ಬಿಎಸ್​ಎಫ್​ ಅಧಿಕಾರ ವ್ಯಾಪ್ತಿಯನ್ನು 50 ಕಿಮೀಗೆ ಏರಿಸಿದ್ದರ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ಪಶ್ಚಿಮ ಬಂಗಾಳ ವಿಧಾನಸಭೆ | West Bengal Assembly passes resolution against BSF jurisdiction expand


ಬಿಎಸ್​ಎಫ್​ ಅಧಿಕಾರ ವ್ಯಾಪ್ತಿಯನ್ನು 50 ಕಿಮೀಗೆ ಏರಿಸಿದ್ದರ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ಪಶ್ಚಿಮ ಬಂಗಾಳ ವಿಧಾನಸಭೆ

ಸಾಂಕೇತಿಕ ಚಿತ್ರ

ಗಡಿ ಭದ್ರತಾ ಪಡೆ (BSF)ಯ ಆಡಳಿತ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀ ದೂರಕ್ಕೆ ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ. ಇನ್ನು ಕೇಂದ್ರದ ಈ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆ ನವೆಂಬರ್​ 11ರಂದೇ ನಿರ್ಣಯ ಅಂಗೀಕಾರ ಮಾಡಿದೆ.  ರಾಜ್ಯದೊಳಗೆ ಬಿಎಸ್​ಎಫ್​ ಆಡಳಿತ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಆಯಾ ರಾಜ್ಯಗಳ ಪೊಲೀಸರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂಬುದು ಪಶ್ಚಿಮ ಬಂಗಾಳ, ಪಂಜಾಬ್​​ಗಳ ವಾದ.

ಅಸ್ಸಾಂ, ಪಂಜಾಬ್​ ಮತ್ತು ಪಶ್ಚಿಮಬಂಗಾಳದಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ರಾಜ್ಯದೊಳಗೆ 50 ಕಿಮೀ ದೂರದವರೆಗೆ ಬಿಎಸ್ಎಫ್​ ಯೋಧರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಇದೇ ವರ್ಷ ಅಕ್ಟೋಬರ್​ನಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದಕ್ಕೂ ಮೊದಲ ಕೇವಲ 15 ಕಿಮೀ ದೂರದವರೆಗೆ ಮಾತ್ರ ಅವರ ಕಾರ್ಯವ್ಯಾಪ್ತಿಯಿತ್ತು.  ಅಂದರೆ ಅಂತಾರಾಷ್ಟ್ರೀಯ ಗಡಿಯಿಂದ ರಾಜ್ಯದೊಳಗೆ 50 ಕಿಮೀ ದೂರದವರೆಗೂ ಬಿಎಸ್​ಎಫ್​ ಯೋಧರು ಶೋಧ ಕಾರ್ಯ ನಡೆಸಬಹುದು, ಅನುಮಾನಿತ ವ್ಯಕ್ತಿಗಳನ್ನು ಬಂಧಿಸಬಹುದು ಎಂದು ಹೇಳಲಾಗಿತ್ತು. ಆದರೆ ಪಂಜಾಬ್​ ವಿಧಾನಸಭೆ ಈಗಾಗಲೇ ಇದನ್ನು ವಿರೋಧಿಸಿದೆ.

ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರದ ವೇಳೆ ಮಾತನಾಡಿದ, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ, ಬಿಎಸ್​ಎಫ್​​​ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿದ್ದು ಸರಿಯಾದ ಕ್ರಮವಲ್ಲ. ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಜಂಗಲ್‌ಮಹಲ್‌ನಿಂದ ಕೇಂದ್ರ ಭದ್ರತಾ ಪಡೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸಿದಾಗ ಅದನ್ನು ರಾಜ್ಯ ಸರ್ಕಾರ ವಿರೋಧಿಸಿತು. ಆದರೆ ಇದೇ ರಾಜ್ಯ ಸರ್ಕಾರ ಬಿಎಸ್​ಎಫ್​ ಪಡೆಗಳ ಕಾರ್ಯವ್ಯಾಪ್ತಿ ವಿಸ್ತರಣೆಯನ್ನು ವಿರೋಧಿಸುತ್ತಿದೆ. ಬಿಎಸ್​ಎಫ್​ ಯೋಧರಿಗೆ 50 ಕಿಮೀ ವರೆಗೆ ಅಧಿಕಾರ ಕೊಟ್ಟರೆ, ರಾಜ್ಯ ಪೊಲೀಸರಿಗೆ ಮತ್ತು ಗಡಿಭದ್ರತಾ ಪಡೆ ಸಿಬ್ಬಂದಿಗೆ ಜಗಳವಾಗುತ್ತದೆ..ಅವರಲ್ಲೇ ಸಂಘರ್ಷ ಮೂಡುತ್ತದೆ ಎಂದು ರಾಜ್ಯ ಸರ್ಕಾರ ಹೇಳುತ್ತಿರುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಪುನೀತ್ ಹೆಸರಲ್ಲಿ ಹೊಸ ಸಂಸ್ಥೆ ಅಥವಾ ಸ್ಟುಡಿಯೋ ಆರಂಭಿಸಿ’; ಡಿ.ಕೆ. ಶಿವ​ಕುಮಾರ್​ ಮನವಿ

TV9 Kannada


Leave a Reply

Your email address will not be published. Required fields are marked *