ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಕರಿಮನೆ ಗ್ರಾಪಂ ವ್ಯಾಪ್ತಿಯ ಚಾಲಕ ಸುಧಾಕರ್ ಮತ್ತು ಮಮತಾ ದಂಪತಿ ‘ತಮ್ಮ ಪುತ್ರಿ ಸಹನಾಳ (17) ಸಾವಿಗೆ ಪ್ರಿಯಕರ ಪ್ರಶಾಂತ್‌ ಕಾರಣ’ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಘಟನೆ?
ಹೊಸನಗರದ ಹೋಲಿ ರೆಡಿಮರ್ ಶಾಲೆಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ತಮ್ಮ ಮಗಳು ಸಹನಾಳನ್ನು ಪ್ರೀತಿಸುವಂತೆ ಸುಮಾರು 27 ವರ್ಷದ ಪ್ರಶಾಂತ್‌ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕೆಳಗಿನ ಕನ್ನಳ್ಳಿ ವಾಸಿ ವಾಸಪ್ಪಗೌಡರ ಮಗನಾದ ಕೆ.ವಿ.ಪ್ರಶಾಂತ್ ನನ್ನ ಮಗಳ ಮೊಬೈಲ್ ನಂಬರ್‌ಗೆ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾನೆ. ನನ್ನ ಮಗಳು ತನಗಾಗುತ್ತಿದ್ದ ಕಿರಿಕಿರಿಯನ್ನು ನನ್ನ ಹೆಂಡತಿಯ ಹತ್ತಿರ ಸಾಕಷ್ಟು ಬಾರಿ ಹೇಳಿಕೊಂಡಿದ್ದಳು ಎಂದು ಆರೋಪಿಸಿದ್ದಾರೆ.

ನಾನು ಮತ್ತು ನನ್ನ ಪತ್ನಿ ಮಮತಾ ನನ್ನ ಮಗಳ ಹಿಂದೆ ಬೀಳಬೇಡ, ಮಾನಸಿಕ ಹಿಂಸೆ ನೀಡಬೇಡ ಎಂದು ಪ್ರಶಾಂತನಿಗೆ ಸಾಕಷ್ಟು ಬಾರಿ ಬುದ್ಧಿ ಮಾತುಗಳನ್ನು ಹೇಳಿದ್ದೆವು. ಆದರೂ ಪ್ರತಿ ದಿನ ನನ್ನ ಮಗಳಿಗೆ ಕಿರುಕುಳ ನೀಡಿ ನನ್ನನೂ ಪ್ರೀತಿಸದಿದ್ದರೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಪ್ರಶಾಂತ ಹಿಂಸೆ ನೀಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಈ ಘಟನೆಗೆ ನನ್ನ ಮಗಳು ಈತನ ಕಾಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮೇ 22 ರಂದು ನಮ್ಮ ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಕುಡಿದಿದ್ದು ನಂತರ ವಾಸದ ಮನೆಗೆ ಬಂದು ತಾಯಿಯ ಬಳಿ ನಾನು ವಿಷ ಕುಡಿದಿದ್ದೇನೆಂದು ಹೇಳಿದ್ದಾಳೆ.

ತಕ್ಷಣ ಸಹನಾಳನ್ನು ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಜೂನ್ 2 ರಂದು ಆಸ್ಪತ್ರೆಯಲ್ಲಿ ಸಹನಾಳನ್ನು ಸಮಾಧಾನವಾಗಿ ವಿಚಾರಿಸಿದಾಗ ವಿಷ ಕುಡಿಯಲು ಪ್ರಶಾಂತ್ ಕಾರಣವೆಂದು ನಡೆದ ಘಟನೆ ಬಾಯ್ಬಿಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಜೂನ್ 3 ರಂದು ಪ್ರಾಣ ಬಿಟ್ಟಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣರಾದ ಪ್ರಶಾಂತ್‌ನನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಬೇಕೆಂದು ಮಗಳನ್ನು ಕಳೆದುಕೊಂಡ ದಂಪತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಸಹನಾಳು ವಿಷ ಕಡಿದ ವಿಷಯ ತಿಳಿದ ಅಪರಾಧಿ ಪ್ರಶಾಂತ್‌ರವರು ಕಣ್ಮರೆಯಾಗಿದ್ದು ಗ್ರಾಮಸ್ಥರು ಆತನನ್ನು ತಕ್ಷಣ ಹುಡುಕಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

The post ಬಾಲಕಿ ಆತ್ಮಹತ್ಯೆ: ‘ಮಗಳ ಸಾವಿಗೆ ಪ್ರಿಯಕರ’ ಕಾರಣ ಎಂದ ಪೋಷಕರು appeared first on News First Kannada.

Source: newsfirstlive.com

Source link