ಪಂಚರಾಜ್ಯ ಮಹಾ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ದೇಶದ ಗಮನವನ್ನೇ ತನ್ನತ್ತ ಸೆಳೆದಿರೋ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್, ಗೋವಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡ್ತಾ ಮತದಾರರನ್ನು ಸೆಳೆಯೋ ತಂತ್ರ ರೂಪಿಸ್ತಿವೆ. ಆದರೆ ಮೊನ್ನೆಯಷ್ಟೇ ಉತ್ತರ ಪ್ರದೇಶದ ಟಿಕೆಟ್ ಹಂಚಿಕೆ ವಿಚಾರವಾಗಿ ಬಂಡಾಯದ ಬಿಸಿ ಎದುರಿಸಿದ್ದ ಬಿಜೆಪಿಗೆ ಗೋವಾದಲ್ಲೂ ರೆಬೆಲ್ ನಾಯಕರು ಬಿಸಿತುಪ್ಪವಾಗಿಬಿಟ್ಟಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಉತ್ಪಾಲ್ ಕಣಕ್ಕೆ
ಇತ್ತೀಚೆಗಷ್ಟೇ ಉತ್ತರಪ್ರದೇಶದ ಹಲವು ಬಿಜೆಪಿ ಶಾಸಕರು, ಹಾಲಿ ಸಚಿವರು ಪಕ್ಷಕ್ಕೆ ಗುಡ್ಬೈ ಹೇಳಿ ಎಸ್ಪಿಗೆ ಸೇರ್ಪಡೆಯಾಗಿದ್ದರು. ಇದೀಗ ಮೊನ್ನೆಯಷ್ಟೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾದ ಗೋವಾದಲ್ಲೂ ಬಿಜೆಪಿ ನಾಯಕರು ರೆಬೆಲ್ ಆಗಿ ಪಕ್ಷ ತೊರೆಯುತ್ತಿದ್ದಾರೆ. ಪಣಜಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್ಗೆ ನಿರಾಸೆ ಕಾದಿತ್ತು. ಇದರ ಬೆನ್ನಲ್ಲೇ ನಿನ್ನೆ ದಿಢೀರ್ ನಿರ್ಧಾರ ತೆಗೆದುಕೊಂಡ ಉತ್ಪಾಲ್ ಪರಿಕ್ಕರ್ ಬಿಜೆಪಿ ರಾಜೀನಾಮೆ ಕೊಟ್ಟಿದ್ದಾರೆ.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಪಣಜಿ ಕ್ಷೇತ್ರದಿಂದ ಸ್ಪರ್ಧಿಸ್ತೇನೆ ಅಂತಾ ಈ ಮೂಲಕ ಘೋಷಿಸುತ್ತಿದ್ದೇನೆ. ಅಧಿಕೃತವಾಗಿ ನನ್ನ ರಾಜೀನಾಮೆಯನ್ನು ನೀಡಿದ್ದೇನೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ.
ಉತ್ಪಾಲ್ ಪರಿಕ್ಕರ್, ದಿ. ಮನೋಹರ್ ಪರಿಕ್ಕರ್ ಪುತ್ರ
ಬಿಜೆಪಿಗೆ ರಾಜೀನಾಮೆ ಕೊಟ್ಟು ಸುಮ್ಮನಾಗದ ಉತ್ಪಾಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದಲೇ ಪಕ್ಷೇತರನಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಸೆಡ್ಡು ಹೊಡೆದು ತಂದೆ ಮನೋಹರ್ ಪರಿಕ್ಕರ್ 25 ವರ್ಷಗಳ ಕಾಲ ಪ್ರತಿನಿಧಿಸ್ತಿದ್ದ ಕ್ಷೇತ್ರದಲ್ಲೇ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆಲ ಕಾರಣಗಳಿಂದಾಗಿ ನನಗೆ ಪಣಜಿ ಕ್ಷೇತ್ರದ ಟಿಕೆಟ್ ಸಿಗಲಿಲ್ಲ. ಎರಡು ವರ್ಷಗಳ ಹಿಂದೆ ಅವಕಾಶವಾದಿಯಾಗಿ ಪಕ್ಷಕ್ಕೆ ಬಂದಿದ್ದವರಿಗೆ ಟಿಕೆಟ್ ಕೊಡಲಾಗಿದೆ. ಹೀಗಾಗಿ ಬೇರೆ ಆಯ್ಕೆಗಳಿಲ್ಲದೆ ನಾನು ನನ್ನ ತಂದೆ ನಂಬಿಕೊಂಡಿದ್ದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. ನನ್ನ ರಾಜಕೀಯ ಭವಿಷ್ಯವನ್ನು ಪಣಜಿ ಜನತೆ ನಿರ್ಧರಿಸಲಿದ್ದಾರೆ ಎಂದು ಉತ್ಪಾಲ್ ಪರಿಕ್ಕರ್ ಹೇಳಿದ್ದಾರೆ.
ಗೋವಾದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಭಿನ್ನಮತ ಮತ್ತಷ್ಟು ತಾರಕಕ್ಕೇರಿದೆ. ಟಿಕೆಟ್ ಕೊಟ್ಟಿಲ್ಲ ಅಂತಾ ಒಬ್ಬರು ಹಾಲಿ ಸಚಿವರು ಸೇರಿದಂತೆ ನಾಲ್ವರು ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಗೋವಾದ ಲೋಕೋಪಯೋಗಿ ಇಲಾಖೆ ಸಚಿವ ದೀಪಕ್ ಪೌಸ್ಕರ್, ಡೆಪ್ಯುಟಿ ಸ್ಪೀಕರ್ ಇಸಿಡೋರ್ ಫರ್ನಾಂಡಿಸ್, ಡಿಸಿಎಂ ಚಂದ್ರಕಾಂತ್ ಕವಲೇಕರ್ ಪತ್ನಿ ಸಾವಿತ್ರಿ ಕವಲೇಕರ್ ಸೇರಿದಂತೆ ನಾಲ್ವರು ಪ್ರಮುಖರು ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.
ಫೆಬ್ರವರಿ 14ರಂದು ಗೋವಾದ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ಕ್ಕೆ ಭವಿಷ್ಯ ನಿರ್ಧಾರವಾಗಲಿದೆ. ಒಟ್ನಲ್ಲಿ ಗೋವಾದಲ್ಲಿ ಅಧಿಕಾರದಲ್ಲಿರೋ ಬಿಜೆಪಿಗೆ ಮೊದಲ ಹಂತದಲ್ಲೇ ಭಿನ್ನಮತದ ಬಿಸಿ ಎದುರಾಗಿದೆ. ಗೋವಾ ಬಿಜೆಪಿಯಲ್ಲಿ ಎದ್ದಿರೋ ಭಿನ್ನಮತವನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತೆ ಅನ್ನೋದನ್ನು ಕಾದು ನೋಡ್ಬೇಕು.