ಬಿಎಸ್​ವೈ ವಿರುದ್ಧ ಪಿತೂರಿ ನಡೀತಿದೆ.. ಅನ್ಯಾಯವಾದ್ರೆ ಹೋರಾಟ- ಮಠಾಧಿಪತಿಗಳ ಎಚ್ಚರಿಕೆ

ಬಿಎಸ್​ವೈ ವಿರುದ್ಧ ಪಿತೂರಿ ನಡೀತಿದೆ.. ಅನ್ಯಾಯವಾದ್ರೆ ಹೋರಾಟ- ಮಠಾಧಿಪತಿಗಳ ಎಚ್ಚರಿಕೆ

ತುಮಕೂರು: ಸಿಎಂ ಯಡಿಯೂರಪ್ಪರ ಬೆಂಬಲಕ್ಕೆ ವೀರಶೈವ-ಲಿಂಗಾಯತ ಮಠದ ಸ್ವಾಮೀಜಿಗಳು ನಿಂತಿದ್ದಾರೆ.

ಸಿಎಂ ಬದಲಾವಣೆ ‌ವಿಚಾರಕ್ಕೆ ಸಂಬಂಧಿಸಿದಂತೆ ತಿಪಟೂರಿನ ಷಡಕ್ಷರ ಮಠದಲ್ಲಿ ವೀರಶೈವ-ಲಿಂಗಾಯತರ ಮಠಾಧಿಪತಿಗಳ ವೇದಿಕೆ ಸುದ್ದಿಗೋಷ್ಟಿ ನಡೆಸಿತು. ಮಠಾಧಿಪತಿಗಳ ವೇದಿಕೆಯ ಅಧ್ಯಕ್ಷ ರುದ್ರಮುನಿ ಸ್ವಾಮೀಜಿ ಸೇರಿದಂತೆ 10ಕ್ಕೂ ಹೆಚ್ಚು ಮಠಾಧಿಪತಿಗಳು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಬಿಎಸ್​​ವೈಗೆ ಮಾನಸಿಕ ಹಿಂಸೆ ಕೊಡಲಾಗ್ತಿದೆ
ಈ ವೇಳೆ ಮಾತನಾಡಿದ ಮಠಾಧಿಪತಿಗಳು.. ಯಡಿಯೂರಪ್ಪರನ್ನ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೀತಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ, ನಡೆಯಲು, ಉಸಿರಾಡಲು ಆಗುತ್ತಿಲ್ಲ ಎಂದು ಅಪಪ್ರಚಾರ ಮಾಡ್ತಿದ್ದಾರೆ. ತಮಿಳುನಾಡಿನಲ್ಲಿ ಕರುಣಾನಿಧಿ ಗಾಲಿ ಕುರ್ಚಿ ಮೇಲೆ ಆಡಳಿತ ಮಾಡಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಯಡಿಯೂರಪ್ಪಗೆ ಅಷ್ಟೊಂದು ವಯಸ್ಸಾಗಿದೆಯೇ? ಅವರು ಅಧಿಕಾರ ಪೂರ್ಣಗೊಳಿಸುವವರೆಗೂ ಯಾರೂ ಅಡ್ಡಿ ಮಾಡಬಾರದು. ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು. ಅವರನ್ನೇ ತುಳಿಯಲಾಗುತ್ತಿದೆ. ಮೂಲೆಗುಂಪು ಮಾಡಲು ಪಿತೂರಿ ನಡೀತಿದೆ. ಯಡಿಯೂರಪ್ಪಗೆ ಮಾನಸಿಕ ಹಿಂಸೆ ಕೊಡಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ನಾಯಕನಿಗೆ ಅನ್ಯಾಯವಾದರೆ ನಾವೂ ಹೋರಾಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಬಿಎಸ್​ವೈ ನೋಡಿ ಮತ ಹಾಕಿದ್ದಾರೆ
ಯಡಿಯೂರಪ್ಪರನ್ನು ನೋಡಿ ವೀರಶೈವ-ಲಿಂಗಾಯತ ಸಮುದಾಯ ಬಿಜೆಪಿಗೆ ಮತ ಹಾಕಿದೆ. ಹಾಗಾಗಿ 100ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದಾರೆ ಎಂದು ವೀರಶೈವ-ಲಿಂಗಾಯತ ಮಠಾಧಿಪತಿಗಳ ವೇದಿಕೆ ಹೇಳಿದೆ. ಇನ್ನು ಸುದ್ದಿಗೋಷ್ಟಿಯಲ್ಲಿ ಜಂಗಮ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿಗಳು, ಬೆಳ್ಳಾವಿ ಕಾರದ ವೀರಬಸವ ಮಹಾಸ್ವಾಮಿಗಳು, ವಿರಕ್ತಮಠದ ಶಶಿಶೇಖರ ಬಸವ ಮಹಾಸ್ವಾಮಿಗಳು, ಕುಣಿಗಲ್ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು, ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮೀಜಿಗಳು ಹಾಜರಿದ್ದರು.

The post ಬಿಎಸ್​ವೈ ವಿರುದ್ಧ ಪಿತೂರಿ ನಡೀತಿದೆ.. ಅನ್ಯಾಯವಾದ್ರೆ ಹೋರಾಟ- ಮಠಾಧಿಪತಿಗಳ ಎಚ್ಚರಿಕೆ appeared first on News First Kannada.

Source: newsfirstlive.com

Source link