ಬಿಜೆಪಿಗೆ ವರವಾಗುತ್ತಾ ಮತಾಂತರ ನಿಷೇಧ ಕಾಯ್ದೆ? ಕಾಂಗ್ರೆಸ್​​ನ​ ಆರೋಪವೇನು? ಅಷ್ಟಕ್ಕೂ ಅದರಲ್ಲಿ ಅಡಕವಾಗಿರುವ ಅಂಶಗಳೇನು? | Karnataka anti conversion law highlights


ರಾಜ್ಯದಲ್ಲಿ ಧರ್ಮದ ವಿಚಾರ ಮುನ್ನೆಲೆಗೆ ಬರುವುದಕ್ಕೆ ಕಾರಣ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ೨೦೨೧’.

ಬಿಜೆಪಿ ಪಕ್ಷ ಧರ್ಮೋ ರಕ್ಷತಿ ರಕ್ಷಿತಃ- ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ನಂಬಿರುವ ಸಮಾಜದ ಕಲ್ಪನೆಯನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ ನಮ್ಮದು ಹೌದಾದರೂ ವಿವಿಧತೆಗೆ ಭಂಗ ತರುವವರನ್ನು ಮಟ್ಟ ಹಾಕುವ ಕೆಲಸವನ್ನೂ ಆಯಾಯ ಕಾಲಕ್ಕೆ ಮಾಡಿಕೊಂಡೇ ಬರುವ ಅನಿವಾರ್ಯತೆ ಬಗ್ಗೆಯೂ ಬಿಜೆಪಿ ಪದೇ ಪದೇ ಹೇಳುತ್ತಿರುತ್ತದೆ.‌

ಮತ್ತೆ ನಮ್ಮ ರಾಜ್ಯದಲ್ಲಿ ಧರ್ಮದ ವಿಚಾರ ಮುನ್ನೆಲೆಗೆ ಬರುವುದಕ್ಕೆ ಕಾರಣ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ೨೦೨೧’.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದ ವೇಳೆ ತರಾತುರಿಯಲ್ಲಿ ಸರ್ಕಾರ ಆಡುಭಾಷೆಯಲ್ಲಿ ಕರೆಯಲ್ಪಡುತ್ತಿರುವ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿತ್ತು. ಆಗಲೇ ವಿರೋಧ ಪಕ್ಷಗಳು ವಿಧೇಯಕ ವಿರೋಧಿಸಿ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಬಿಜೆಪಿಗೆ ಸಂಖ್ಯಾ ಬಲದ ಕೊರತೆಯಿಂದಾಗಿ ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ‌ನಲ್ಲಿ ಮಸೂದೆ ಅಂಗೀಕಾರ ಆಗಿರಲಿಲ್ಲ. ಆದರೆ ಈಗ ಮತ್ತೆ ಮಸೂದೆಯನ್ನು ಸರ್ಕಾರ ಮೇಲ್ಮನೆಯಲ್ಲೂ ಪಾಸ್ ಮಾಡಿಕೊಂಡಿದ್ದು ಕಾಯ್ದೆ ರೂಪವನ್ನು ಪಡೆದುಕೊಂಡಿದೆ.

ಇನ್ಮುಂದೆ ರಾಜ್ಯದಲ್ಲಿ ಬೇಕಾಬಿಟ್ಟಿ ಮತಾಂತರ ಮಾಡುವ ಹಾಗಿಲ್ಲ. ಊರಿಗೇ ಊರೇ, ತಾಂಡಕ್ಕೆ ತಾಂಡ, ಗ್ರಾಮಕ್ಕೆ ಗ್ರಾಮವನ್ನೇ ಧಾರ್ಮಿಕ ಗ್ರಂಥ- ಕೈಯ್ಯಲ್ಲೊಂದಿಷ್ಟು ಕಾಸು ಹಿಡಿದುಕೊಂಡು ಮತಾಂತರಕ್ಕೆ ನಿಲ್ಲುವ ಹಾಗಿಲ್ಲ. ಬೆಂಗಳೂರಿಗೆ ಮತಾಂತರದ ಗಂಭೀರತೆ ಅರ್ಥವಾಗದೇ ಇರಬಹುದು, ಆದರೆ ಬೆಂಗಳೂರು ಬಿಟ್ಟು ಹೊರ ನಡೆದರೆ ಹಳ್ಳಿ ಭಾಗದಲ್ಲಿ ಮತಾಂತರ ಹಾಸು ಹೊಕ್ಕಾಗುತ್ತಿರುವುದು ಇತ್ತೀಚಿಗೆ ವ್ಯಾಪಕವಾಗಿಬಿಟ್ಟಿತ್ತು.

ಮತಾಂತರ ಮಾಡುವವನು ಬಿಳಿಬಟ್ಟೆಯ ನಗುಮುಖದ ಅಮಾಯಕ ಪ್ರಭುವಿನಂತೆ ಕಾಣುತ್ತಿದ್ದ. ಮತಾಂತರಕ್ಕೆ ಒಳಗಾಗುವವನ ಮನಸ್ಸಲ್ಲಿ ತನ್ನ ಧರ್ಮದ ಬಗ್ಗೆ ದ್ವೇಷ, ಅಪನಂಬಿಕೆ, ಹತಾಶೆ ಮೂಡುವಂತ ಮಾತುಗಳು ಸರಾಗವಾಗಿ ಮತಾಂತರಕ್ಕೆ ದೂಡುತ್ತಿತ್ತು. ಅದರಲ್ಲೂ ಹಿಂದುಳಿದ ವರ್ಗದವರು ಅಂತಾದರೆ ಮುಗಿದೇ ಹೋಯಿತು. ತಾನು ಹುಟ್ಟಿದ ಧರ್ಮದ ಅಸ್ಮಿತೆ ಬಗ್ಗೆ ಯಾವ ನಂಬಿಕೆಯನ್ನೂ ಪ್ರೀತಿಯನ್ನೂ ಮತಾಂತರಿಗಳು ಉಳಿಸುತ್ತಿರಲಿಲ್ಲ.

ಮೇಲ್ನೋಟಕ್ಕೆ ಮತಾಂತರ ಧಾರ್ಮಿಕ ಸ್ವಾತಂತ್ರ್ಯದ ಭಾಗ ಅಂತ ಅನಿಸಿದರೂ ಮತಾಂತರ ಸುದೀರ್ಘ ಕಾಲಕ್ಕೆ ಮಾಡುವ ಅವಾಂತರ ಬಹುಶಃ ಯಾರೂ ಊಹಿಸಲು ಸಾಧ್ಯವೇ ಇಲ್ಲ ಅಂತ ಬಿಜೆಪಿ ವಾದಿಸುತ್ತದೆ‌.‌ ಇಡೀ ತಾಂಡಕ್ಕೆ ತಾಂಡವೇ ನಿಗದಿತ ಧರ್ಮಕ್ಕೆ ಮತಾಂತರಗೊಂಡರೆ ಅದರಿಂದಾಗುವ ಪರಿಣಾಮಗಳು ಒಂದೆರಡಲ್ಲ. ಆಸೆ, ಆಮಿಷ, ಉಡುಗೊರೆಗಳ ಬಣ್ಣ, ಮನಸೂರೆಗೊಳ್ಳುವ ಅದೇ ಬಣ್ಣದ ಮಾತುಗಳ ಮತಾಂತರ ಸರ್ವ ಧರ್ಮ ಸಂರಕ್ಷಕ ಭಾರತಕ್ಕೆ ಒಳ್ಳೆಯದಲ್ಲ ಅನ್ನುವುದು ಆಡಳಿತ ನಡೆಸುತ್ತಿರುವವರ ಅಭಿಪ್ರಾಯ.‌

ಇದನ್ನು ಮನಗಂಡೇ ಸಿಎಂ ಬೊಮ್ಮಾಯಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ದಿಟ್ಟತನ ಬದ್ದತೆಯ‌ನ್ನು ತೋರಿಸಿದ್ದಾರೆ ಅನ್ನುವ ಶಹಬ್ಬಾಷ್ ಗಿರಿ ಸಂಘ ಪರಿವಾರದಿಂದ ಸಿಎಂಗೆ ಸಿಕ್ಕಿದೆ. ಈ ಕಾಯ್ದೆ ಜಾರಿಗೆ ತಂದ ಮೊದಲ ರಾಜ್ಯವೇನೂ ನಾವಲ್ಲ, ಈಗಾಗಲೇ ಎಂಟು ರಾಜ್ಯಗಳಲ್ಲಿ ಕಾಯ್ದೆ ಜಾರಿಯಲ್ಲಿದೆ. ಉತ್ತರ ಪ್ರದೇಶದಂತ ರಾಜ್ಯಗಳಿಗೆ ಕಾಯ್ದೆ ಅತಿ ಜರೂರು ಕೂಡ ಆಗಿತ್ತು. ಇದು ನಮ್ಮಲ್ಲೂ ಜಾರಿಗೆ ಬರುತ್ತೆ ಎಂದಾಕ್ಷಣ ಕೆಲವೊಂದು ವರ್ಗ ವಿಲವಿಲ ಒದ್ದಾಡಿದೆ. ಆದರೆ ವಾಸ್ತವಿಕ ಸಂಗತಿಗಳನ್ನು ವಿಧೇಯಕದಲ್ಲಿ ಇರುವ ಅಂಶಗಳನ್ನು ಸ್ಪಷ್ಟವಾಗಿ ನೋಡುವುದು ಒಳ್ಳೆಯದು..

ಅಷ್ಟಕ್ಕೂ ಈ ಹೊಸ ಕಾಯ್ದೆಯಲ್ಲಿ ಏನೆಲ್ಲಾ ಅಂಶಗಳಿವೆ?

1. ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.‌

2. ವ್ಯಕ್ತಿಯು ಆತನ ನಿಕಟಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ.

3. ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳೂ ಮತಾಂತರದ ಬಗ್ಗೆ ದೂರು ನೀಡಬಹುದಾಗಿದೆ.

4. ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ‌ ವಸೂಲಾತಿಗೆ ಅವಕಾಶವಿದೆ.

5. ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್‌ಸಿ, ಎಸ್ಟಿ ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ. ಜೊತೆಗೆ 50 ಸಾವಿರ ದಂಡ.

6. ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

7. ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿ.

8. ಮತಾಂತರದ ಉದ್ದೇಶದಿಂದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅಧಿಕಾರ.

9. ಮತಾಂತರ ಅಪರಾಧ ಜಾಮೀನು ರಹಿತ ಅಪರಾಧ

10. ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.

11. ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.

12. ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಬೇಕು.

13. ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಜಿಲ್ಲಾ ದಂಡಾಧಿಕಾರಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.

14. ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ‌ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.

15. ಮತಾಂತರಗೊಂಡ ವ್ಯಕ್ತಿ ತನ್ನ ಗುರುತನ್ನು ಸ್ಥಾಪಿಸಲು ಮತ್ತು ಘೋಷಣೆ ಅಂಶಗಳನ್ನು ಸ್ವೀಕರಿಸಲು ಘೋಷಣೆಯನ್ನು ಕಳುಹಿಸಿರುವ/ಸಲ್ಲಿಸಿರುವ ದಿನಾಂಕದಿಂದ 20 ದಿನದೊಳಗೆ ಜಿಲ್ಲಾ ದಂಡಾಧಿಕಾರಿ ಮುಂದೆ ಹಾಜರಾಗಬೇಕು.

16. ಬಲವಂತದ ಮತಾಂತರ ಅಲ್ಲ ಎಂಬುದನ್ನು ರುಜುವಾತು ಮಾಡುವ ಹೊಣೆ ಮತಾಂತರ ಮಾಡಿದ ವ್ಯಕ್ತಿ, ಮತಾಂತರಕ್ಕೆ ನೆರವು ನೀಡಿದ ವ್ಯಕ್ತಿ ಮೇಲಿರಲಿದೆ

17. ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

ಇಷ್ಟೆಲ್ಲ ಅಂಶಗಳನ್ನು ಹೊಂದಿರುವ ಮತಾಂತರ ನಿಷೇಧ ಕಾಯ್ದೆಯ ಹಿನ್ನೆಲೆಯಲ್ಲಿ ಸರ್ಕಾರ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗಿರುವುದು ಕೂಡ ಸತ್ಯ. ವಿಧೇಯಕವನ್ನು ವಿರೋಧಿಸಿದ್ದ ಕಾಂಗ್ರೆಸ್ ಕಾಯ್ದೆಯಲ್ಲಿ ಇರುವ ಲೋಪ ದೋಷಗಳನ್ನು ಎತ್ತಿ ಹಿಡಿದಿದೆ.

ಬೇರೆ ರಾಜ್ಯಗಳಲ್ಲಿ ಇರುವ ಕಾಯ್ದೆಯನ್ನೇ ಯಾವುದೇ ಅಧ್ಯಯನ ಮಾಡದೆಯೇ ಯಥಾವತ್ ಜಾರಿಗೆ ತರಲಾಗಿದೆ ಅಂತ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಆಸೆ ಆಮಿಷಗಳಿಂದ ಮತಾಂತರ ಆಗಿರುವುದು ಬಹಳ ಕಡಿಮೆ, ಮತಾಂತರ ಆಗಿದ್ದರೆ ಅದು ಜಾತಿ ವ್ಯವಸ್ಥೆ, ಅಸ್ಪ್ರಶ್ಯತೆ, ಸಾಮಾಜಿಕ ಆರ್ಥಿಕ ಅಸಮಾನತೆಗಳಿಂದ ಆಗುತ್ತಿದೆ, ಯಾವ ಧರ್ಮವನ್ನು ಪಾಲನೆ ಮಾಡಬೇಕು ಅನ್ನೋದು ಆಯಾಯ ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯ ಅದಕ್ಕೆ ಸರ್ಕಾರ‌ ಮೊಟಕು ಮಾಡಬಾರದು ಅನ್ನೋದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ.

ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯಲ್ಲಿ ಮತಾಂತರಗೊಳ್ಳುತ್ತಿರುವ ವ್ಯಕ್ತಿ ತಾನು ಬಲವಂತದ ಮತಾಂತರ ಆಗುತ್ತಿಲ್ಲ ಅಂತ ದಾಖಲೆಗಳನ್ನು ಒದಗಿಸಬೇಕು. ದೂರುದಾರನಲ್ಲ, ತಪ್ಪಿತಸ್ಥ ಅಂತ ಕರೆಯಲ್ಪಡುವವನೇ ದಾಖಲೆಗಳನ್ನು ಒದಗಿಸಬೇಕು ಎನ್ನೋದು ಯಾವ ನ್ಯಾಯ ಅಂತ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಒಂದು ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಹಾದಿ ಬೀದಿಯಲ್ಲಿ ಹೋಗುವವನ ಅನುಮತಿ ಯಾಕೆ ಅಂತಲೂ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಸರ್ಕಾರದ ಕೈಯ್ಯಲ್ಲಿ ಕಳೆದ‌ ಹತ್ತಾರು ವರ್ಷಗಳಿಂದ ಮತಾಂತರಗೊಂಡವರ ಸಂಖ್ಯೆ ಎಷ್ಟು ಎಂಬ ಅಂಕಿ ಅಂಶ ಇಲ್ಲ. ಮತಾಂತರಗೊಂಡವರ ಮತಾಂತರ ಮಾಡುತ್ತಿರುವವರ ಬಗ್ಗೆ ದಾಖಲೆ ಸ್ಪಷ್ಟವಾಗಿಲ್ಲ. ಹಾಗಿದ್ದೂ ಕೂಡ ಮತಾಂತರ ಆಗುತ್ತಿದೆ ಎಂಬುದಕ್ಕೆ ಪುರಾವೆ ಇಲ್ಲದೆಯೇ ಕೇವಲ ಭಾವನಾತ್ಮಕ ಅಂಶಗಳನ್ನು ಮಾತ್ರ ಸರ್ಕಾರ ಮುಂದಿಡುತ್ತಿದೆ ಎಂಬ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇದಕ್ಕೆ ಸರಕಾರ ದಾಖಲೆಗಳನ್ನು ಒದಗಿಸದೇ ಹೋದರೆ ಅನುಮಾನಗಳು ಮೂಡುವುದು ಸಹಜ.‌

ಪ್ರಸನ್ನ ಗಾಂವ್ಕರ್, ಟಿವಿ9, ಬೆಂಗಳೂರು

ತಾಜಾ ಸುದ್ದಿ

TV9 Kannada


Leave a Reply

Your email address will not be published.