್ಪು ಸಮಾಧಿ ಮುಂದೆ ಕಾಣಸಿಗ್ತವೆ. ಕಣ್ಣಾಯಿಸಿದಲ್ಲೆಲ್ಲಾ ಬರೀ ಕಣ್ಣೀರ ದೃಶ್ಯಗಳೇ ಎದುರಾಗ್ತಿವೆ.. ಒಂದೊಂದೆ ಸೀನ್ಗಳೂ ಕರುಳು ಹಿಂಡುತ್ತಿವೆ. ಕಂದಮ್ಮಗಳ ಕಣ್ಣೀರು ಅಪ್ಪು ಸಮಾಧಿಯ ಮುಂದೆ ನೋವಿನ ಕಡಲನ್ನೇ ಸೃಷ್ಟಿ ಮಾಡ್ತಿದೆ.
ಹೌದು.. ನಿಜಕ್ಕೂ ಮಾತು ಮೌನವಾಗಿದೆ. ಕಂದಮ್ಮಗಳ ಒಡಲಲ್ಲಿ ನೋವಿನ ಅಲೆ ಎದ್ದಿದೆ. ಕಣ್ಣೀರು ಭೋರ್ಗೆರೆದು ಬರುತ್ತಿವೆ. ಪುಟಾಣಿಗಳ ಕಣ್ಣೀರು ದು:ಖದ ಒಂದೊಂದು ಕತೆ ಹೇಳುತ್ತಿದೆ. ಕಾಲ ಕಳೆದು ಹೋಗಿದೆ. ಆದ್ರೂ ಮಕ್ಕಳ ಮನದಲ್ಲಿ ಏನೋ ತಳಮಳ. ಅಭಿಮಾನಿಗಳ ಪಾಲಿನ ಆರಾಧ್ಯಧೈವ ಇನಿಲ್ಲ ಅನ್ನೋ ನೋವು. ಇದೇ ನೋವಿನಲ್ಲಿರುವ ಮಕ್ಕಳು, ಮಳೆಯನ್ನೂ ಲೆಕ್ಕಿಸದೆ, ಅಪ್ಪು ಸಮಾಧಿ ದರ್ಶನ ಪಡೆಯಲು ಬರ್ತಿದ್ದಾರೆ. ವರ್ಷಧಾರೆಯ ಮಧ್ಯೆಯೂ ಪೃಥ್ವಿಯ ಕಣ್ತುಂಬಿಕೊಳ್ಳಲು ಕ್ಯೂ ನಿಂತಿರುವ ಆ ದೃಶ್ಯಗಳು ಎಂತಹ ಕಟುಕನ ಹೃದಯವನ್ನೂ ಕರಗುವಂತೆ ಮಾಡಿದೆ.. ಅದರಲ್ಲೂ ವಿಶೇಷವಾಗಿ ಅಂದೊಂದು ದಿನ ಪುನೀತ್ಗಾಗಿ ಮುಗುವೊಂದು ಬೊಂಬೆ ಹೇಳುತೈತೆ ಹಾಡು ಹಾಡಿ ಎಲ್ಲರ ಮನಸ್ಸು ಕದ್ದಿತ್ತು. ಆದ್ರೆ, ಇಂದು ಪುನೀತ್ಗಾಗಿ ಇಂದು ಮಗುವೊಂದು ಹಾಡಿದ ಬೊಂಬೆ ಹೇಳುತೈತೆ ಹಾಡು, ಎಲ್ಲರ ಕರುಳು ಹಿಂಡುವಂತಿದೆ..
ಇದಷ್ಟೇ ಅಲ್ಲ… ಕರುನಾಡಿನ ಮನೆ ಮಗನಾಗಿರುವ ಅಪ್ಪು ಅಂದ್ರೆ, ಅದೆಷ್ಟೋ ಕಂದಮ್ಮಗಳಿಗೆ ಅಚ್ಚು ಮೆಚ್ಚು. ಅಪ್ಪು ಸಿನಿಮಾ ನೋಡಿ ಡ್ಯಾನ್ಸ್ ಕಲಿತ ಮಕ್ಕಳು ಅದೆಷ್ಟೋ.
ಕನ್ನಡ ಚಿತ್ರರಂಗದ ಈ ಅಜಾತ ಶತ್ರು, ಅಭಿಮಾನಿಗಳ ಆರಾಧ್ಯ ದೈವವೇ ಆಗಿ ಹೋಗಿದ್ದಾರೆ. ಪುನೀತ್ ರಾಜ್ಕುಮಾರ್ ಮತ್ತೆ ಮರಳಿ ಬರಲಿ ಅನ್ನೋ ಪ್ರಾರ್ಥನೆ ಕೂಡ ಕರುನಾಡಿನ ಅಷ್ಟ ದಿಕ್ಕಿನಲ್ಲೂ ಮೊಳಗುತ್ತಿದೆ . ಸಿನಿಮಾ ಮೂಲಕ, ಸಮಾಜ ಸೇವೆಯ ಮೂಲಕ, ಕನ್ನಡದ ಕೋಟ್ಯಾಧಿಪತಿ ಸೇರಿ ಅನೇಕ ಕಾರ್ಯಕ್ರಮಗಳ ಮೂಲಕ ಅಪ್ಪು ಈ ನಾಡಿನಲ್ಲಿ ಬಿತ್ತಿರುವ ಸಾಧನೆಯ ಮೈಲಿಗಲ್ಲು ಎಂದಿಗೂ ಅಳಿಸಲಾಗದು.
ಅಪ್ಪು ಬರೀ ಸ್ಯಾಂಡಲ್ವುಡ್ಗೆ ಮಾತ್ರ ರಾಜಕುಮಾರನಲ್ಲ.. ಕರುನಾಡಿನ ಅದೆಷ್ಟೋ ಕಂದಮ್ಮಗಳಿಗೆ ಅಪ್ಪು ಅಂದ್ರೆ ಅರಸ. ಅಪ್ಪು ಹೃದಯ ಕೂಡ ಹಾಗೆ. ಅದು ತಾಯಿ ಮಗುವಿನ. ಸಿನಿಮಾದಂತೆ ನಿಜ ಜೀವನದಲ್ಲೂ ಈ ಪರಮಾತ್ಮನಿಗೆ ಮಕ್ಕಳಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ.
ಕರುನಾಡಿನ ಕಂದಮ್ಮಗಳ ಮನದಲ್ಲಿ ಪ್ರೀತಿಯ ಗಿಡವನ್ನ ನೆಟ್ಟು ಅಪ್ಪು ಎಂದೂ ಬಾರದ ಊರಿಗೆ ಪಯಣಿಸಿ ಬಿಟ್ಟಿದ್ದಾರೆ. ಇದೀಗ ಕಂದಮ್ಮಗಳು, ದೇವರು ಯಾಕೆ ಇಂತಹ ಅನ್ಯಾಯ ಮಾಡ್ಬಿಟ್ಟ ಅನ್ನೋ ಪ್ರಶ್ನೆ ಮಾಡ್ತಿದ್ದಾರೆ. ಪುಟಾಣಿಗಳ ನೋವು ತುಂಬಿದ ಎದೆಯಾಳದಿಂದ ಚಿಮ್ಮಿದ ಈ ಪ್ರಶ್ನೆಗೆ ಯಾರ ಬಳಿ ಉತ್ತರ ಇದೆ ಹೇಳಿ..?
ಅಪ್ಪು ಅಂದ್ರೆನೆ ಹಾಗೆ.. ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲಾ ತಲೆಮಾರಿನ ಜನರನ್ನ ಹಿಡಿದಿಟ್ಟುಕೊಂಡವರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ಅಪ್ಪುಗೆ ಮಕ್ಕಳಂದ್ರೆ ಕೂಡ ಅಷ್ಟೇ ಅಚ್ಚು ಮೆಚ್ಚು.