ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರೆಂಟ್ ಜಾರಿ | Arrest warrant issued against ex Uttar Pradesh minister Swami Prasad Maurya in 7 year old case day After Resigning BJP


ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರೆಂಟ್ ಜಾರಿ

ಎಸ್​ಪಿ ಸೇರಿದ ಬಿಜೆಪಿ ಮಾಜಿ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಒಂದರ ಹಿಂದೊಂದು ಶಾಕ್ ಎದುರಾಗುತ್ತಿದ್ದು, ನಿನ್ನೆಯಷ್ಟೇ ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಕೆಲವು ಬಿಜೆಪಿ ಶಾಸಕರು ಕೂಡ ರಾಜೀನಾಮೆ ನೀಡಿದ್ದರು. ಇಂದು ಉತ್ತರ ಪ್ರದೇಶ ಸರ್ಕಾರದ ಮತ್ತೋರ್ವ ಸಚಿವ ದಾರಾ ಸಿಂಗ್ ಚೌಹಾಣ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಮಂಗಳವಾರ ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.

ಬಿಜೆಪಿ ತೊರೆದ ಒಂದೇ ದಿನದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಸುಲ್ತಾನ್​ಪುರ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. 2014ರ ಪ್ರಕರಣಕ್ಕೆ ಸಂಬಂಧಿಸಿ ಈ ವಾರೆಂಟ್ ಜಾರಿ ಮಾಡಲಾಗಿದೆ. 7 ವರ್ಷಗಳ ಹಿಂದೆ ಸ್ವಾಮಿ ಪ್ರಸಾದ್ ಮೌರ್ಯ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಕ್ಕಾಗಿ ಈ ವಾರೆಂಟ್ ನೀಡಲಾಗಿದೆ. ಜನವರಿ 24ರಂದು ವಿಶೇಷ ಸಂಸದ-ಶಾಸಕ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.

2014ರಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಕ್ಷದಲ್ಲಿದ್ದಾಗ ಕೋಮು ಭಾವನೆಗಳನ್ನು ಕೆರಳಿಸಿದ್ದರು ಎಂದು ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಜನವರಿ 24ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ವಾರೆಂಟ್ ಜಾರಿ ಮಾಡಲಾಗಿದೆ. ಸ್ವಾಮಿ ಪ್ರಸಾದ್ ಮೌರ್ಯ ಅವರು 2014ರಲ್ಲಿ ಮಾಡಿದ ಧಾರ್ಮಿಕ ಟೀಕೆಗಳಿಗೆ ಸಂಬಂಧಿಸಿದಂತೆ ಹಾಜರಾಗಬೇಕಾಗಿತ್ತು. ಅವರ ವಿರುದ್ಧದ ಜಾಮೀನು ರಹಿತ ವಾರಂಟ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದು ಜನವರಿ 6 ರವರೆಗೆ ಮಾನ್ಯವಾಗಿದೆ. ಅವರು ಇಂದು ಹಾಜರಾಗಬೇಕಾಗಿತ್ತು ಆದರೆ ಬರಲಿಲ್ಲ. ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ, ಮುಂದಿನ ವಿಚಾರಣೆ ಜನವರಿ 24 ರಂದು ನಡೆಯಲಿದೆ ಎಂದು ವಕೀಲ ಅನಿಲ್ ತಿವಾರಿ ಹೇಳಿದ್ದಾರೆ.

ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ದಲಿತರು, ರೈತರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಮತ್ತು ನಿರುದ್ಯೋಗಿ ಯುವಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದರು. ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳ ನಂತರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ, ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದರು.

“ಸ್ವಾಮಿ ಪ್ರಸಾದ್ ಮೌರ್ಯ ಯಾವಾಗಲೂ ನ್ಯಾಯ ಪರ ನಿಂತಿದ್ದಾರೆ ಮತ್ತು ಜನಸಾಮಾನ್ಯರಲ್ಲಿ ಚಿರಪರಿಚಿತರಾಗಿದ್ದಾರೆ. ನಾನು ಅವರನ್ನು ಮತ್ತು ಇತರ ಎಲ್ಲ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸಮಾಜವಾದಿ ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದು ಯಾದವ್ ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *