ರಾಜ್ ಕುಟುಂಬಸ್ಥರಿಂದ ಇಂದು ಅನ್ನ ಸಂತರ್ಪಣೆ
ಅಪ್ಪು ನಮ್ಮನ್ನಗಲಿ 12 ದಿನ ಹಿನ್ನೆಲೆ ಅಭಿಮಾನಿಗಳಿಗಾಗಿ ದೊಡ್ಮನೆ ಇಂದು ಅರಮನೆ ಮೈದಾನದಲ್ಲಿ ಪುಣ್ಯಸ್ಮರಣೆ ಕಾರ್ಯ ಹಮ್ಮಿಕೊಂಡಿದೆ. ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದು ಸುಮಾರು 30 ಸಾವಿರ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸಸ್ಯಹಾರ ಮತ್ತು ಮಾಂಸಹಾರದ ಖಾದ್ಯಗಳನ್ನ ಸಿದ್ಧಪಡಿಸಲಾಗ್ತಿದೆ. ಇನ್ನು ಕಾರ್ಯಕ್ರಮ ಹಿನ್ನೆಲೆ ಅರಮನೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
‘ನಮ್ಮ ಕುಟುಂಬದ 68 ಸದಸ್ಯರಿಂದ ನೇತ್ರದಾನ’
ನಟ ಪುನೀತ್ ರಾಜ್ ಕುಮಾರ್ರಿಂದ ಪ್ರೇರಣೆಗೊಂಡು ನೇತ್ರದಾನ ಮಾಡಲು ಶಾಸಕ ರೇಣುಕಾಚಾರ್ಯ ಕುಟುಂಬಸ್ಥರು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ನಮ್ಮ ಕುಟುಂಬದ 68 ಸದಸ್ಯರು ನೇತ್ರದಾನಕ್ಕೆ ಮುಂದಾಗಿದ್ದಾರೆ. ದೇಹ ಮಣ್ಣಲ್ಲಿ ಸೇರುವ ಬದಲು ನಾಲ್ಕು ಜನರಿಗೆ ಉಪಯೋಗವಾಗಬೇಕು. ಪುನೀತ್ ರಾಜ್ಕುಮಾರ್ ಪ್ರೇರಣೆಯಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ನಮ್ಮದು ಅವಿಭಕ್ತ ಕುಟುಂಬ. ನಮ್ಮ ಕುಟುಂಬದ 68 ಸದಸ್ಯರು ಕಣ್ಣುದಾನ ಮಾಡ್ತೀವಿ ಅಂತ ಹೇಳಿದ್ದಾರೆ.
ಮಹಾರಾಷ್ಟ್ರದಿಂದ ಬರುವವರಿಗೆ ಹೊಸ ಮಾರ್ಗಸೂಚಿ
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಬರುವ ಮುನ್ನ RTPCR ಟೆಸ್ಟ್, ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯವಾಗಿದೆ. ಜೊತೆಗೆ ಎರಡು ಡೋಸ್ ಪಡೆದಿರುವ ಬಗ್ಗೆ ಅಧಿಕೃತ ಪ್ರಮಾಣ ಪತ್ರವನ್ನೂ ಸರ್ಕಾರ ಕಡ್ಡಾಯಗೊಳಿಸಿದೆ. ಜ್ವರ, ಕಫ, ಶೀತ ಸೇರಿದಂತೆ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ RTPCR ಟೆಸ್ಟ್ ಮಾಡಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ದ್ರಾವಿಡರ ನಾಡಲ್ಲಿ ನಿಲ್ಲದ ವರುಣನ ಆರ್ಭಟ
ತಮಿಳುನಾಡಿನಲ್ಲಿ ಎರಡ್ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಜನ ಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದೆ. ಮಳೆರಾಯನ ಅಬ್ಬರಕ್ಕೆ ಮನೆಗಳನ್ನ ಕಳೆದುಕೊಂಡಿರೋ 1 ಸಾವಿರದ 400ಕ್ಕೂ ಹೆಚ್ಚು ಜನರು ಗಂಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಂತಿದೆ. ಮುಂದಿನ ಐದಾರು ದಿನಗಳವರೆಗೆ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದೆ.
ಶ್ರೀನಗರದಲ್ಲಿ ಇಂದಿನಿಂದ ಕೊರೊನಾ ಕರ್ಫ್ಯೂ
ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, ಕೊರೊನಾ ಕರ್ಫ್ಯೂ ವಿಧಿಸಲಾಗಿದೆ. ಶ್ರೀನಗರ ಜಿಲ್ಲೆಯ ಲಾಲ್ ಬಜಾರ್, ಹೈದರ್ ಪೋರಾ, ಚನಪೋರಾ ಸೇರಿದಂತೆ 10 ಪ್ರದೇಶಗಳಲ್ಲಿ ಇಂದಿನಿಂದ 10 ದಿನಗಳ ಕಾಲ ಕೊರೊನಾ ಕರ್ಫ್ಯೂ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಹಾಟ್‌ಸ್ಪಾಟ್, ಮೈಕ್ರೋ ಕಂಟೈನ್‌ಮೆಂಟ್ ವಲಯಗಳನ್ನ ಕೂಡ ಘೋಷಣೆ ಮಾಡಲಾಗಿದೆ. ಸಾರ್ವಜನಿಕ ಸಭೆಗಳಿಗೂ ಬ್ರೇಕ್ ಹಾಕಲಾಗಿದ್ದು, ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
‘ಫ್ರಾನ್ಸ್ನ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ’
ಫ್ರಾನ್ಸ್ನ ಡಸಾಲ್ಸ್ ಏವಿಯೇಷನ್ ಜೊತೆ ಭಾರತ ಮಾಡಿಕೊಂಡ 36 ರಫೇಲ್ ಯುದ್ಧ ವಿಮಾನಗಳ ಮಾರಾಟದ ಒಪ್ಪಂದದಲ್ಲಿ ಭ್ರಷ್ಟಾಚಾರ ಆಗಿದೆ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಮೀಡಿಯಾ ಪಾರ್ಟ್ ಅನ್ನೋ ಫ್ರೆಂಚ್ ಪೋರ್ಟ್ಲ್ ಮಾಹಿತಿ ನೀಡಿದೆ. ಈ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಅಂತ ಫ್ರಾನ್ಸ್ನ ಮೀಡಿಯಾ ಪಾರ್ಟ್ ವರದಿ ಮಾಡಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಾಕ್ ಬೆನ್ನಲ್ಲೇ ಭಾರತ ಕರೆದ ಸಭೆ ಬಹಿಷ್ಕರಿಸಿದ ಚೀನಾ
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಬಂದ ಬಳಿಕದ ಬೆಳವಣಿಗೆ ಬಗ್ಗೆ ಚರ್ಚಿಸಲು ನಾಳೆ ಭಾರತ ಕರೆದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಗೆ ಹಾಜರಾಗಲ್ಲ ಅಂತ ಪಾಕಿಸ್ತಾನ ಹೇಳಿದ ಬೆನ್ನಲ್ಲೇ ಚೀನಾ ಕೂಡ ಸಭೆಗೆ ಗೈರಾಗುವುದಾಗಿ ಘೋಷಿಸಿದೆ. ಸಭೆ ಕರೆದಿರುವ ಭಾರತದ ನಡೆಯ ಬಗ್ಗೆ ಉದ್ಧಟತನದ ಮಾತಾಡಿರುವ ಪಾಕ್, ಭಾರತ ಶಾಂತಿಯನ್ನ ಹಾಳುಮಾಡುವ ರಾಷ್ಟ್ರ ಅಂತ ಆರೋಪಿಸಿದೆ. ಸಭೆಗೆ ಬರುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಇಲ್ಲಸಲ್ಲದ ಆರೋಪ ಮಾಡುವುದು ಪಾಕ್ ಮನಸ್ಥಿತಿ ಅಂತ ಭಾರತ ತಿರುಗೇಟು ನೀಡಿದೆ.
ಅಫ್ಘನ್ನಲ್ಲಿ ಕೊನೆಗೂ ವಿದ್ಯಾರ್ಥಿನಿಯರ ಶಾಲಾರಂಭ
ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕಡೆಗೂ ವಿದ್ಯಾರ್ಥಿನಿಯರು ಶಾಲೆಗೆ ತೆರಳಲು ಆರಂಭಿಸಿದ್ದಾರೆ. ಅಫ್ಘಾನ್ನ ಹೆರತ್ ಪ್ರಾಂತ್ಯದಲ್ಲಿ 7ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ ಶಾಲೆ ಆರಂಭಗೊಂಡಿದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಅಂತ ವಿದ್ಯಾರ್ಥಿನಿಯರ ಪೋಷಕರು ಸಂತಸ ವ್ಯಕ್ತಪಡಿಸಿದ್ದರೂ ಈ ಬಗ್ಗೆ ತಾಲಿಬಾನ್ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾದಾಗಿನಿಂದ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರ ಬರಲೂ ಸಹ ಅನುಮತಿ ನೀಡಿರಲಿಲ್ಲ. ಆದ್ರೀಗ ಜಾಗತಿಕ ಒತ್ತಡಕ್ಕೆ ತಾಲಿಬಾನ್ ಮಣಿದಂತಿದ್ದು ಹೆಚ್ಚು ಮಕ್ಕಳು ಶಾಲೆಯತ್ತ ಮುಖಮಾಡುತ್ತಿದ್ದಾರೆ.
ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆ ನಡಿಗೆ
ನಿರ್ಮಾಣ ಹಂತದ ಬಾಹ್ಯಾಕಾಶ ನಿಲ್ದಾಣದಲ್ಲಿ 6 ಗಂಟೆಗಳ ಸ್ಪೇಸ್ ವಾಕ್ ಮುಗಿಸಿದ ಚೀನಾದ ಮೊದಲ ಮಹಿಳೆ ಎಂಬ ಕೀರ್ತಿಗೆ ವಾಂಗ್ ಯಾಪಿಂಗ್ ಭಾಜನರಾಗಿದ್ದಾರೆ. ಟಿಯಾನ್ಹೆ ಎಂಬ ಬಾಹ್ಯಾಕಾಶ ನಿಲ್ದಾಣದಲ್ಲಿ ತನ್ನ ಸಹೋದ್ಯೋಗಿ ಝೈ ಝಿಗಾಂಗ್ ಅವರೊಂದಿಗೆ 6 ಗಂಟೆಗಳ ಕಾಲ ಸ್ಪೇಸ್ ವಾಕ್ ಮುಗಿಸಿ ಮಾಡ್ಯೂಲ್ಗೆ ಮರಳಿದ್ದಾರೆ. ಇದು ಚೀನಾದ ಬಾಹ್ಯಾಕಾಶ ಇತಿಹಾಸದಲ್ಲಿ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ಮೊದಲ ಬಾಹ್ಯಾಕಾಶ ನಡಿಗೆಯಾಗಿದೆ.
ಗೆಲುವಿನೊಂದಿಗೆ ನಾಯಕತ್ವಕ್ಕೆ ವಿದಾಯ ಹೇಳಿದ ಕೊಹ್ಲಿ
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗೆಲುವಿನ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ಸ್ ತಲುಪುವ ಕನಸು ಭಗ್ನಗೊಂಡಿದ್ದರೂ ಕೊಹ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಅಂತ್ಯಗೊಂಡಾಗ ಟಿ20 ಆವೃತ್ತಿಯಲ್ಲಿ ಟೀಂ ಇಂಡಿಯಾಗೆ ಅತಿ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಭಾಜನರಾಗಿದ್ದರು. ಈಗ ಆ ಸಾಲಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ.