ಬಾಲಿವುಡ್​ಗೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್; ಮಹತ್ವದ ಕೆಲಸಕ್ಕೆ ಶುಭಾರಂಭ | After KGF Chapter 2 Mass hit Shah Rukh Khan Started Work with Director Rajkumar Hirani


ಬಾಲಿವುಡ್​ಗೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್; ಮಹತ್ವದ ಕೆಲಸಕ್ಕೆ ಶುಭಾರಂಭ

ಶಾರುಖ್-ಯಶ್

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ತೆರೆಗೆ ಬಂದ ನಂತರದಲ್ಲಿ ಬಾಲಿವುಡ್ ಕಥೆ ಮುಗಿದೇ ಹೋಯಿತು ಎನ್ನುವ ಮಾತು ಕೇಳಿಬರುತ್ತಿದೆ. ಇದು ಬಾಲಿವುಡ್ (Bollywood) ಸ್ಟಾರ್​ಗಳು ಹಾಗೂ ಅಲ್ಲಿನ ನಿರ್ದೇಶಕರಿಗೆ ಚಿಂತೆ ತಂದಿದೆ. ಹೇಗಾದರೂ ಮಾಡಿ ಮತ್ತೆ ಮೊದಲಿನ ಚಾರ್ಮ್​ ಮರಳಿ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ ಅಲ್ಲಿನ ನಿರ್ದೇಶಕರು. ಹೀಗಿರುವಾಗಲೇ ಶಾರುಖ್ ಖಾನ್ ಅವರು (Shah Rukh Khan) ಹೊಸ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಸೋಲನ್ನೇ ಕಾಣದ ನಿರ್ದೇಶಕ ರಾಜ್​ ಕುಮಾರ್ ಹಿರಾನಿ ಜತೆ ಅವರು ಕೆಲಸ ಮಾಡುತ್ತಿದ್ದಾರೆ.

‘ಪುಷ್ಪ’, ‘ಆರ್​ಆರ್​ಆರ್’, ‘ಕೆಜಿಎಫ್ 2’ ಚಿತ್ರದ ಕಲೆಕ್ಷನ್ ನೋಡಿ ಬಾಲಿವುಡ್ ಮಂದಿ ಮಂಕಾಗಿದ್ದಾರೆ. ಸಲ್ಮಾನ್ ಖಾನ್ ಮೊದಲಾದವರ ಚಿತ್ರಗಳು ಗೆಲುವಿನ ಮುಖವನ್ನು ಕಾಣುತ್ತಿಲ್ಲ. ದಕ್ಷಿಣ ಭಾರತದ ಸಿನಿಮಾಗಳನ್ನು ಬಾಲಿವುಡ್​ಗೆ ರಿಮೇಕ್ ಮಾಡಿ ಕೊಂಚ ಬಿಸ್ನೆಸ್ ಮಾಡಿಕೊಳ್ಳುತ್ತಿದ್ದಾರೆ. ‘ನಾನು ಸ್ಥಳೀಯ ಸಿನಿಮಾಗಳನ್ನು ಮಾಡುವುದಿಲ್ಲ’ ಎಂದು ಧಿಮಾಕಿನ ಮಾತುಗಳನ್ನು ಆಡಿದ್ದರು ಜಾನ್​ ಅಬ್ರಾಹಂ. ಅವರಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ. ಹೀಗಿರುವಾಗಲೇ ಮತ್ತೆ ಬಾಲಿವುಡ್​ಅನ್ನು ಮೇಲಕ್ಕೆತ್ತಬೇಕು ಎಂದು ಅಲ್ಲಿನ ಸ್ಟಾರ್​ಗಳು ನಿರ್ಧರಿಸಿದಂತಿದೆ.

ಶಾರುಖ್ ಖಾನ್ ಅವರು ಒಂದೇ ಬಾರಿಗೆ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದ ಕೆಲಸಗಳಲ್ಲಿ ಶಾರುಖ್ ಬ್ಯುಸಿ ಇದ್ದಾರೆ. ಇದಲ್ಲದೆ, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಜತೆ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೆ, ರಾಜ್​ಕುಮಾರ್ ಹಿರಾನಿ ಜತೆಗಿನ ಸಿನಿಮಾಗೆ ಅವರು ಚಾಲನೆ ನೀಡಿದ್ದಾರೆ.

ರಾಜ್​ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಹಿಟ್ ಆಗಿವೆ. ಅವರ ಕೊನೆಯ ಸಿನಿಮಾ ‘ಸಂಜು’. ಸಂಜಯ್ ದತ್​ ಅವರ ಕುರಿತು ಸಿದ್ಧವಾದ ಈ ಬಯೋಪಿಕ್ ಹಿಟ್ ಆಗಿತ್ತು. ಇದಾದ ಬಳಿಕ ಅವರು ಯಾವುದೇ ಸಿನಿಮಾ ಘೋಷಿಸಿಲ್ಲ. ಈಗ ಶಾರುಖ್ ಖಾನ್ ಜತೆ ಶೂಟಿಂಗ್ ಆರಂಭಿಸಿದೆ.

ಶಾರುಖ್ ಖಾನ್ ಹಾಗೂ ರಾಜ್​ಕುಮಾರ್ ಹಿರಾನಿ ಪಂಜಾಬ್​ನ ಗ್ರಾಮದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಕೆಲದ ದಿನಗಳ ಕಾಲ ಅವರು ಇಲ್ಲಿಯೇ ಶೂಟಿಂಗ್ ನಡೆಸಲಿದ್ದಾರೆ. ನಂತರ ಚಿತ್ರತಂಡ ಲಂಡನ್​ಗೆ ಪ್ರಯಾಣ ಬೆಳೆಸಲಿದೆ. ಈ ಸಿನಿಮಾ ಯಾವ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

TV9 Kannada


Leave a Reply

Your email address will not be published.