ಬಿಜೆಪಿಗೆ ಎದುರಾದ ಬಿಬಿಎಂಪಿ ಎಲೆಕ್ಷನ್​​​ ಟೆನ್ಶನ್​​​.. ಚುನಾವಣೆ ನಡೆದ್ರೆ ಬಿಜೆಪಿಗೇನು ಆತಂಕ?

ಬೆಂಗಳೂರು: ವಿಧಾನಸಭೆ ಮಿನಿ ಸಮರ ಮುಗಿದೋಯ್ತು. ಈಗ ರಾಜ್ಯದಲ್ಲಿ ಪರಿಷತ್ ಉಪಸಮರ ಶುರುವಾಗಿದೆ. ಇದು ಮುಗಿಯುತ್ತಿದ್ದಂತೆ ಬಿಬಿಎಂಪಿ ಚುನಾವಣೆ. ಆದ್ರೀಗ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮಳೆರಾಯ ವಿಘ್ನ ತಂದಿದ್ದಾನೆ. ಅಲ್ಲದೇ ಬಿಜೆಪಿಗೆ ಟೆನ್ಶನ್ ತಂದಿಟ್ಟಿದ್ದಾನೆ.

ಮಳೆಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿರೋ ಅವಾಂತರಗಳು ಅಷ್ಟಿಷ್ಟಲ್ಲ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅದೆಷ್ಟೋ ಜನರು ಸೂರುಗಳನ್ನ ಕಳೆದುಕೊಂಡಿದ್ದಾರೆ. ಇದೀಗ ಮಳೆ ನಿಂತ್ರು ಅದರಿಂದಾದ ಸಮಸ್ಯೆಗಳು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಅಲ್ಲದೇ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಸಂಕಟ ತರೋದು ಪಕ್ಕ ಎನ್ನುವಂತಾಗಿದೆ.

ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಿದ್ರೆ ಕಂಟಕ!
ಬೆಂಗಳೂರು ಮಹಾನಗರ ಪಾಲಿಕೆಗೆ ತಕ್ಷಣವೇ ಚುನಾವಣೆ ನಡೆದ್ರೆ ಬಿಜೆಪಿಗೆ ಕಂಟಕವಾಗುವ ಸಾಧ್ಯತೆ ಇದೆ. ಯಾಕಂದ್ರೆ ನಗರದಲ್ಲಿ ಮಳೆರಾಯ ಜನರನ್ನ ಕಷ್ಟದ ಕೂಪಕ್ಕೆ ತಳ್ಳಿಬಿಟ್ಟಿದ್ದಾನೆ. ಅಲ್ಲದೇ ಅಕಾಲಿಕ ಮಳೆಯಿಂದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ಹೀಗಾಗಿ ಮೊದಲೇ ಆಘಾತದಲ್ಲಿರೋ ಜನರ ಬಳಿ ಧಾವಿಸಿದ್ರೆ ಆಡಳಿತ ಪಕ್ಷ ಬಿಜೆಪಿಗೆ ಜನರು ತರಾಟೆ ತಗೊಳ್ಳೋದಂತೂ ಪಕ್ಕ. ಹೀಗಾಗಿ ಕೇಸರಿ ಪಡೆ ಕೊಂಚ ಆತಂಕದಲ್ಲಿದೆ.

ಬಿಜೆಪಿಗೆ ಬಿಬಿಎಂಪಿ ಭೀತಿ..!

  • ಜಲಗಂಡ 1 : ಬೆಂಗಳೂರು ನಗರವನ್ನು ಬಿಟ್ಟು ಬಿಡದೇ ಕಾಡ್ತಿರುವ ಮಳೆ
  • ಜಲಗಂಡ 2 : ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಕಟ್ಟಡ ಕುಸಿತ
  • ಜಲಗಂಡ 3 : ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ಗುಂಡಿ ಕಿರಿಕಿರಿ
  • ಜಲಗಂಡ 4 : ಬೆಂಗಳೂರಿನ ಹಲವು‌ ಅಪಾರ್ಟ್‌ಮೆಂಟ್ ಜನರ ಗೋಳು
  • ಜಲಗಂಡ 5 : ರಾಜಕಾಲುವೆ ಒತ್ತುವರಿಯಿಂದ ಮತ್ತಷ್ಟು ಅವಘಡಗಳು
  • ಜಲಗಂಡ 6 : ರಸ್ತೆ ಗುಂಡಿ ಮುಚ್ಚಿದ್ರೆ,‌ ಮಳೆಗೆ ಅದೆಲ್ಲ ಬಾಯಿ ತೆರೆಯುತ್ತವೆ
  • ಜಲಗಂಡ 7 : ಮುಚ್ಚದಿದ್ದರೇ, ನಗರದ ಹಲವೆಡೆ ಅಪಘಾತ ಸಂಭವಿಸ್ತಿವೆ
  • ಜಲಗಂಡ 8 : ಮಳೆ ನೀರು ಹೋಗಲು ರಾಜಕಾಲುವೆ ದುರಸ್ತಿ ಆಗಬೇಕು
  • ಜಲಗಂಡ 9 : ಒತ್ತುವರಿ ತೆರವು ಮಾಡಿದ್ರೆ, ಪ್ರದೇಶಗಳು ಜಲಾವೃತ ಭೀತಿ
  • ಜಲಗಂಡ 10 : ರಾಜಕಾಲುವೆ ಒತ್ತುವರಿ ತೆರವು ಮಾಡಿದರೆ ಜನರ ಶಾಪ.. ಹೀಗೆ ಸಾಲು ಸಾಲು ಸಂಕಟದಲ್ಲಿ ಬಿಜೆಪಿ ಸಿಲುಕಿಕೊಂಡಿದೆ.

ಒಟ್ಟಾರೆ, ಏನೇ ಅನಾಹುತಗಳು ಸಂಭವಿಸಿದ್ರೂ ಅದಕ್ಕೆ ಆಡಳಿತ ಪಕ್ಷವೇ ನೇರವಾಗಿ ಹೊಣೆಯಾಗಿರುತ್ತೆ. ಹೀಗಾಗಿ ಮಳೆಯಿಂದ ಒದಗಿಬಂದಿರೋ ಸಂಕಷ್ಟಗಳನ್ನ ನಿವಾರಿಸಿದ್ರೆ ಜನರಿಗೂ ಒಳ್ಳೇದು. ಚುನಾವಣೆ ಅಂತಾ ಮತ ಕೇಳೋಕೆ ಹೋಗೋ ರಾಜಕಾರಣಿಗಳಿಗೂ ಒಳ್ಳೇದು.

ವಿಶೇಷ ವರದಿ: ಮಧುಸೂದನ್, ನ್ಯೂಸ್‌ಫಸ್ಟ್‌, ಬೆಂಗಳೂರು

News First Live Kannada

Leave a comment

Your email address will not be published. Required fields are marked *