ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬುದು ಎಲ್ಲರ ಅಭಿಪ್ರಾಯ. ಇದು ಆತ್ಮಹತ್ಯೆಯೋ, ಹತ್ಯೆಯೋ ಎಂಬ ಅನುಮಾನ ಶುರು ಆಗಿದೆ. ಸಂತೋಷ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಸಂತೋಷ್‌ರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಾರಿದ್ದಾರೆಂಬುದು ಹೊರಗೆ ಬರಬೇಕು. ಇದರ ಹಿಂದೆ ಡಿಕೆಶಿ ಇದ್ದಾರಾ ಎಂಬುದು ಬಯಲಾಗಬೇಕಿದೆ. ಆ ನಂತರ ನಾನು ಡಿ.ಕೆ. ಶಿವಕುಮಾರ್ ಬಗ್ಗೆ ಮಾತಾಡುತ್ತೇನೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಮನಃಸಾಕ್ಷಿ ಇದ್ದಿದ್ದರೆ ನನ್ನನ್ನು ಬಂಧಿಸುವಂತೆ ಒತ್ತಡ ಹಾಕ್ತಿರಲಿಲ್ಲ ಎಂದು ಈಶ್ವರಪ್ಪ, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ನಾನು ನಿರ್ದೋಷಿಯಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ. ಅವರವರ ಮನೆ ದೇವರನ್ನು ನಂಬದಿದ್ದರೂ ಚಿಂತೆಯಿಲ್ಲ. ಕನಿಷ್ಠ ಮನಃಸಾಕ್ಷಿಯನ್ನಾದರೂ ಒಮ್ಮೆ ಕೇಳಿಕೊಳ್ಳಲಿ. ನನ್ನ ಬಂಧನ ಬಗ್ಗೆ ಕೇಳುವವರು ಮನಃಸಾಕ್ಷಿಯನ್ನ ಕೇಳಿಕೊಳ್ಳಲಿ. ಈ ಹಿಂದೆ ಕೆ.ಜೆ. ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಈಗ ನನ್ನ ಬಂಧನಕ್ಕೆ ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಕೆಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮನೆಗೆ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ. ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಸಂತೋಷ್ ಆತ್ಮಹತ್ಯೆ ಕೇಸ್‌ನಲ್ಲಿ ಈಶ್ವರಪ್ಪ ರಾಜೀನಾಮೆ ಹಿನ್ನೆಲೆ ಈಶ್ವರಪ್ಪಗೆ ಸ್ವಾಮೀಜಿಗಳು ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗಬೇಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಸಂತೋಷ್ ಪ್ರಕರಣದ ಬಗ್ಗೆ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ನೀಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿರುವೆ. ಎರಡು ದಿನ ಮೊದಲೇ ರಾಜೀನಾಮೆಯನ್ನ ನೀಡಲು ತೆರಳುತ್ತಿದ್ದೆ. ರಾಜೀನಾಮೆ ನೀಡಲು ಮೈಸೂರಿನಿಂದ ಬೆಂಗಳೂರಿಗೆ ಹೋಗ್ತಿದ್ದೆ. ಆತುರಬೇಡವೆಂಬ ಸೂಚನೆ ಹಿನ್ನೆಲೆ ರಾಜೀನಾಮೆಗೆ ತಡ ಮಾಡಿದ್ದೆ ಎಂದು ಕಾಗಿನೆಲೆ ಶ್ರೀ ಸೇರಿದಂತೆ ವಿವಿಧ ಶ್ರೀಗಳಿಗೆ ಕೆ.ಎಸ್. ಈಶ್ವರಪ್ಪ ವಿವರಣೆ ಕೊಟ್ಟಿದ್ದಾರೆ.