ಬಿಜೆಪಿಯ ಸಣ್ಣ ಯೋಧ: ಬಿಜೆಪಿ ಸೇರ್ಪಡೆಯನ್ನು ಅಧಿಕೃತಗೊಳಿಸಿದ ಹಾರ್ದಿಕ್ ಪಟೇಲ್ | Hardik Patel set to join BJP says His Tweet Makes BJP Entry Official


ಬಿಜೆಪಿಯ ಸಣ್ಣ ಯೋಧ: ಬಿಜೆಪಿ ಸೇರ್ಪಡೆಯನ್ನು ಅಧಿಕೃತಗೊಳಿಸಿದ ಹಾರ್ದಿಕ್ ಪಟೇಲ್

ಹಾರ್ದಿಕ್ ಪಟೇಲ್

‘ನರೇಂದ್ರ ಮೊದಿ ಅವರ ನಾಯಕತ್ವದಲ್ಲಿ ಸಣ್ಣ ಯೋಧನಾಗಿ ಕೆಲಸ ಮಾಡುತ್ತೇನೆ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಗಾಂಧಿನಗರ: ಒಂದು ವಾರದ ಹಿಂದಷ್ಟೇ ಕಾಂಗ್ರೆಸ್ ತೊರೆದಿರುವ ಗುಜರಾತ್​ನ ಪಾಟಿದಾರ್ ಸಮುದಾಯದ ಪ್ರಮುಖ ನಾಯಕರಾಗಿರುವ ಹಾರ್ದಿಕ್ ಪಟೇಲ್ (Hardik Patel) ಬಿಜೆಪಿಗೆ ಸೇರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ‘ರಾಷ್ಟ್ರ, ಪ್ರಾದೇಶಿಕ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಯೊಂದಿಗೆ ಹೊಸದೊಂದು ಅಧ್ಯಾಯ ಆರಂಭಿಸಲಿದ್ದೇನೆ. ನರೇಂದ್ರ ಮೊದಿ ಅವರ ನಾಯಕತ್ವದಲ್ಲಿ ಸಣ್ಣ ಯೋಧನಾಗಿ ಕೆಲಸ ಮಾಡುತ್ತೇನೆ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪಾಟಿದಾರ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆದ ಹೋರಾಟಗಳ ಮೂಲಕ ರಾಜಕಾರಣದಲ್ಲಿ ಮುಂಚೂಣಿಗೆ ಬಂದ ಹಾರ್ದಿಕ್ ಪಟೇಲ್, ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇದೀಗ 35ರ ಹರೆಯಲ್ಲಿರುವ ಹಾರ್ದಿಕ್ ಪಟೇಲ್ 2019ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು. ಕಳೆದ ತಿಂಗಳು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು.

ಸೋನಿಯಾ ಗಾಂಧಿಗೆ ಬರೆದಿದ್ದ ಪತ್ರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಹಾರ್ದಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಉನ್ನತ ನಾಯಕರು ಮೊಬೈಲ್​ ನೋಡಿಕೊಂಡು ದಾರಿತಪ್ಪುತ್ತಿದ್ದಾರೆ. ಗುಜರಾತ್​ನ ಕಾಂಗ್ರೆಸ್ ನಾಯಕರು ಅವರಿಗೆ ಚಿಕನ್ ಸ್ಯಾಂಡ್​ವಿಚ್ ತಯಾರಿಸಿಕೊಡುವುದರಲ್ಲಿ ಮಗ್ನರಾಗಿದ್ದಾರೆ’ ಎಂದರು.

ಈವರೆಗೆ ಅಧಿಕೃತವಾಗಿ ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗುವುದನ್ನು ನಿರಾಕರಿಸಿದ್ದರು. ಆದರೆ ಇಂದು ಬಿಜೆಪಿಯನ್ನು ಅವರು ಹೊಗಳಿರುವುದು ಹೊಗಳಿರುವುದು ಪಟೇಲ್ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ‘ಬಿಜೆಪಿ ಅಥವಾ ಆಮ್ ಆದ್ಮಿ ಪಾರ್ಟಿಯ ನಡುವೆ ಯಾವುದು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಹೇಳಿದ್ದರು.

ಅಯೋಧ್ಯೆ ತೀರ್ಪು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಸೇರಿದಂತೆ ಕೇಂದ್ರ ಸರ್ಕಾರದ ಹಲವು ನಿರ್ಧಾರಗಳನ್ನು ಹಾರ್ದಿಕ್ ಪಟೇಲ್ ಖಂಡಿಸಿದ್ದರು. ಇದೇ ಹೊತ್ತಿಗೆ ‘ಕಾಂಗ್ರೆಸ್​ನಲ್ಲಿ ಮೂರು ವರ್ಷ ವ್ಯರ್ಥವಾಗಿ ಕಳೆದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಕಳೆದ ಡಿಸೆಂಬರ್​ನಲ್ಲಿ ‘ನೀಚ ರಾಜಕಾರಣ’ ಎಂದು ಬಿಜೆಪಿ ವಿರುದ್ಧ ಪಟೇಲ್ ಹರಿಹಾಯ್ದಿದ್ದರು. ಬಹಿರಂಗವಾಗಿ ಬಿಜೆಪಿಯ ಜೊತೆಗೆ ಸತತ ಅಂತರ ಕಾಯ್ದುಕೊಂಡಿದ್ದರು. ಆದರೆ ಕಳೆದ ಎರಡು ತಿಂಗಳಲ್ಲಿ ಅವರ ನಿಲುವಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಬಿಜೆಪಿ ಸೇರ್ಪಡೆ ಬಗ್ಗೆ ಕಳೆದ ಎರಡು ತಿಂಗಳುಗಳಿಂದ ಚರ್ಚೆಗಳೂ ಗರಿಗೆದರಿದ್ದವು. ಬಿಜೆಪಿಗೆ ಸೇರ್ಪಡೆಗೆ ಮೊದಲು ಅಹಮದಾಬಾದ್​ನ ತಮ್ಮ ನಿವಾಸದಲ್ಲಿ ಪೂಜೆಯೊಂದನ್ನು ಅಹ್ಮದ್ ಪಟೇಲ್ ನೆರವೇರಿಸಿದರು. ಗಾಂಧಿನಗರದ ಬಿಜೆಪಿ ಕಚೇರಿ ಎದುರು ಅಹ್ಮದ್ ಪಟೇಲ್​ರನ್ನು ಪಕ್ಷಕ್ಕೆ ಸ್ವಾಗತಿಸುವ ಪೋಸ್ಟರ್​ಗಳು ರಾರಾಜಿಸುತ್ತಿದ್ದವು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *