ಬಿಜೆಪಿಯೊಂದಿಗೆ 110 ಪ್ರತಿಶತ ಮೈತ್ರಿ; ರೈತರೂ ನಮ್ಮೊಂದಿಗೆ ಇರಲಿದ್ದಾರೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿಕೆ | Seat sharing with BJP is 110 percent on says Capt Amarinder Singh


ಬಿಜೆಪಿಯೊಂದಿಗೆ 110 ಪ್ರತಿಶತ ಮೈತ್ರಿ; ರೈತರೂ ನಮ್ಮೊಂದಿಗೆ ಇರಲಿದ್ದಾರೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿಕೆ

ಅಮರಿಂದರ್ ಸಿಂಗ್​

ಪ್ರಧಾನಿ ನರೇಂದ್ರ ಮೋದಿ ನಿನ್ನೆ (ನವೆಂಬರ್ 19) ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಮರಳಿ ತೆಗೆದುಕೊಂಡ ನಂತರ, ಮುಂಬರುವ ಚುನಾವಣಾ ಲೆಕ್ಕಾಚಾರಗಳು ಗರಿಗೆದರಿವೆ. ಅದರಲ್ಲೂ ಬಿಜೆಪಿಗೆ ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್​ನಿಂದ ಹೊರಬಂದು ತಮ್ಮದೇ ಪಕ್ಷ ಸ್ಥಾಪಿಸಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಮೈತ್ರಿಗೆ ಕೃಷಿ ತಿದ್ದುಪಡಿ ಕಾಯ್ದೆ ಅಡ್ಡಿಯಾಗಿತ್ತು. ಇದೀಗ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಘೋಷಣೆ ಮಾಡಿದ ನಂತರ, ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಲ್ಲದೇ ಅವರು, ಮಾಧ್ಯಮವೊಂದಕ್ಕೆ ಮೈತ್ರಿಯ ಕುರಿತು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ 110 ಪ್ರತಿಶತ ಸಾಧ್ಯವಾಗಲಿದೆ ಎಂದು ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಅಮರಿಂದರ್ ಸಿಂಗ್ ಬಿಜೆಪಿಯೊಂದಿಗಿನ ಮೈತ್ರಿಯ ಕುರಿತು ಮಾತನಾಡಿ, ‘‘ಬಿಜೆಪಿಯೊಂದಿಗೆ ಸೀಟು ಹಂಚಿಕೆ 110 ಪ್ರತಿಶತ ಸಾಧ್ಯವಾಗಲಿದೆ. ಈ ಹೋರಾಟದಲ್ಲಿ ರೈತರೂ ನಮ್ಮೊಂದಿಗೆ ಭಾಗಿಯಾಗಲಿದ್ದಾರೆ’’ ಎಂದು ಹೇಳಿದ್ದಾರೆ. ಕಾಂಗ್ರೆಸ್​ನಿಂದ ಬೇರ್ಪಟ್ಟು ‘ಪಂಜಾಬ್ ಲೋಕ್ ಕಾಂಗ್ರೆಸ್’ ಪಕ್ಷವನ್ನು ಸ್ಥಾಪಿಸಿರುವ ಅಮರಿಂದರ್ ಸಿಂಗ್, ಬಿಜೆಪಿಯೊಂದಿಗೆ ಕೈಜೋಡಿಸಲಿದ್ದಾರೆ. ಕಾಂಗ್ರೆಸ್ ವಿರುದ್ಧ ತೊಡೆತಟ್ಟಿರುವ ಅವರು, ಈ ಹೋರಾಟದಲ್ಲಿ ಪಂಜಾಬ್ ಲೋಕ್ ಕಾಂಗ್ರೆಸ್ ಹಾಗೂ ಬಿಜೆಪಿಯೊಂದಿಗೆ ರೈತರೂ ಕೈ ಜೋಡಿಸಲಿದ್ದಾರೆ ಎಂದಿರುವುದು ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದರೂ ಕೂಡ, ಶಿರೋಮಣಿ ಅಕಾಲಿದಳ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದೆ. ಅಲ್ಲದೇ, ಈ ಕಾಯ್ದೆ ಜಾರಿಗೆ ತರಬೇಡಿ ಎಂದು ನೇರವಾಗಿಯೇ ಸೂಚನೆ ನೀಡಿದ್ದೆವು ಎಂದು ಅಕಾಲಿದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಅಕಾಲಿದಳವು, ಸಂಸದೆ ಹರಸಿಮ್ರತ್ ಕೌರ್ ಬಾದಲ್ ಅವರಿಂದ ರಾಜಿನಾಮೆಯನ್ನೂ ಕೊಡಿಸಿತ್ತು. ಪ್ರಸ್ತುತ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವುದಾಗಿ ತಿಳಿಸಿರುವ ಅಕಾಲಿದಳದ ನಿರ್ಧಾರ, ಪಂಜಾಬ್ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ಧಾರೆ.

ಇದನ್ನೂ ಓದಿ:

ಪಂಜಾಬ್​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ: ಸ್ಪಷ್ಟ ನಿರ್ಧಾರ ಪ್ರಕಟಿಸಿದ ಅಕಾಲಿ ದಳ ಮುಖ್ಯಸ್ಥ

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್, ಸರ್ಕಾರದ ನಿರ್ಧಾರಕ್ಕೇನು ಕಾರಣ?; ಬಿಜೆಪಿಗೆ ಇದು ಲಾಭದಾಯಕವೇ? ವಿಶ್ಲೇಷಣೆ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *