ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಕುರಿತ ಚರ್ಚೆ ಜೋರಾಗುತ್ತಿದಂತೆ ಸಿಎಂ ಅಧಿಕೃತ ನಿವಾಸಕ್ಕೆ ರಾಜ್ಯ ವಿವಿಧ ಸ್ವಾಮೀಜಿಗಳು ಆಗಮಿಸಿ ಚರ್ಚೆ ನಡೆಸಿದ್ದಾರೆ. ತುಮಕೂರು ಸಿದ್ಧಗಂಗಾ ಶ್ರೀಗಳು ಕೂಡ ಇಂದು ಸಿಎಂ ನಿವಾಸಕ್ಕೆ ಆಗಮಿಸಿದ್ದರು.

ಬಿಎಸ್​​ವೈ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧಗಂಗಾ ಶ್ರೀಗಳು, ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆವು. ಕಳೆದು ಒಂದು ವಾರದಿಂದ ಸಿಎಂ ಬದಲಾವಣೆ ಬಗ್ಗೆ ಸುದ್ದಿ ಬರುತ್ತಿದೆ. ಆದರೆ ಯಡಿಯೂರಪ್ಪ ಸಮರ್ಥವಾಗಿ ಕೆಲಸ ಮಾಡ್ತಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡುವ ಅವರನ್ನು ಯಾಕೆ ಬದಲಾವಣೆ ಮಾಡ್ತಾರೆ. ಅವರು ಆಡಳಿತ ಪೂರ್ಣಗೊಳಿಸಬೇಕು ಎಂದು ನಾವೆಲ್ಲರೂ ಬಂದಿದ್ದೇವೆ.

ನಮ್ಮ ಭೇಟಿ ವೇಳೆ ಯಡಿಯೂರಪ್ಪ ಅವರು ರಾಜೀನಾಮೆ ಬಗ್ಗೆ ಏನನ್ನೂ ಹೇಳಿಲ್ಲ.. ನಾವೆಲ್ಲರೂ ಹೇಳುವುದು ಇಷ್ಟೇ. ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕು. ಈಗ ಸಂದಿಗ್ಧ ಪರಿಸ್ಥಿತಿ ಇದೆ.. ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡೋದು ಸರಿಯಲ್ಲ. ನಾವು ಯಾರೂ ರಾಜಕಾರಣಿಗಳ ಜೊತೆ ಓಡಾಡ್ತಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು ಎಂಬುದು ನಮ್ಮ ಅಪೇಕ್ಷೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಇಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಆಗುವ ತೀರ್ಮಾನವೇ ಸಿಎಂ ನಿರ್ಧಾರ ಆಗೋದು ಎಂದು ಸ್ಪಷ್ಟಪಡಿಸಿದರು.

ಇಂದು ಸಿಎಂ ಬಿಎಸ್​​ವೈ ಅವರ ನಿವಾಸಕ್ಕೆ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದ 30 ಸ್ವಾಮೀಜಿಗಳ ನಿಯೋಗ, ನಿಡುಮಾಮಿಡಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದ ಪುರಿ ಮಹಾಸ್ವಾಮಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಭೇಟಿ ಮಾಡಿ ಚರ್ಚೆ ಮಾಡಿದ್ದರು.

The post ಬಿಎಸ್​​ವೈ ಪೂರ್ಣಾವಧಿ ಸಿಎಂ ಆಗಲಿ ಎಂಬುದೇ ನಮ್ಮ ಇಚ್ಛೆ- ಸಿದ್ದಗಂಗಾ ಶ್ರೀ appeared first on News First Kannada.

Source: newsfirstlive.com

Source link