– ಸಂದೇಶ ಬಂದ್ಮೇಲೆ ಹೋಗು ಅಂದರೆ ಹೋಗ್ತೇನೆ

ಬೆಂಗಳೂರು: ರಾಜ್ಯದಲ್ಲಿ ರಾಜಾಹುಲಿಯ ಮಹಾಪರ್ವ ಅಂತ್ಯವಾಗಲಿದೆ. ಯಡಿಯೂರಪ್ಪರ ಮಹಾನಿರ್ಗಮನಕ್ಕೆ ಇನ್ನು 3 ದಿನವಷ್ಟೇ ಬಾಕಿ ಉಳಿದಿದೆ. ಪದತ್ಯಾಗಕ್ಕೆ ಬಿಎಸ್‍ವೈ ಕೂಡ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಇದರ ನಡುವೆ ಜುಲೈ 6ರಂದು ಬಿಎಸ್‍ವೈಯ ಮಹಾಭಾಷಣದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇನ್ನು ಮೂರು ದಿನಕ್ಕೆ 2 ವರ್ಷ. ಅಷ್ಟರೊಳಗೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ವಿಪ್ಲವ ಘಟಿಸುತ್ತಿದೆ. ಯಡಿಯೂರಪ್ಪ 4 ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ರೂ 5 ವರ್ಷ ಪೂರ್ಣಗೊಳಿಸಕ್ಕಾಗದೇ ಮತ್ತೆ ಪದತ್ಯಾಗ ಮಾಡುತ್ತಿದ್ದಾರೆ. ಈ ಬಾರಿ ರಾಜಾಹುಲಿಯ ಮಹಾನಿರ್ಗಮನಕ್ಕೆ ವೇದಿಕೆ ಸಿದ್ಧಗೊಂಡಿದೆ.

ಜುಲೈ 26.. ಯಡಿಯೂರಪ್ಪ 4ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಎರಡು ವರ್ಷ. ಅಂದೇ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಿದ್ದಾರೆ. ಇನ್ನು ಮೂರು ದಿನದಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡುವುದು ನಿಶ್ಚಿತವಾಗಿದೆ. ಮಹಾ ನಿರ್ಗಮನದ ಬಗ್ಗೆ ಸ್ವತಃ ಯಡಿಯೂರಪ್ಪನರವೇ ಸುಳಿವು ನೀಡಿದ್ದಾರೆ. ರಾಜೀನಾಮೆ ಬಗ್ಗೆ 2 ತಿಂಗಳಿಂದ ಎಲ್ಲೆಡೆ ಸುದ್ದಿ ಹಬ್ಬಿದ್ದರೂ, ಎಲ್ಲೂ ಗುಟ್ಟು ಬಿಟ್ಟು ಕೊಡದೇ ಓಡಾಡುತ್ತಿದ್ದ ಸಿಎಂ ಯಡಿಯೂರಪ್ಪ ಮಾಧ್ಯಮದ ಮುಂದೆ ಮಾತಾಗಿದ್ದಾರೆ. ಮಾತ್ರವಲ್ಲ ಸಮಚಿತ್ತದಲ್ಲೇ, ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧಗೊಂಡಂತೆ ಉತ್ತರ ನೀಡಿದ್ರು. ವಾರದ ಬಳಿಕ ಮಾಧ್ಯಮಗಳ ಜೊತೆ ಮುಖಾಮುಖಿಯಾದರೂ ಯಡಿಯೂರಪ್ಪ ಅವ್ರಲ್ಲಿ ಯಾವುದೇ ದುಗುಡ ಕಾಣಲಿಲ್ಲ. ನೋವು ಕೂಡ ಕಾಣಲಿಲ್ಲ.

ಜುಲೈ 25ಕ್ಕೆ ಹೈಕಮಾಂಡ್‍ನಿಂದ ಸಂದೇಶ ಬರುತ್ತೆ.. ಅದರಂತೆಯೇ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಕೆಲಸ ಮೆಚ್ಚಿ ವರಿಷ್ಠರು 75 ಆದ ಬಳಿಕ 78 ರವರೆಗೂ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟಿದಾರೆ ಎಂದರು. ಇದನ್ನೂ ಓದಿ: ದಿವ್ಯಾ ಉರುಡುಗರನ್ನು ಬಿಗಿದಪ್ಪಿದ ಅರವಿಂದ್- ಒಂದಾದ ಪ್ರಣಯ ಪಕ್ಷಿಗಳು

ವಿಧಾನಸೌಧದಲ್ಲಿ ಮಾತನಾಡಿ, 2 ತಿಂಗಳ ಹಿಂದೆಯೇ ರಾಜೀನಾಮೆಗೆ ಸಿದ್ಧನಾಗಿದ್ದೆ. ಈಗ ಹೈಕಮಾಂಡ್ ಬೇಡ ಹೋಗು ಅಂತ ಹೇಳಿದ ದಿನವೇ ಹೋಗ್ತೇನೆ. 26ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮದ ಬಳಿಕ ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ ಅಂದ್ರು. ಈ ಹಿಂದೆ ರಾಜೀನಾಮೆ ಬಗ್ಗೆ ಮಾತನಾಡಿದ್ದ ಬಿಎಸ್‍ವೈ, ಬಿಜೆಪಿಯಲ್ಲಿ ಪರ್ಯಾಯ ನಾಯಕರಿಗೇನು ಕೊರತೆ ಇಲ್ಲ ಅಂದಿದ್ದರು. ಆದರೆ ಈಗ ಪರ್ಯಾಯ ನಾಯಕ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸಲ್ಲ ಅಂತಾ ಹೇಳಿದ್ರು. ಹೈಕಮಾಂಡ್ ನಾಯಕರು ತಮ್ಮನ್ನು ನಡೆಸಿಕೊಂಡ ರೀತಿಗೆ ಧನ್ಯವಾದ ಅಂದ್ರು.

ಅಭಿಮಾನಿಗಳು ಪ್ರತಿಭಟನೆ ಮಾಡಬಾರದು, ಸ್ವಾಮೀಜಿಗಳು ಪರಿಸ್ಥಿತಿ ಅರಿತು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡ್ರು. ಕಳೆದ ಮೂರು ದಿನಗಳಿಂದ ಯಡಿಯೂರಪ್ಪಗೆ ವ್ಯಕ್ತವಾಗ್ತಿರುವ ಮಠ ಬೆಂಬಲವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ, ಸಂದೇಶ ಕಳಿಸಿತ್ತು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದು ಮಾತ್ರವಲ್ಲದೇ ಸಿಎಂ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇತ್ತ ಇದೇ ಮೊದಲ ಬಾರಿ ಹೈಕಮಾಂಡ್ ಕೂಡ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದೆ. ಈ ಹಿಂದೆ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಾಗ ಅಂಥಾದ್ದೇನು ಇಲ್ಲವೇ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಳ್ಳಿ ಹಾಕ್ತಿದ್ರು. ಆದರೆ ನಿನ್ನೆ ಅರುಣ್ ಸಿಂಗ್ ಮಾತಿನ ವರಸೆ ಬದಲಾಗಿತ್ತು. ಬಿಎಸ್‍ವೈ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ರು.

ಬಿಎಸ್‍ವೈ ಪುತ್ರ, ಸಂಸದ ಬಿವೈ ರಾಘವೇಂದ್ರ ಸಹ, ಸಿಎಂ ರಾಜೀನಾಮೆಯ ಸುಳಿವು ನೀಡಿದ್ರು. ಪಕ್ಷ ಎಲ್ಲವನ್ನು ಕೊಟ್ಟಿದೆ. ಪಕ್ಷದ ಆದೇಶಕ್ಕೆ ತಲೆ ಬಾಗುವುದು ನಮ್ಮ ಕರ್ತವ್ಯ ಅಂದಿದ್ದಾರೆ. ಜೊತೆಗೆ ಅವರಿಗೆ ಎಲ್ಲವೂ ಹೋರಾಟವೇ ಎನ್ನುವ ಮೂಲಕ ನೆಮ್ಮದಿಯಿಂದ ಅಧಿಕಾರ ನಡೆಸಲು ಅವ್ರನ್ನು ಬಿಡಲಿಲ್ಲ ಎಂಬ ನೋವನ್ನು ರಾಘವೇಂದ್ರ ಹೊರಹಾಕಿದ್ರು. ಒಟ್ಟಿನಲ್ಲಿ ಎಲ್ಲಾ ನಿರ್ಧಾರ ಆಗಿ ಹೋಗಿದೆ.. ಇದಾಗಲೇ ಸಿಎಂ ಹೇಳಿದಂತೆ ಇನ್ನೇನಿದ್ರೂ ಅದೊಂದು ಸಂದೇಶಕ್ಕೆ ಬಿಎಸ್‍ವೈ ಕಾಯ್ತಿದ್ದಾರೆ. ಜುಲೈ 25ಕ್ಕೆ ಹೈಕಮಾಂಡ್‍ನಿಂದ ಆ ಸಂದೇಶ ಬಿಎಸ್‍ವೈಗೆ ರವಾನೆ ಆಗಲಿದೆ. ಮರುದಿನ 2 ವರ್ಷ ಪೂರೈಸಿದ ಹಿನ್ನೆಲೆ ಸಮಾರಂಭ ನಡೆಯಲಿದೆ. ಅಂದೇ ರಾಜಾಹುಲಿ ಮಹಾಭಾಷಣ ಮಾಡಿ ನಿರ್ಗಮಿಸಲಿದ್ದಾರೆ.

The post ಬಿಜೆಪಿಯಲ್ಲಿ ವಿಪ್ಲವ, ಬಿಎಸ್‍ವೈ ನಿರ್ಗಮನ- ರಾಜೀನಾಮೆ ಜಪಿಸಿದ ಯಡಿಯೂರಪ್ಪ appeared first on Public TV.

Source: publictv.in

Source link