ಬಿಎಸ್​ವೈ ಆಪ್ತನಿಗೂ IT ಶಾಕ್; 10ಕ್ಕೂ ಹೆಚ್ಚು ಅಧಿಕಾರಿಗಳ ನಿವಾಸದ ಮೇಲೆ ದಾಳಿ

ಬೆಂಗಳೂರು: ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಗೆ ಇಳಿದಿದ್ದಾರೆ. 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ 50ಕ್ಕೂ ಹೆಚ್ಚು ಕಡೆ ದಾಳಿ ಮಾಡಿದೆ. ಬೆಳಗ್ಗೆ 5 ಗಂಟೆಯಿಂದ ಶೋಧ ಕಾರ್ಯಕಾರ್ಯ ಶುರುವಾಗಿದೆ.

ದಾಳಿಗಾಗಿ 120 ಕಾರು ಬುಕ್..!
ಮೊದಲೇ ನಿರ್ಧರಿಸಿದ್ದಂತೆ 120 ಇನೋವಾ ಕಾರುಗಳನ್ನ ಐಟಿ ಅಧಿಕಾರಿಗಳನ್ನು ಬುಕ್ ಮಾಡಿಕೊಂಡಿದ್ದರು. ಅದರಂತೆ ಇಂದು ಬೆಳಗ್ಗೆ ಏಕಕಾಲದಲ್ಲಿ 50 ಕಡೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೆಗಡೆ ನಗರದ ಎನ್.ಆರ್.ರಾಯಲ್ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಅಮಲಾ ಅವರ ನಿವಾಸ ಅಲ್ಲಿದೆ ಎನ್ನಲಾಗಿದೆ. ಐಟಿ ದಾಳಿ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಬಳಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

ಜೊತೆಗೆ ನಗರದ ಸಹಕಾರನಗರದ ರಾಹುಲ್ ಎಂಟರ್ ಪ್ರೈಸಸ್ ಮೇಲೂ ಐಟಿ ದಾಳಿ ನಡೆಸಿದ್ದಾರೆ. ಸಿಮೆಂಟ್ ಮತ್ತು ಸ್ಟೀಲ್ ಡೀಲರ್ ಕಚೇರಿ ಇದಾಗಿದೆ. ಇಲ್ಲಿಗೆ ಐಟಿ ಅಧಿಕಾರಿಗಳು ಮೂರು ಇನೋವಾ ಕಾರಿನಲ್ಲಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಯೂ ಕೂಡ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಬಿಎಸ್​ವೈ ಆಪ್ತನಿಗೂ ಶಾಕ್..?
ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್ನಲಾಗಿರುವ ಉಮೇಶ್ ಎಂಬುವವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಉಮೇಶ್ ಅವರು ಸುಮಾರು 10 ವರ್ಷಗಳ ಕಾಲ ಬಿಎಸ್​ ಯಡಿಯೂರಪ್ಪ ಜೊತೆ ಇದ್ದರು. ಈತ ಬಿಎಸ್​ವೈ ಸರ್ಕಾರದಲ್ಲಿ ನೀರಾವರಿ ಇಲಾಖೆಯನ್ನ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ನೀರಾವರಿ ಇಲಾಖೆಯಲ್ಲಿ ನೀಡಲಾಗುವ ಟೆಂಟರ್​ಗಳ ಮೇಲೆ ನಿಗಾ ಇಟ್ಟಿದ್ದರು. ಇಲಾಖೆಯಲ್ಲಿ ಕೋಟಿ ಕೋಟಿ ಹಣ ರಿಲೀಸ್ ಆಗುತ್ತಿತ್ತು. ಅದೆಲ್ಲವನ್ನೂ ಸಿಎಂ ಬಿಎಸ್​ವೈ ಪರವಾಗಿ ಇವರು ನೋಡಿಕೊಳ್ತಿದ್ದರು ಎನ್ನಲಾಗಿದೆ. ಬಿಎಸ್​ವೈ ಜೊತೆ ಗುರುತಿಸಿಕೊಳ್ಳುವ ಮೊದಲು ಇವರು ಬಿಎಂಟಿಸಿ ಬಸ್​ ಡ್ರೈವರ್, ಕಂಡಕ್ಟರ್​ ಆಗಿಯೂ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *