ಬೆಂಗಳೂರು: ಸಿದ್ದರಾಮಯ್ಯ ಕುಮಾರಸ್ವಾಮಿ ದೇವೇಗೌಡರು ಯಾವ ರೀತಿ ಮಾತಾಡ್ತಾರೆ ಅಂತಾ ಎಲ್ಲರಿಗೂ ಗೊತ್ತು. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ. ಅವರ ಪಕ್ಷದ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆಡಿಯೋ ವಿಚಾರ ಮಾತನಾಡಲು ಹೋದರೆ ನಮ್ಮ ಬಾಯಿ ಹೊಲಸಾಗುತ್ತದೆ. ಆಡಿಯೋಗೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಸಿಎಂ ಬದಲಾವಣೆ ಅವರ ಆಂತರಿಕ ವಿಚಾರ ಏನೋ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಇದು ತನಿಖೆಗೆ ಕೊಡಬೇಕು ಅಂತಾರೆ. ತನಿಖೆಗೆ ಆಫೀಸರ್ ನೇಮಕ ಮಾಡ್ತಾರೆ. ಅವ ಇದನ್ನ ಫೇಕ್ ಅಂತಾನೆ. ಈ ಹಿಂದೆ ಯಡಿಯೂರಪ್ಪಂದು ಏನಾಯ್ತು? ಇತ್ತಿಚಿಗೆ ಆ ಪ್ರಕರಣ ಏನಾಯ್ತು? ನಾವಂತು ಈ ಪ್ರಕರಣದಲ್ಲಿ ಇಲ್ಲ ಎಂದರು.

ಮಿಮಿಕ್ರಿ ಮಾಡಿದ್ದಾರೆ ಎಂಬ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೇನು ಮಿಮಿಕ್ರಿ ಇಟ್ಟುಕೊಂಡಿದ್ದೀವಾ? ಬಿಜೆಪಿ ಕಿತ್ತೊಗೆಯಬೇಕು ಅಂತಾ ಜನ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಎರಡು ದಿನ ಲಂಬಾಣಿ ತಾಂಡಕ್ಕೆ ಹೋಗಿದ್ದೆ. ಆನ್ ಲೈನ್ ಅಂತಾರೆ ಎಲ್ಲಿದೆ? ಒಂದು ಒಂದು ಸರ್ಕಾರದ ಯೋಜನೆ ತೋರಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಡಿಯೂರಪ್ಪ ಬದಲಾವಣೆ ಬಗ್ಗೆ ವರ್ಷದ ಹಿಂದೆಯೇ ಹೇಳಿದ್ದೆ, ಅದು ಈಗ ನಿಜವಾಗ್ತಿದೆ: ಸಿದ್ದರಾಮಯ್ಯ

ದೆಹಲಿ ಪ್ರವಾಸದ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಲ್ಲಾ ಪಿಸಿಸಿ ಅಧ್ಯಕ್ಷ ರ ಜೊತೆ ರಾಹುಲ್ ಚರ್ಚೆ ಮಾಡುತ್ತಿದ್ದಾರೆ. ನಮ್ಮನ್ನು ಕೂಡ ಕರೆದಿದ್ದಾರೆ. ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದೇನೆ. ಪದಾಧಿಕಾರಿಗಳ ನೇಮಕ ಚರ್ಚೆ ಆಗುತ್ತದೆ. ಮುಂದಿನ ವಾರ ಉಸ್ತುವಾರಿ ಐದು ದಿನಗಳ ರಾಜ್ಯ ಪ್ರವಾಸ ಮಾಡ್ತಾರೆ. ಅವರು ಬಂದು ಹೋದ ಬಳಿಕ ಪಟ್ಟಿ ಅಂತಿಮವಾಗುತ್ತದೆ. ನಾನು ಈಗಾಗಲೇ ಪಟ್ಟಿ ನೀಡಿದ್ದೇನೆ ಎಂದರು.

ನರೇಶ್ ಗೌಡ ಯುವ ಕಾಂಗ್ರೆಸ್ ಮುಖಂಡ ಕಾಂಗ್ರೆಸ್ ಜಿಲ್ಲಾ ಪಂಚಾಯತ್ ಟಿಕೆಟ್ ಆಕಾಂಕ್ಷಿ ಎಂದು ಬ್ಯಾನರ್ ಹಾಕಿಕೊಂಡಿದ್ದಕ್ಕೆ ಪ್ರತಿಕ್ರಿಯಿಸದೆ ಡಿಕೆಶಿ ಸುಮ್ಮನೆ ಹೊರಟು ಹೋದರು.

The post ಬಿಜೆಪಿಯವರ ಆಡಿಯೋ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ: ಡಿಕೆಶಿ appeared first on Public TV.

Source: publictv.in

Source link