ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದಕ್ಕೆ ಭಾವುಕರಾದ ಹರಕ್ ಸಿಂಗ್ ರಾವತ್; ಕಾಂಗ್ರೆಸ್​ಗಾಗಿ ದುಡಿಯುತ್ತೇನೆ ಎಂದ ಮಾಜಿ ಸಚಿವ | Uttarakhand Minister Harak Singh Rawat Breaks Down After Being Expelled From BJP and said Will Work For Congress


ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದಕ್ಕೆ ಭಾವುಕರಾದ ಹರಕ್ ಸಿಂಗ್ ರಾವತ್; ಕಾಂಗ್ರೆಸ್​ಗಾಗಿ ದುಡಿಯುತ್ತೇನೆ ಎಂದ ಮಾಜಿ ಸಚಿವ

ಹರಕ್ ಸಿಂಗ್ ರಾವತ್

ನವದೆಹಲಿ: ಉತ್ತರಾಖಂಡ ವಿಧಾನಸಭೆ ಚುನಾವಣೆಗೂ (Uttarakhand Assembly Elections) ಮುನ್ನ ರಾಜ್ಯ ಸಂಪುಟದಿಂದ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಸಚಿವ ಹರಕ್ ಸಿಂಗ್ ರಾವತ್ (Harak Singh Rawat) ಅವರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ತಮ್ಮನ್ನು ಉಚ್ಚಾಟನೆ ಮಾಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹರಕ್ ಸಿಂಗ್ ರಾವತ್ ಅಸಮಾಧಾನ ವ್ಯಕ್ತಪಡಿಸಿ, ಕಣ್ಣೀರು ಹಾಕಿದ್ದಾರೆ. ಇನ್ನು ನಾನು ಕಾಂಗ್ರೆಸ್ ಪರ ಕೆಲಸ ಮಾಡಲಿದ್ದು, ಉತ್ತರಾಖಂಡದಲ್ಲಿ ಕಾಂಗ್ರೆಸ್ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದಿದ್ದಾರೆ.

ಉತ್ತರಾಖಂಡದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ ಎಂದು ಎಚ್‌ಎಸ್ ರಾವತ್ ಹೇಳಿದ್ದಾರೆ. ನಾನು ಇನ್ನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತೇನೆ. ಜನಸಾಮಾನ್ಯರ ಸಮಸ್ಯೆ ಬಿಜೆಪಿಗೆ ಅರ್ಥವಾಗುವುದಿಲ್ಲ. ಆ ಪಕ್ಷ ನನಗೆ ಚೆನ್ನಾಗಿ ಗೊತ್ತು. ಅವರ ವಿಧಾನವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮುಂದೆಯೂ ನಾನು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ರಾವತ್ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಭಾನುವಾರ ಸಂಪುಟದಿಂದ ವಜಾಗೊಳಿಸಿದ್ದಾರೆ.

ಭಾನುವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ಉತ್ತರಾಖಂಡದ ಕೋರ್ ಗ್ರೂಪ್ ಸಭೆಯಲ್ಲಿ ರಾವತ್ ಅವರನ್ನು ಸಂಪುಟದಿಂದ ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ರಾಜ್ಯಾಧ್ಯಕ್ಷ ಮದನ್ ಕೌಶಿಕ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಲ್ಹಾದ್ ಜೋಶಿ, ಚುನಾವಣಾ ಸಹ ಉಸ್ತುವಾರಿ ಆರ್‌ಪಿ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಆ ಸಭೆಗೆ ಆಹ್ವಾನಿತರಾಗಿದ್ದ ಹರಕ್ ಸಿಂಗ್ ರಾವತ್ ಅವರು ಬಿಜೆಪಿ ಕೋರ್ ಗ್ರೂಪ್ ಸಭೆಗೂ ಹಾಜರಾಗಿರಲಿಲ್ಲ. ತನಗೆ ಮತ್ತು ತನ್ನ ಸೊಸೆ ಅನುಕೃತಿ ಗುಸೈಗೆ ಚುನಾವಣಾ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದ ರಾವತ್​ ಬೇಡಿಕೆಗೆ ಬಿಜೆಪಿ ಒಪ್ಪಿರಲಿಲ್ಲ. ಇದಕ್ಕೆ ಪಕ್ಷದ ಮೇಲೆ ರಾವತ್ ಕೋಪಗೊಂಡಿದ್ದರು. ಮೂಲಗಳ ಪ್ರಕಾರ, ಹರಕ್ ಸಿಂಗ್ ತನಗೆ, ತನ್ನ ಸೊಸೆ ಮತ್ತು ತನ್ನ ಬೆಂಬಲಿಗರೊಬ್ಬರಿಗೆ ಸೇರಿದಂತೆ ಮೂರು ಟಿಕೆಟ್ ನೀಡುವಂತೆ ಬಿಜೆಪಿಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು.

ಈ ಹಿಂದೆಯೂ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ಪಕ್ಷದ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಬಾರಿ ಪಕ್ಷ ಅವರ ಬೇಡಿಕೆಗಳಿಗೆ ಮನ್ನಣೆ ನೀಡದೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಹಿಂದಿನ ಡಿಸೆಂಬರ್‌ನಲ್ಲಿ, ಹರಕ್ ಸಿಂಗ್ ರಾವತ್ ಸಂಪುಟದಿಂದ ಹೊರಬಂದರು ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ನಂತರ ಬಿಜೆಪಿ ನಾಯಕರು ನಿಮಗೆ ಯಾವ ಪಕ್ಷ ಬೇಕೋ ಆ ಪಕ್ಷದಲ್ಲಿ ಉಳಿಯುವಂತೆ ಕೇಳಿಕೊಂಡರು.

ಹರಕ್ ಸಿಂಗ್ ರಾವತ್ ಐದು ವರ್ಷಗಳ ಹಿಂದೆ ಕಾಂಗ್ರೆಸ್​ನಿಂದ ಬಂಡಾಯವೆದ್ದು ಬಿಜೆಪಿಗೆ ಬಂದಿದ್ದರು. ಆದರೆ, ರಾವತ್ ಮತ್ತೆ ಕಾಂಗ್ರೆಸ್‌ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅವರು ರಾಜಕೀಯ ಪಕ್ಷಗಳನ್ನು ಬದಲಿಸಿದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 57 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 70 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *