ಬಿಜೆಪಿ ಕೋಮುವಾದಿಗಳು ದೇಶ ಒಡೆಯುತ್ತಿದ್ದಾರೆ; ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಸಿದ್ದರಾಮಯ್ಯ | Siddaramaiah at Congress Program Karnataka Politics slams BJP


ಬಿಜೆಪಿ ಕೋಮುವಾದಿಗಳು ದೇಶ ಒಡೆಯುತ್ತಿದ್ದಾರೆ; ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಸಿದ್ದರಾಮಯ್ಯ

ಸಿದ್ದರಾಮಯ್ಯ

ಬೆಂಗಳೂರು: ಮಕ್ಕಳನ್ನು ಕಂಡರೆ ಜವಹಾರ್​ಲಾಲ್ ನೆಹರು ಅವರಿಗೆ ಬಹಳ ಪ್ರೀತಿ, ನಂಬಿಕೆ. ದೇಶದ ಭವಿಷ್ಯ ರೂಪಿಸಬೇಕೆಂದ್ರೆ ಮಕ್ಕಳಿಂದ ಮಾತ್ರ ಸಾಧ್ಯ. ಮಕ್ಕಳು ದೇಶದ ಭವಿಷ್ಯ ರೂಪಿಸುತ್ತಾರೆಂಬ ನಂಬಿಕೆ ಇಟ್ಟಿದ್ರು. ನಾಡಿನ ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಬಯಸುತ್ತೇನೆ ಎಂದು ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಇಂದು (ನವೆಂಬರ್ 14) ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನವೆಂಬರ್ 14 ಬಹಳ ಮಹತ್ವದ ದಿನ, ನೆಹರು ಜನ್ಮ ದಿನ. ನೆಹರು ಜನ್ಮದಿನವನ್ನ ಮಕ್ಕಳ ದಿನಾಚರಣೆಯಾಗಿ ಆಚರಿಸ್ತಾರೆ ಎಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧಿ ಜೊತೆ ನೆಹರು ಹೋರಾಡಿದ್ದರು. ಗಾಂಧಿ, ಪಟೇಲ್, ಮೌಲಾನಾ ಜೊತೆ ಹೋರಾಟ ನಡೆಸಿದ್ದರು. 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಜವಾಹರ್​ ಲಾಲ್ ನೆಹರು, ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಹೋರಾಡಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಭಾರತದಲ್ಲಿ 565 ರಾಜರು, ಪಾಳೆಗಾರರು ಆಳ್ವಿಕೆ ನಡೆಸಿದ್ದರು. ರಾಜರು, ಪಾಳೆಗಾರರ ಮನಸು ಗೆದ್ದು ದೇಶ ಒಟ್ಟುಗೂಡಿಸಿದ್ದರು. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಬುನಾದಿ ಹಾಕಿದ್ದರು. ನೆಹರು, ಪಟೇಲರು ರಾಷ್ಟ್ರದ ಏಕತೆಯನ್ನು ಉಳಿಸಿ ಬೆಳೆಸಿದ್ದಾರೆ. ನೆಹರು ಅವರು ದೇಶದ ಪ್ರಗತಿಗೆ, ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬೆಳವಣಿಗೆಗೆ ಅಡಿಪಾಯ ಹಾಕಿದವರು. 17 ವರ್ಷಗಳ ಕಾಲ ನೆಹರು ದೇಶದ ಪ್ರಧಾನಿಯಾಗಿದ್ದರು ಎಂದು ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಡ್ಯಾಂ ಉಳಿದಿದ್ರೆ, ವಿಜ್ಞಾನ ಬೆಳೆದಿದ್ದೆ ನೆಹರು ಕಾರಣ. ಜವಾಹರ್​ ಲಾಲ್​ ನೆಹರು ಹಾಕಿಕೊಟ್ಟ ಅಡಿಪಾಯ ಕಾರಣ. ಬಿಜೆಪಿಗೆ ಭ್ರಷ್ಟಾಚಾರ ಮಾಡೋದು ನೀರು ಕುಡಿದಷ್ಟು ಸುಲಭ. ಭ್ರಷ್ಟಾಚಾರದಿಂದ ಸಮಾಜ ಹಾಳಾಗುತ್ತಿದೆ. ಬಿಜೆಪಿ ಕಿತ್ತೊಗೆದು, 2023ಕ್ಕೆ ನಾವು ಅಧಿಕಾರಕ್ಕೆ ಬರಬೇಕು. ಪ್ರಜಾಪ್ರಭುತ್ವ ಉಳೀಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಬಿಜೆಪಿ ಬಂದ್ರೆ ಹಿಂದೂ ರಾಷ್ಟ್ರ ಮಾಡ್ತಾರಂತೆ. ಹಾಗಾದರೆ ನಾವೆಲ್ಲರೂ ಹಿಂದೂಗಳಲ್ವಾ. ಕಾಂಗ್ರೆಸ್ ಎಲ್ಲಾ ಜಾತಿ, ಧರ್ಮಗಳಿಂದ ಕೂಡಿರುವಂತಹ ಪಕ್ಷ.  ಬಿಜೆಪಿ ಬಲಪಂಥೀಯ, ಕೋಮುವಾದಿ ಪಕ್ಷವೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇಂತಹ ಕೋಮುವಾದಿಗಳಿಂದ ದೇಶ ಉಳಿಸಲು ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಸದಸ್ಯರು, ಚಿಂತನೆ, ಹೊಸ ರಕ್ತ ಬರಬೇಕು. ಮನೆ ಮನೆಗೂ ಕಾಂಗ್ರೆಸ್ ತತ್ವ ಸಿದ್ಧಾಂತ ತಲುಪಿಸಬೇಕು. ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿಯವರು ದೇಶ ಒಡೆಯುತ್ತಿದ್ದಾರೆ: ಸಿದ್ದರಾಮಯ್ಯ ಆಕ್ರೋಶ
ಬಿಜೆಪಿಯವರು ಕೋಮುವಾದಿಗಳು, ದೇಶ ಒಡೆಯುತ್ತಿದ್ದಾರೆ. ಬಿಜೆಪಿಯವರು ದೇಶ ಒಡೆಯಲು ಪ್ರಯತ್ನ ಪಡುತ್ತಿದ್ದಾರೆ. ದೇಶದಲ್ಲಿ ಕೊರೊನಾ ಬಂದಾಗ ಪ್ರಧಾನಮಂತ್ರಿ ಚಪ್ಪಾಳೆ ತಟ್ಟಿ, ಘಂಟೆ ಬಾರಿಸಿ, ಜಾಗಟೆ ಬಾರಿಸಿ ಅಂತಾರೆ. ಇಂತಹ ಮೌಢ್ಯಗಳ ಪ್ರತಿಪಾದಕ ಮತ್ತೊಬ್ಬ ಸಿಗುವುದಿಲ್ಲ. ಆಹಾರದ ಸ್ವಾವಲಂಬನೆ ದೊರೆತಿದ್ರೆ ಅದು ನೆಹರೂರಿಂದ. ಆಹಾರ ಉತ್ಪಾದನೆ ಹೆಚ್ಚಾಗಿದ್ರೆ ನೆಹರು, ಇಂದಿರಾ ಕಾರಣ. ಮೋದಿ ದೇಶದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿದ್ದಾರೆ. ನಿಮ್ಮ ನೈತಿಕತೆಯನ್ನು ಪ್ರಶ್ನೆ ಮಾಡಿಕೊಳ್ಳಿ ಎಂದು ಇದೇ ವೇಳೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಿಸಿದ್ದಾರೆ.

ಈ ದೇಶ ಯಾವ ಕಡೆ ಹೋಗುತ್ತಿದೆ ಅನ್ನೋದು ಗೊತ್ತಿಲ್ಲ. ದೇಶವನ್ನ ಕೆಳಮಟ್ಟದ ಆರ್ಥಿಕತೆಗೆ ಕೊಂಡೊಯ್ದಿದ್ದಾರೆ. ಇಷ್ಟು ಕೆಳಮಟ್ಟದ ಆರ್ಥಿಕತೆಗೆ ಯಾರೂ ಕೊಂಡೊಯ್ದಿಲ್ಲ. ದೇಶದ ಮಹಾನ್ ಸುಳ್ಳುಗಾರ ಅಂದ್ರೆ ಪ್ರಧಾನಿ ಮೋದಿ. ಭರವಸೆ, ಆರ್ಥಿಕ ಪರಿಸ್ಥಿತಿ ಎಲ್ಲವೂ ಈವರೆಗೂ ಈಡೇರಿಲ್ಲಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

23 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದುಕೊಂಡು ಪೆಟ್ರೋಲ್, ಡೀಸೆಲ್​ ದರ ಇಳಿಕೆ ಮಾಡಲಾಗಿದೆ. ಕೇಂದ್ರ, ರಾಜ್ಯದಲ್ಲಿ ಇಂತಹ ಲಜ್ಜೆಗಟ್ಟ ಸರ್ಕಾರವಿದೆ. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಕೊಟ್ಟಿದ್ದು ಕಾಂಗ್ರೆಸ್​. ಆದರೆ ಬಿಜೆಪಿಯವರು ಇದೆಲ್ಲವನ್ನೂ ಹಾಳುಮಾಡುತ್ತಿದ್ದಾರೆ. ಬಿಜೆಪಿಯವರು ಕೋಮುವಾದಿಗಳು, ಸಂವಿಧಾನ ವಿರೋಧಿಗಳು. ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಜನ್ಮಜಯಂತಿ; ಒಂದೇ ಸಾಲಿನಲ್ಲಿ ಟ್ವೀಟ್​ ಮಾಡಿ ಸ್ಮರಿಸಿದ ಪ್ರಧಾನಿ ಮೋದಿ

ಇದನ್ನೂ ಓದಿ: 12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ; ಬೃಹತ್ ಕಾರ್ಯಕ್ರಮಕ್ಕೆ ಸುರ್ಜೇವಾಲಾ ಚಾಲನೆ

TV9 Kannada


Leave a Reply

Your email address will not be published. Required fields are marked *