ಅರವತ್ತಾದ್ರೂ ಕೆಲವರಿಗೆ ಆಸೆ ಮಾತ್ರ ಹದಿನಾರೇ ಆಗಿರುತ್ತೆ ಅಂತಾರೆ. ಬಹುಶಃ ಇದಕ್ಕೆ 13500 ಕೋಟಿ ರೂಪಾಯಿ ಹಗರಣದ ರುವಾರಿ ಮೆಹುಲ್ ಚೋಸ್ಕಿ ಕೂಡ ಹೊರತಲ್ಲ. ಆತನ ಬಂಧನದ ಹಿಂದೆ ಸುಂದರ ಯುವತಿಯೊಬ್ಬಳ ನೆರಳಿದ್ದು.. ಮೆಹುಲ್ ಎಸ್ಕೇಪ್​ ಸ್ಟೋರಿಗೆ ರೋಚಕ ತಿರುವು ನೀಡಿದೆ.

ನೀಳ ಕಾಲುಗಳು.. ಸಣ್ಣನೆ ನಡು.. ಬೆಳ್ಮುಗಿಲಿನಿಂಥ ನಗು.. ನೋಡಿದ್ರೆ ನೋಡುತ್ತಲೇ ಇರಬೇಕು ಅನ್ನೋವಂಥ ಸೌಂದರ್ಯ. ಸೌಂದರ್ಯ ರಾಶಿಯೇ ಬಿಕಿನಿ ತೊಟ್ಟು ಕಡಲ ತಡಿಯಲ್ಲಿ ಬರ್ತಿರೋದನ್ನ ನೋಡಿ ಮೇಹುಲ್ ಚೋಕ್ಸಿ ಕ್ಲೀನ್ ಬೌಲ್ಡ್ ಆಗಿದ್ದ.

ಇದು ಪಕ್ಕಾ ಟೆಕ್ಸ್ಟ್​ ಬುಕ್ ಸ್ಪೈ ಸ್ಟೋರಿಯಂತೆ.. ಪಕ್ಕಾ ಬೇಸಿಕ್ ಟ್ರ್ಯಾಪಿಂಗ್ ವ್ಯವಸ್ಥೆ. ಇದು ಸಿಂಗಲ್ ರೋಡ್.. ಒಂದು ಬಾರಿ ಇಲ್ಲಿ ಬಂದು ಸಿಲುಕಿಕೊಂಡು ಬಿಟ್ಟರೆ ತಪ್ಪಿಸಿಕೊಳ್ಳೋ ಮಾತಿರಲಿ.. ಮರಳಿ ತನ್ನ ಗೂಡನ್ನೇ ಸೇರೋದು ಕಷ್ಟ. ಇಂಥದ್ದೇ ಒಂದು ಪಕ್ಕಾ ಟ್ರಾಪ್​ಗೆ 13,500 ಕೋಟಿ ರೂಪಾಯಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಸಿಕ್ಕಿ ಬಿದ್ದನಾ? ಅನ್ನೋದು ಸದ್ಯ ಅತ್ಯಂತ ಕುತೂಹಲ ಕೆರಳಿಸಿರೋ ಸಂಗತಿ.

ಯಾವುದೋ ಅಥವಾ ಯಾರೋ ಕಾಲ್ಪನಿಕವಾಗಿ ಹೆಣಿದಿರೋ ಕಥೆಯಲ್ಲ ಇದು. ಬದಲಿಗೆ ಕಾಲ್ಪನಿಕ ಕಥೆಯಂತೆಯೇ ಭಾವನೆ ಹುಟ್ಟಿಸುವಂಥ ಬಹುಕೋಟಿ ಹಗರಣದ ಆರೋಪಿ ಟ್ರಾಪ್ ಆದ ಕಹಾನಿ. Money ಗಂತೂ ಕೊರತೆ ಇಲ್ಲದಿರೋ ಚೋಕ್ಸಿ ಎಂಬಾತ ಹನಿಗಾಗಿ ಹಂಬಲಿಸಿ ಸಿಲುಕಿಕೊಂಡನಾ? ಅನ್ನೋ ಟರ್ನಿಂಗ್ ಪಾಯಿಂಟ್ ಇದು.

ಇದಕ್ಕೆಲ್ಲ ಕಾರಣವಾಗಿದ್ದೇ ಆ ಯುವತಿ..!

ಹೌದು.. ಮೊನ್ನೆ ಸ್ಥಳೀಯ ರೇಡಿಯೋ ಒಂದಕ್ಕೆ ಮಾತನಾಡುತ್ತಿದ್ದ ಆ್ಯಂಟಿಗುವಾ ಪ್ರಧಾನಿ ಗಾಸ್ಟನ್ ಬ್ರೌನಿ, ನನಗೆ ಬಂದಿರೋ ಮಾಹಿತಿ ಪ್ರಕಾರ ಮೆಹುಲ್ ಚೋಕ್ಸಿ, ತನ್ನ ಗರ್ಲ್​ಫ್ರೆಂಡ್​ ಜೊತೆ ಉತ್ತಮ ಸಮಯ ಕಳೆಯಲು, ರಾತ್ರಿ ಊಟ ಮಾಡಲು ಹೋಗಿದ್ದನಂತೆ. ಆತನಿಗೆ ಈಗ ನಮ್ಮ ದೇಶದ ಯಾವುದೇ ಕಾನೂನು ಅನ್ವಯ ಆಗಲ್ಲ.. ಆತ ಅಕ್ರಮವಾಗಿ ಡೊಮಿನಿಕಾಗೆ ಹೋಗಿದ್ದಾನೆ.. ಅಲ್ಲಿಯ ಕಾನೂನಿನಂತೆ ಅವನನ್ನು ಗಡಿಪಾರು ಮಾಡಬಹುದಾಗಿದೆ ಅಂತಾ ಹೇಳಿಕೆಯೊಂದನ್ನ ನೀಡಿದ್ರು.. ಅದರ ಬೆನ್ನಲ್ಲೇ.. ಆ ಯುವತಿ ಯಾರು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು.

ಜೊತೆಗೆ ಮೆಹುಲ್ ಚೋಕ್ಸಿ ಬಂದಿದ್ದ ಯಾಚ್​ನ ಒಡೆತನ ಹೊಂದಿರೋ ಸಂಸ್ಥೆ ಮಾತ್ರ, ಯಾಚ್​​ನಲ್ಲಿ ಮೆಹುಲ್ ಚೋಕ್ಸಿ ಇದ್ದನೋ ಇಲ್ಲವೋ ಹೇಳುವುದು ಕಷ್ಟ. ಆದ್ರೆ, ಅದ್ರಲ್ಲಿ ಒಬ್ಬ ಭಾರತೀಯ ಹಾಗೂ ಮತ್ತೊಬ್ಬ ಭಾರತ ಮೂಲದ ಬ್ರಿಟನ್ ನಾಗರಿಕರು ಇದ್ದರು ಅಂತಾ ಹೇಳಿದ್ದು.. ಈ ಕಥೆಗೆ ಮತ್ತಷ್ಟು ಬಿಗ್ ಟ್ವಿಸ್ಟ್ ಕೊಟ್ಟಿತ್ತು.

ಮೆಹುಲ್ ಚೋಕ್ಸಿ ಆ್ಯಂಟಿಗುವಾದಿಂದ ಇದ್ದಕ್ಕಿದ್ದಂತೆ ಮಿಸ್ ಆಗಿದ್ದಾನೆ ಎಂದಾಗಲೇ.. ಈ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು. ಒಂದು ಕಡೆ ಯಾಚ್​ ಸಂಸ್ಥೆ ಹೇಳ್ತಿರೋದು ಮತ್ತು ಇನ್ನೊಂದು ಕಡೆ ಆ್ಯಂಟಿಗುವಾ ಪ್ರಧಾನಿ ಹೇಳಿದ್ದು. ಜೊತೆಗೆ ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ಫೋಟೋಗಳು ಆಕೆಯೆಡೆಗೇ ಬೊಟ್ಟು ಮಾಡುತ್ತಿವೆ..

ಹೌದು. ಸರಿ ಸುಮಾರು 28ರ ಆಸುಪಾಸಿನ ಯುವತಿ ಆಕೆ.. ಅತ್ಯಂತ ಟೋನ್ಡ್​ ದೇಹ.. ಬಿಕಿನಿ ತೊಡಲು ಹೇಳಿ ಮಾಡಿಸಿದಂತಿರುವ ಅಂಗಸೌಷ್ಠವ.. ಆಕೆಯ ಜಾಲಕ್ಕೆ ಸಿಕ್ಕನಾ ಮೆಹುಲ್ ಚೋಕ್ಸಿ? ಸದ್ಯ ಇಡೀ ಕೆರೆಬಿಯನ್ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿಬಿಟ್ಟಿದ್ದಾಳೆ ಆಕೆ. ಆ ಮಾಧ್ಯಮಗಳೇ ಆಕೆಯದ್ದು ಎನ್ನಲಾದ ಹಲವು ಫೋಟೋಗಳನ್ನೂ ಬಿಡುಗಡೆ ಮಾಡಿವೆ. ಅಲ್ಲದೇ ಹನಿ ಟ್ರಾಪ್​​ ಸಂಗತಿ ಮತ್ತೆ ಮುಂಚೂಣಿಗೆ ಬಂದಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ 60 ವರ್ಷದ ಮಾಜಿ ಸಚಿವರೊಬ್ಬರ ಸಿಡಿ ಕೇಸ್ ಗಮನಿಸಿದವರಿಗೆ, 62 ವರ್ಷದ ಮೆಹುಲ್ ಚೋಕ್ಸಿ ಚೆಂದುಳ್ಳಿ ಚೆಲುವೆಯೊಬ್ಬಳ ಜಾಲದಲ್ಲಿ ಸಿಲುಕಿದ್ದ ಅಂತಾ ಹೇಳಿದ್ರೆ ಹೊಸತು ಅಂತೇನು ಅನಿಸೋದಿಲ್ಲ.. ಯಾಕಂದ್ರೆ ಮುಪ್ಪಾದ ಹುಣಸೆಯ ಹುಳಿಯೇನು ಕಡಿಮೆ ಆಗಿರೋದಿಲ್ಲ ಅಲ್ವಾ?!

ಹೌದು.. ಆ್ಯಂಟಿಗುವಾದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾದ, ಬಹುಕೋಟೆ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿಳಿದಾಗ ಆತನ ಜೊತೆ ಓರ್ವ ಮಹಿಳೆ ಇದ್ದಳು ಎಂಬುದು ಈಗ ಬಹುತೇಕ ಸಿದ್ಧವಾಗಿದೆ. ಸದ್ಯ ಚೋಕ್ಸಿ ಬಂಧಿತನಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ, ಆ ಯುವತಿ ಮಾತ್ರ ನಾಪತ್ತೆಯಾಗಿದ್ದಾಳೆ ಎನ್ನಲಾಗ್ತಿದೆ. ಇನ್​ ಫ್ಯಾಕ್ಟ್ ಆ ಯುವತಿಯೇ ಮೆಹುಲ್ ಬಂಧನಕ್ಕೆ ಕಾರಣವಾದಳು ಅನ್ನೋ ಮಾತುಗಳು ಕೇಳಿ ಬರ್ತಿವೆ.

ಆ ಮಹಿಳೆ ಬಗ್ಗೆ ಮತ್ತೊಂದು ಬಿಗ್ ಟ್ವಿಸ್ಟ್
ಆಕೆ ಇಂಗ್ಲೆಂಡ್​ನವಳಾ? ಅಥವಾ ಸ್ಥಳೀಯಳಾ?

ಒಂದು ಕಡೆ ನೋಡಿದ್ರೆ ಆ ಯುವತಿ ಭಾರತೀಯ ಮೂಲದ ಇಂಗ್ಲೆಂಡ್ ನಿವಾಸಿ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ ಇನ್ನೊಂದೆಡೆ ನೋಡಿದ್ರೆ, ಮೆಹುಲ್ ಪರ ವಕೀಲರು ಆಕೆ ಆ್ಯಂಟಿಗುವಾದವಳೇ ಅಂತಾ ಹೇಳ್ತಿದ್ದಾರೆ..

ಅಷ್ಟಕ್ಕೂ ಆಗಿದ್ದಾದ್ರೂ ಏನು?

ಮೆಹುಲ್ ಪರ ವಕೀಲರು ಹೇಳೋ ಪ್ರಕಾರ.. ಆ ಯುವತಿ ಬೇರೆ ಯಾವುದೋ ದೇಶದವಳಲ್ಲ. ಬದಲಿಗೆ ಆ್ಯಂಟಿಗುವಾದ ನಿವಾಸಿಯೇ ಅಂತೆ. ಕಡಲ ತಡಿಯಲ್ಲಿ ಮೆಹುಲ್ ವಾಕ್ ಮಾಡ್ತಿರೋವಾಗ.. ಆತನ ಗಮನ ತನ್ನತ್ತ ಬರುವಂತೆ ಮಾಡಿದ ಈ ಯುವತಿ, ಆತನೊಂದಿಗೆ ಸಲುಗೆ ಬೆಳೆಸಿಕೊಂಡಳಂತೆ. ಹಣದ ಮದವೋ.. ತಾನು ಮನ್ಮಥ ಅನ್ನೋ ಆತ್ಮ ರತಿಯೋ.. ಒಟ್ಟಿನಲ್ಲಿ ಆ ಯುವತಿಯ ಮಧುರಾ ಪಿಸು ಮಾತಿಗೆ.. ಅದರ ತುಸು ಪ್ರೀತಿಗೆ.. ಇರುವಲ್ಲಿಯು ಇರಲಾರದೆ.. ಬರುವಲ್ಲಿಯು ಬರಲಾರದೆ.. ಸೋತೆ ನಾನು ನಿನ್ನ ಪ್ರೀತಿಗೆ ಅಂತಾ ಮರುಳಾಗಿಬಿಟ್ಟಿದ್ದನಂತೆ. ಅಷ್ಟೇ ಅಲ್ಲ, ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ.. ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ.. ನಿನ್ನದೇ ಪರಿಮಳ ನಿನ್ನಯ ನೆನಪಿಗೆ.. ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ ಅಂತಾ ಪರಿತಪಿಸುತ್ತಿದ್ದ ಮೆಹುಲ್, ಅಪಾರ್ಟ್​ಮೆಂಟ್ ಒಂದಕ್ಕೆ ಹೋಗಿದ್ದನಂತೆ. ಅದೂ ಸುಮ್ಮನೇ ಅಲ್ಲ. ಆ ಯುವತಿಯೇ ಆತನನ್ನ ಅಲ್ಲಿಗೆ ಕರೆದಿದ್ದಳಂತೆ.

ಹೀಗಾಗಿ ಮೆಹುಲ್ ಕೂಡ ಆ ಯುವತಿ ಹೇಳಿದ ಅಪಾರ್ಟ್​ಮೆಂಟ್​ಗೆ ಹೋಗಿದ್ದ ಹನಿ ಆಸೆ ಇಟ್ಟುಕೊಂಡು ಹೋಗಿದ್ದ ಮೆಹುಲ್​ಗೆ ಆಗಲೇ ತಾನು ಟ್ರಾಪ್​ ಆಗಿರೋದು ಗೊತ್ತಾಗಿದ್ದಂತೆ. ಯಾಕಂದ್ರೆ, ಆ ಅಪಾರ್ಟ್​ಮೆಂಟ್​ನಲ್ಲಿ ಆ ಯುವತಿ ಒಬ್ಬಳೇ ಇರಲಿಲ್ಲ. ಬದಲಿಗೆ.. ಆ ಮಹಿಳೆಯ ಜೊತೆಗೆ ಇನ್ನೂ ಹಲವರಿದ್ದರಂತೆ. ಅಲ್ಲಿಂದಲೇ ಚೋಕ್ಸಿಯನ್ನ ಕಿಡ್ನಾಪ್ ಮಾಡಿ ಡೊಮಿನಿಕಾಗೆ ಕರೆದೊಯ್ಯಲಾಯ್ತು ಎಂದೂ ಸದ್ಯ ಮೆಹುಲ್ ಪರ ವಕೀಲರು ಆರೋಪ ಮಾಡ್ತಿದ್ದಾರೆ.

ಒಂದು ವೇಳೆ ಮೇಹುಲ್ ಪರ ವಕೀಲರು ಹೇಳುತ್ತಿರೋದು ನಿಜ ಅಂತಾ ಪರಿಗಣಿಸೋದೇ ಆದ್ರೆ.. ಅಷ್ಟು ಸುಲಭವಾಗಿ ಬಲೆಗೆ ಬೀಳುವಷ್ಟು ಮುಗ್ಧನಾ ಬಹುಕೋಟಿ ಹಗರಣದ ರುವಾರಿ ಮೇಹುಲ್ ಚೋಕ್ಸಿ? ಅಥವಾ ಕಿಡ್ನಾಪ್ ಮಾಡೋದಾದ್ರೆ.. ಅದನ್ನು ಮಾಡಿದ್ದಾದ್ರೂ ಯಾರು?

ಒಂದು ಕಡೆ ಚೋಕ್ಸಿ ಪರ ವಕೀಲರು ಕಿಡ್ನಾಪ್ ಸ್ಟೋರಿ ಹೇಳ್ತಾ ಇದ್ದರೆ, ಇನ್ನೊಂದು ಕಡೆ.. ಆ್ಯಂಟಿಗುವಾದಲ್ಲಿ ತಲೆಮರೆಸಿಕೊಂಡಿದ್ದ ಚೋಕ್ಸಿ ಗಡಿಪಾರಿಗೆ ಎಲ್ಲಾ ಸಿದ್ಧತೆಗಳು ನಡೆದಿದ್ದವಂತೆ. ಇದನ್ನು ಅರಿತಿದ್ದ ಆತ ಡೊಮಿನಿಕಾಗೆ ಪಲಾಯನ ಮಾಡಿ ಅಲ್ಲಿಂದ ಕ್ಯೂಬಾಗೆ ಪರಾರಿಯಾಗಲು ತನ್ನ ಗರ್ಲ್​ಫ್ರೆಂಡ್​ ಜೊತೆ ಪ್ರಯತ್ನಿಸಿದ್ದ. ಆಕೆ ಯಾವುದೇ ಏಜೆಂಟ್ ಅಥವಾ ಕಿಡ್ನಾಪರ್ ಅಲ್ಲ.. ಬದಲಿಗೆ ಚೋಕ್ಸಿ ಗರ್ಲ್​ಫ್ರೆಂಡೇ ಆಗಿದ್ದಳು. ಹೀಗಾಗಿ ಇಲ್ಲಿ ಯಾವುದೇ ಸ್ಪೈ ಕೇಸ್ ಇಲ್ಲ ಅನ್ನೋ ಧ್ವನಿಯೂ ಬಲವಾಗಿಯೇ ಕೇಳಿ ಬಂದಿದೆ. ಆದ್ರೆ ಇದನ್ನು ಆತನ ಕುಟುಂಬಸ್ಥರು ಅಲ್ಲಗಳೆದಿದ್ದಾರೆ.

ಸ್ಥಳೀಯ ಮಾಧ್ಯಮಗಳು ಹೇಳೋದೇನು?

ಇನ್ನು ಚೋಕ್ಸಿ ಪರ ಮತ್ತೊಬ್ಬ ವಕೀಲ ವಿಜಯ್ ಅಗರ್ವಾಲ್ ಮಾತನ್ನು ಆಧರಿಸಿ ಸ್ಥಳೀಯ ಮಾಧ್ಯಮಗಳು ಭಾರತೀಯ ಸ್ಪೈ ಥಿಯರಿಗೆ ಜೀವ ತುಂಬಿವೆ. ಹೌದು, ಚೋಕ್ಸಿ ಜೊತೆ ಇದ್ದವಳು ಆತನ ಸ್ನೇಹಿತೆ ಅಲ್ಲ. ಚೋಕ್ಸಿಯನ್ನ ಭಾರತದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರೋರು ಅಪಹರಣ ಮಾಡಿದ್ದಾರೆ. ಈ ಅಪಹರಣ ಮಾಡಿದವರಲ್ಲಿ ಈಕೆಯೂ ಹೌದು. ಯಾಕಂದ್ರೆ ಚೋಕ್ಸಿ ಬಳಿ ಡೊಮಿನಿಕಾಗೆ ಪ್ರಯಾಣ ಮಾಡಲು ಪಾಸ್​ಪೋರ್ಟ್​ ಇದೆ. ಆ ಪಾಸ್​​ಪೋರ್ಟ್​ ಅಂಟಿಗುವಾದ ಮನೆಯಲ್ಲೇ ಇದೆ. ಇದರಿಂದ ಗೊತ್ತಾಗುತ್ತೆ ಇದೊಂದು ವ್ಯವಸ್ಥಿತ ಸಂಚು ಅಂತಾರೆ ಅಗರ್ವಾಲ್.

ಮೇ 23 ರಂದೇ ಅಪಹರಣ

ಅಲ್ಲದೇ ಚೋಕ್ಸಿ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ. ವಿದ್ಯುತ್ ಶಾಕ್ ಕೂಡ ನೀಡಲಾಗಿದೆ. ವೈರಲ್​ ಆಗಿರುವ ಫೋಟೋದಲ್ಲಿ ಅವರ ಕಣ್ಣುಗಳು ಊದಿಕೊಂಡಿವೆ ಎಂದು ವಕೀಲರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಕೆಲ ದಿನಗಳ ಹಿಂದೆ ಚೋಕ್ಸಿ ಆಂಟಿಗುವಾದಿಂದ ಕಾಣೆಯಾಗಿದ್ದರು. ಈ ಬಗ್ಗೆ ಟ್ರೇಸ್​ ಮಾಡುತ್ತಿರುವ ಹೊತ್ತಿನಲ್ಲೇ ಅವರು ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮೇ 23 ರಂದು ಅವರನ್ನ ಅಪಹರಿಸಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಸದ್ಯಕ್ಕಂತೂ ಹನಿ ಟ್ರಾಪ್​ ಸ್ಟೋರಿ ಸಾಕಷ್ಟು ರೆಕ್ಕೆ-ಪುಕ್ಕ ಪಡೆದುಕೊಂಡರೂ.. ಇದ್ರಲ್ಲಿ ಮೆಹುಲ್​ನ ಸಂಚನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾಗಿ, ಆತ ಎಸ್ಕೇಪ್ ಆಗಲು ಅಕ್ರಮವಾಗಿ ಬಂದನಾ? ಹನಿಟ್ರಾಪ್​ಗೆ ಒಳಗಾದನಾ? ಆಕೆ ನಿಜಕ್ಕೂ ಅವನ ಗರ್ಲ್​ಫ್ರೆಂಡೇನಾ? ಅನ್ನೋ ಪ್ರಶ್ನೆಗಳು ಈ ಕೇಸ್​ಗೆ ರೋಚಕ ಟ್ವಿಸ್ಟ್​ಗಳನ್ನು ನೀಡುತ್ತಿರೋದಂತೂ ಸುಳ್ಳಲ್ಲ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಬಿಕಿನಿ ಸುಂದರಿಗೆ ಕ್ಲೀನ್ ಬೌಲ್ಡ್ ಆದ ಚೋಕ್ಸಿ; 62ರ ಹರೆಯದ ಚಪಲ ತಂದಿಟ್ಟ ಟ್ರ್ಯಾಪ್ appeared first on News First Kannada.

Source: newsfirstlive.com

Source link