ಬಿಜೆಪಿ ಎಲೆಕ್ಷನ್​​​ ಪ್ರಣಾಳಿಕೆ ಆಗುತ್ತಾ ಹಿಜಾಬ್​..? ಅಂದು ಪರೇಶ್ ಮೇಸ್ತ, ಇಂದು ಸಮವಸ್ತ್ರ ಸಂಘರ್ಷ..!


2023ರ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸ್ತಿದೆ. ಈ ಹೊತ್ತಿನಲ್ಲೇ ಕರಾವಳಿಯಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಅಕ್ಷರ ಕಲಿಯೋ ಜಾಗದಲ್ಲಿ ವಸ್ತ್ರ ವಿಚಾರಕ್ಕೆ ರಾಜಕೀಯ ಕೆಸರೆರಚಾಟ ಶುರುವಾಗಿದೆ.

ಇದೀಗ ವಿದ್ಯಾದೇಗುಲಗಳಲ್ಲಿ ಭುಗಿಲೆದ್ದಿರೋ ಹಿಜಾಬ್​ ವಿವಾದ ಕೈ-ಕಮಲ ಪಕ್ಷಗಳ ನಡುವೆ ಧಾರ್ಮಿಕ ಸಂಘರ್ಷವನ್ನೂ ಸೃಷ್ಟಿಸುತ್ತಿದೆ. ಜೊತೆಗೆ ಕರಾವಳಿಯಲ್ಲಿ ಎಲೆಕ್ಷನ್​​​ ಪ್ರಣಾಳಿಕೆಯೊಳಗೆ ಹಿಜಾಬ್ ಸ್ಥಾನ ಪಡೆಯೋ ಸಾಧ್ಯತೆ ಇದೆ. ಅಂದು ಪರೇಶ್ ಮೇಸ್ತ ಅನುಮಾನಾಸ್ಪದ ಸಾವನ್ನೇ ಎಲೆಕ್ಷನ್ ಪ್ರಣಾಳಿಕೆ ಮಾಡಿಕೊಂಡಿದ್ದ ಬಿಜೆಪಿ, ಇದೀಗ ಕಾಲೇಜು ಸಮವಸ್ತ್ರವನ್ನೂ ತಮ್ಮ ಮ್ಯಾನಿಫೆಸ್ಟೋ ಮಾಡಿಕೊಳ್ಳುತ್ತಾ ಎಂಬ ಮಾತು ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿವೆ.

ಬಿಜೆಪಿ-ಕಾಂಗ್ರೆಸ್ ನಡುವೆ ಚುನಾವಣೆಗೂ ಮೊದಲೇ ಧರ್ಮಯುದ್ಧ ಆರಂಭವಾಗಿದೆ. ಮೂರು ಜಿಲ್ಲೆಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವುದೇ ಅಜೆಂಡಾ ಆಗಿ ಪರಿವರ್ತನೆ ಆಗುತ್ತಿದೆ. ಇದೀಗ ಸಮವಸ್ತ್ರ ವಿಷಯವನ್ನೇ ಬಿಜೆಪಿ ಅಜೆಂಡಾ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಿಂದು ಧರ್ಮದ ಮತಬ್ಯಾಂಕ್‌ನ ಭದ್ರಗೊಳಿಸಲು ಕೇಸರಿ ಪಡೆ ತಂತ್ರ ಹೆಣೆದಿದೆ ಎನ್ನಲಾಗಿದೆ. ಅಲ್ಲದೇ 2018ರ ಮಾದರಿಯಲ್ಲೇ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ರಣತಂತ್ರವನ್ನೂ ರಚಿಸಿದೆಯಂತೆ. 2018ರಲ್ಲಿ ಪರೇಶ್ ಮೇಸ್ತ ಪ್ರಕರಣವನ್ನ ದಾಳವಾಗಿಸಿಕೊಂಡಿದ್ದ ರೀತಿಯಲ್ಲಿ ಸಮವಸ್ತ್ರವನ್ನೂ ಬಳಸಿಕೊಳ್ಳಲು ಸಿದ್ಧತೆ ನಡೆಸ್ತಿದೆ ಎನ್ನಲಾಗಿದೆ.

ಇನ್ನು 2018ರಲ್ಲಿ ಆಗಿದ್ದೇನು? ಬಿಜೆಪಿ-ಕಾಂಗ್ರೆಸ್ ಮಧ್ಯೆ ಪರೇಶ್ ಮೇಸ್ತ ಕೇಸ್‌ ಕದನವಾಗಿ ಮಾರ್ಪಟ್ಟಿದ್ದೇಗೆ ಅನ್ನೋದೆ ಬಲುರೋಚಕ.

ಪರೇಶ ಮೇಸ್ತ ಸುತ್ತಿದ್ದ ರಾಜಕಾರಣ!

2017ರ ಡಿಸೆಂಬರ್​ನಲ್ಲಿ ಅನುಮಾನಸ್ಪದವಾಗಿ ಪರೇಶ್ ಮೇಸ್ತ ಸಾವನ್ನಪ್ಪಿದ್ದ. ಇದೇ ವೇಳೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ಆಗ ಪರೇಶ ಮೇಸ್ತನ ಸಾವು ರಾಜಕೀಯ ತಿರುವು ಪಡೆದುಕೊಂಡಿತ್ತು. 2018ರಲ್ಲಿ ಆರಂಭಗೊಂಡ ವಿಧಾನಸಭೆ ಚುನಾವಣೆಗೆ ಇದೇ ವಿಚಾರವನ್ನ ಬಿಜೆಪಿ ಅಸ್ತ್ರ ಮಾಡಿಕೊಂಡಿತ್ತು. ಮೂರು ಜಿಲ್ಲೆಗಳು ಸೇರಿದಂತೆ ಇಡೀ ರಾಜ್ಯದಲ್ಲೂ ಇದೆ ವಿಚಾರವೇ ಪ್ರಸ್ತಾಪವಾಗಿತ್ತು. ಪರಿಣಾಮ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನೂ ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲೂ ಪರೇಶ್ ಸಾವಿಗೆ ನ್ಯಾಯದ ಮಾತುಗಳು ಕೇಳಿಬಂದಿದ್ವು.

ಇದೀಗ ಇದೇ ಸ್ಟ್ರಾಟಜಿಯೊಂದಿಗೆ 2023ರ ಚುನಾವಣಾ ಕದನಕ್ಕೆ ಇಳಿಯಲು ಕಮಲ ಪಾಳಯ ಮುಂದಾಗಿದೆಯಂತೆ. ಸಮವಸ್ತ್ರ ಸಂಘರ್ಷವನ್ನೇ ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ಗೆಲುವಿನ ಮಂತ್ರ ಜಪಿಸಲು ಮುಂದಾಗಿದೆಯಂತೆ. ಹಾಗಾದ್ರೆ ಬಿಜೆಪಿಯ ಪ್ಲಾನ್ ಏನು?

ಸಮವಸ್ತ್ರ ಸಂಘರ್ಷ!
ಈಗ ಇದೇ ಮಾನದಂಡ ಮೂಲಕ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್ ಮಾಡಿದೆಯಂತೆ. ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಾಬ್ ಬ್ರೇಕ್ ಹಾಕುತ್ತೇವೆ ಎಂಬ ಅಸ್ತ್ರವನ್ನ ಪ್ರಯೋಗಿಸಲು ಮುಂದಾಗಿದೆಯಂತೆ. ಒಂದ್ವೇಳೆ ಹಿಜಾಬ್ ರದ್ದುಗೊಳಿಸುವುದು ಬೇಡ ಅಂದರೆ ಕಾಂಗ್ರೆಸ್​ಗೆ ಡ್ಯಾಮೇಜ್ ಆಗೋ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿಗರು ಪ್ರಚೋದನೆ ನೀಡ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಕರಾವಳಿಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಬಿಜೆಪಿ ಪರ ಅಲೆ ಸೃಷ್ಟಿಯಾಗುವ ಪಕ್ಕಾ ಪ್ಲಾನ್ ರೂಪಿಸಿದೆಯಂತೆ ಕೇಸರಿ ಪಾಳಯ.

 

ಒಟ್ಟಾರೆ, ಎಂಥಾ ಸೂಕ್ಷ್ಮ ವಿಚಾರವೇ ಇರ್ಲಿ ರಾಜಕೀಯ ಅಂತಾ ಬಂದ್ರೆ ಅದನ್ನೇ ದಾಳ ಮಾಡಿಕೊಳ್ಳೋಕೆ ಪಕ್ಷಗಳು ಹೊಂಚು ಹಾಕ್ತಾ ಕೂತಿರುತ್ತವೆ. ಇದೀಗ ಎಲೆಕ್ಷನ್ ಟೈಮಲ್ಲಿ ಹಿಜಾಬ್ ವಿಚಾರ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಆದ್ರೆ, ಇದನ್ನೇ ನಂಬಿ ಜನರು ವೋಟ್ ಹಾಕ್ತಾರಾ ಅನ್ನೋದೇ ಕುತೂಹಲ.

News First Live Kannada


Leave a Reply

Your email address will not be published.